Albert Camus ಉತ್ತರ ಅಮೇರಿಕಾದ ಅಲ್ಜೀರಿಯಾದಲ್ಲಿ ಜನಿಸಿದ. ಆಫ್ರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಪ್ರಾನ್ಸಿಗೆ ಬಂದ ಆತ ಪತ್ರಿಕೋದ್ಯಮವನ್ನು ಆರಿಸಿಕೊಂಡ. ನಾಜಿ ವಿರುದ್ಧದ ದಂಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ. ಕಾಮೂ ಕೃತಿಗಳು ಹೊಸ ಶೈಲಿಯ ಫಿಲೋಸಫಿಯನ್ನ ಜಗತ್ತಿಗೆ ಉಣಬಡಿಸಿದ ಕೀರ್ತಿಯನ್ನು ಹೊಂದಿವೆ. ಅಸ್ತಿತ್ವವಾದಿಯ ಸಾಮರ್‍ಥ್ಯ ಮತ್ತು ಜವಾಬ್ದಾರಿಗಳೆಂದರೆ ತನ್ನ ಜಗತ್ತನ್ನು ತಾನೆ ನಿರ್ಮಿಸಿಕೊಳ್ಳುವುದು. ಆ ಪ್ರಯತ್ನದಲ್ಲಿ ತನ್ನನ್ನು ತಾನು ತೆರೆದುಕೊಳ್ಳುವುದು. ಕುತೂಹಲವೋ ಸಾವಿನ ಅನುಭವಗಳೋ ಎಲ್ಲವನ್ನೂ ಮುಕ್ತವಾಗಿ ಎದುರಿಸುವುದು, ಆಹ್ವಾನಿಸುವುದು. ತರ್ಕದ ಹೊಸ ಅಲೆ ಪ್ಯಾರಿಸನಲ್ಲಿ ಮೇಲೆದ್ದಿತು. ಅದು ಅಲ್ಬರ್ಟ ಕಮೂ ಜಾಗತಿಕ ಸಾಹಿತ್ಯದಲ್ಲಿ ನೆಲೆನಿಲ್ಲಿಸಿದ ಹೊಸ ಮೈಲಿಗಲ್ಲು.
ಅದು ೧೯೪೨ರ ಸುಮಾರು. ಜಾಗತಿಕ ಯುದ್ದಗಳಿಂದ ಯೂರೋಪ ಸಂಪೂರ್ಣವಾಗಿ ನೆಲಕಚ್ಚಿದ ಸಂದರ್ಭ. ಹಳೆಯ ಜಗತ್ತು ಅದರ ನಿಯಮಗಳೆಲ್ಲ ಮಣ್ಣುಪಾಲಾಗಿದ್ದವು. ಪಾರಂಪರಿಕ ಜೀವನ ತತ್ವಗಳು, ಸಾಂಪ್ರದಾಯಿಕ ಬದುಕಿನ ವ್ಯವಸ್ಥೆಗಳೆಲ್ಲ ಅರ್ಥಕಳೆದುಕೊಂಡಿದ್ದವು. ಆ ಹಂತದಲ್ಲಿ ೧೯೪೨ರಲ್ಲಿ ಮೂಡಿಬಂದ ಕಮೂನ “The Outsider” ಕಾದಂಬರಿಯಲ್ಲಿ ನಾಯಕ ಹೊಸ ಕಾಲದ ಆದರ್‍ಶದ ಪ್ರತಿರೂಪದಂತೆ ಮೂಡಿಬಂದ. ಆತ ವರ್‍ತಮಾನದ ಕಣ್ಣಿಗೆ ಸಾಕ್ಷಿಭೂತವಾಧ ಸಂಗತಿಗಳ ಬಿಟ್ಟು ಬೇರೆನನ್ನೂ ನಂಬುವುದಿಲ್ಲ. ಆತ ತತ್ವಜ್ಞಾನಿಯೂ ಅಲ್ಲ. ಬರೀಯ ಸಿನಿಕನೂ ಅಲ್ಲ. ಬದುಕನ್ನು ಬಿಟ್ಟು ಬೇರೆನನ್ನೂ ಆತ ಬಯಸುವುದಿಲ್ಲ. ಆತನ ಸ್ವಭಾವ, ಸಂವೇದನೆಗಳು ಈ ಜಗತ್ತಿಗೆ ಸೀಮಿತ. ಸಂಪ್ರದಾಯವಾದಿ ಸಮಾಜದ ಸಿದ್ದಾಂತಗಳ ವಿರುದ್ಧವಾದ ಅಸಂಪ್ರದಾಯಶೀಲ ವರ್ತನೆ ಆತನದು. ಪರಸ್ಪರ ಅಗಮ್ಯವಾದ ವಿಚಾರ ಸಮಾಜ ಮತ್ತು ಆತನದು.
ಕಮೂಗೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ದಿ ಔಟ್ ಸೈಡರ ಕಾದಂಬರಿಯ ಕಥಾ ನಾಯಕ Meursault. ಎಲ್ಲರಿಗಿಂತ ಭಿನ್ನ ವ್ಯಕ್ತಿತ್ವದ ಅವಿವಾಹಿತ. ಆತನೊಬ್ಬ ಗುಮಾಸ್ತ. ಮೌಢ್ಯ ಕಂದಾಚಾರಗಳ ನಂಬದ, ಪ್ರಾಮಾಣಿಕ ವರ್ತನೆಯ, ಸ್ವಗೌರವ ಹೊಂದಿದ ಆದರ್ಶವಾದಿ ಧೋರಣೆಯ ತರುಣ. ಮದ್ಯಮ ವರ್ಗದ ಜೀವನ ನಡೆಸುತ್ತಿರುವ ಅವನಿಗೆ ಸಮಾಜದ ಗೊಡ್ಡು ಸಂಪ್ರದಾಯಗಳ ಆಚರಣೆಗಳ ಕುರಿತು ಅಲರ್ಜಿ. ಸಮಾಜ ಆತನಿಂದ ನೀರಿಕ್ಷಿಸುವ ವಿಚಾರಗಳು ಅತನಿಗೆ ಅಪಥ್ಯ. ಎಲ್ಲ ಅಸಂಗತ ಅಸಂಬಧ್ಧ ವ್ಯಕ್ತಿತ್ವದ ವ್ಯಕ್ತಿಯಾಗಿ ತನ್ನ ಸ್ವಯಂಕೃತ ಕೃತ್ಯಗಳಿಂದ ಅನುಭವಿಸುವ ಸಂಕಟಗಳು ಇಕ್ಕಟ್ಟಿನ ಸನ್ನಿವೇಷಗಳು ಭಿನ್ನ ತರ್ಕದ ಹಿನ್ನೆಲೆಯನ್ನು ಉದ್ದಿಪಿಸುತ್ತವೆ. ಕಾಲದ ಬದಲಾವಣೆಯಲ್ಲಿ ಮುಂದಿನ ತಲೆಮಾರಿಗೆ ಸಂಕೇತವಾಗಿ ನಿಲ್ಲುತ್ತಾನೆ ಆತ.
ಕಥಾ ನಾಯಕ Meursault ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೋದವ ತನ್ನ ಕರ್ತವ್ಯವಾದ ಶವ ಸಂಸ್ಕಾರದ ವಿಧಿ ವಿಧಾನಗಳಲ್ಲಿ ಆಸಕ್ತಿ ತೋರದೇ, ನೋವನ್ನು ವ್ಯಕ್ತಗೊಳಿಸದೇ ಅನ್ಯರಂತೆ ವರ್ತಿಸುತ್ತಾನೆ. ನಿರ್ಲಿಪ್ತತೆ ತೋರುತ್ತಾನೆ. ಮರುದಿನವೇ ಅಲ್ಜೀರಿಯಾಕ್ಕೆ ಬಂದು ಪಟ್ಟಣದ ಈಜುಗೊಳಕ್ಕೆ ಮಜಾ ಕಳೆಯಲು ಹೋಗುತ್ತಾನೆ. ಸಂಗಾತಕ್ಕೆ ಕರೆವೆಣ್ಣು Marie Cordonaಯನ್ನು ಕರೆಸಿ ಜೊತೆಗೂಡಿ ಹಾಸ್ಯ ಸಿನೇಮಾ ನೋಡಲು ಹೋಗುತ್ತಾನೆ. ಅವಳೊಂದಿಗೆ ಮನೆಗೆ ಬಂದು ಹಾಸಿಗೆ ಹಂಚಿಕೊಳ್ಳುತ್ತಾನೆ. ತಾಯಿಯ ಮರಣ ತನ್ನ ಮೇಲೆ ಯಾವ ಪರಿಣಾಮವನ್ನು ಬೀರಿಲ್ಲದಂತೆ ವರ್ತಿಸುವ ಆತ ಅಸಂಬದ್ಧ ವ್ಯಕ್ತಿತ್ವದ, ಅನಾದರ್ಶಗಳ ಸಾಕಾರ ಚಿತ್ರಣದಂತೆ ಕಂಡುಬರುತ್ತಾನೆ. ಆತನೊಬ್ಬ ಔಟ್ ಸೈಡರನಂತೆ.
ಸಾಮಾಜಿಕ ಬದುಕಿನ ಯಾವ ಶಿಷ್ಟಾಚಾರಗಳಲ್ಲೂ ಆಸಕ್ತಿ ಇಲ್ಲದಂತೆ ವರ್ತಿಸುವ ನಾಯಕನ ಇನ್ನೊಂದು ವ್ಯಕ್ತಿತ್ವವನ್ನು ವಿಭಿನ್ನವಾಗಿ ಕಮೂ ಕಟ್ಟಿಕೊಟ್ಟಿರುವುದು ಅಷ್ಟೇ ಕುತೂಹಲ ಹುಟ್ಟಿಸುತ್ತದೆ. ಆತನ ನೆರಮನೆಯಾತ Reymond Sintes ಒಬ್ಬ ತಲೆಹಿಡುಕ. ತನ್ನ ಅರಬ್ ಗೆಳತಿಗೆ ಹಿಂಸಿಸಿದ್ದಕ್ಕಾಗಿ ಆತ ಬಂಧಿಸಲ್ಪಟ್ಟಿದ್ದಾನೆ. ಅಂತಹ ವ್ಯಕ್ತಿಯ ಪರ ಸಾಕ್ಷಿ ನುಡಿಯುತ್ತಾನೆ. Reymond Sintes ಮೇಲೆ ಆತನ ಅರಬ್ ಸ್ನೇಹಿತೆಯ ಸಹೋದರ ಹಾಗೂ ಇನ್ನೊಬ್ಬ ವ್ಯಕ್ತಿ ಹೊಂಚು ಹಾಕುತ್ತಿದ್ದಾರೆ. ಅದನ್ನು ತಿಳಿದ ಆತ ಅವರೊಂದಿಗಿನ ಮುಖಾಮುಖಿಯನ್ನು ತಪ್ಪಿಸಿಕೊಳ್ಳುತ್ತಾನೆ. ಆದರೆ Meursault ಆ ವ್ಯವಹಾರಗಳಲ್ಲಿ ತಾನಾಗಿಯೇ ತೂರಿಕೊಳ್ಳುತ್ತಾನೆ. ಅವರಲ್ಲೊಬ್ಬನನ್ನು ಆತ ಕೊಂದಿದ್ದಾನೆ. ಅದಕ್ಕೆ ಆತ ಕೊಡುವ ಕಾರಣ ಸೂರ್ಯ. ಅರಬ್ ಇತನ ಮೇಲೆ ಚಾಕುವಿನ ದಾಳಿ ಮಾಡುತ್ತಲೂ ಸೂರ್ಯ ತನ್ನ ತೀಕ್ಷ್ಣ ಪ್ರಭೆಯನ್ನು ಹೊರಸೂಸಿದ್ದಾನೆ. ಚಾಕುವಿನ ಮೇಲೆ ಬಿದ್ದ ಕಿರಣಗಳು ಕಣ್ಣನ್ನು ಮಸುಕಾಗಿಸಿವೆ. ಅರಿವಿಲ್ಲದೇ ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಆತ ಅರಬ್‌ನ ಮೇಲೆ ಗುಂಡು ಹಾರಿಸುತ್ತಾನೆ ಆದರೆ ಕೋರ್ಟು ಆತನ ವಾದವನ್ನು ಒಪ್ಪುವುದಿಲ್ಲ. ಆತ ಮರಣದಂಡನೆಗೆ ಗುರಿಯಾಗುತ್ತಾನೆ. ಬರಿಯ ಆ ಕೊಲೆಗಾಗಿ ಮಾತ್ರವಲ್ಲ. ತಾಯಿಯ ಮರಣ ಸಂದರ್ಬದಲ್ಲಿ ಆತನ ವರ್ತನೆ. Reymond Sintes ಮತ್ತು Marie Cordonaರೊಂದಿಗಿನ ಆತನ ಸಂಬಂಧ, ಇವೆಲ್ಲವನ್ನೂ ಪರಿಗಣಿಸಿದ ನ್ಯಾಯ ನಿರ್ಣಯ ಆತನ ಮರಣದಂಡನೆಯನ್ನು ಜಾರಿ ಮಾಡುತ್ತದೆ. ಆ ಸಂದರ್ಬದಲ್ಲೂ ಆತ ಜೈಲಿನ ಪಾದ್ರಿಯನ್ನು ಭೇಟಿಯಾಗಲು ಒಪ್ಪುವುದಿಲ್ಲ. ಬದಲಿಗೆ ಓಡಿಹೋಗಲು ಒಳದಾರಿ ಇರಬಹುದೇ ಎಂದು ಹುಡುಕುತ್ತಾನೆ. ಆದರೆ ಅದು ಸಾಧ್ಯವಾಗದೇ ಇದ್ದಾಗ ಸಾವು ಖಚಿತವಾಗಿದೆ. ಆದರೂ ಪಾದ್ರಿ ಆತನಿಗೆ ಅನುಗ್ರಹಿಸುತ್ತಾನೆ ದೇವರನ್ನು ನಂಬುವಂತೆ ಹೇಳುತ್ತಾನೆ. ಆ ಕ್ಷಣದಲ್ಲೂ ಆತನಲ್ಲಿ ಉಕ್ಕಿದ ಪ್ರಶ್ನೆಗಳನ್ನು ದಿಟ್ಟ ದ್ವನಿಯಲ್ಲಿ ಪ್ರಶ್ನಿಸುತ್ತಾನೆ. “ಸಾವು ಎಲ್ಲರಿಗೂ ಖಚಿತ. ಅದೊಂದೆ ಸತ್ಯ. ಪೂಜಾರಿಯ ದೇವರು ಧರ್ಮ ಯಾವುದೂ ಯಾರನ್ನು ಸಾವಿನಿಂದ ರಕ್ಷಿಸಲಾಗದು. ಹಾಗಾಗಿ ಬದುಕು ಎಂದರೆ ಐಹಿಕ ಗೃಹಿಕೆ, ಬೌತಿಕ ಜಗತ್ತಿನ ಅನುಭವಗಳೇ” ಎಂದು ವಾದಿಸುತ್ತಾನೆ. ತನ್ನ ತಲೆದಂಡದ ದಿನಕ್ಕಾಗಿ ಸಂತೋಷದಿಂದ ಕಾಯುತ್ತಾನೆ. ನ್ಯಾಯ ನಿರ್ಧಾರದ ಸನ್ನಿವೇಶದಲ್ಲಿ ಕಮೂ ನ್ಯಾಯಸ್ಥಾನದ ಚಿತ್ರಣ ವಿಡಂಬಿಸಿದ್ದಾನೆ. ನ್ಯಾಯಾಲಯದ ಅಧಿಕಾರಿಗಳ ನ್ಯಾಯನಿರ್ಣಯದ ವೈಖರಿಯಲ್ಲಿ ಅವರೆಲ್ಲ ವಾದಿಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ತಾಯಿಯ ಮರಣ ಆತನ ವರ್ತನೆ ಆತನ ಮತ್ತವನ ಪ್ರೇಯಸಿ ಗೆಳೆಯ ರೇಮಂಡ ಸಂಬಂಧ ಇವುಗಳೇ ವಾದವಿವಾದದ ಸಂಗತಿಗಳಾಗುತ್ತವೆ. ಆತನ ಬದುಕಿನ ಇಕ್ಕಟ್ಟಿನ ಗಳಿಗೆಗಳು ಈಗ ಕಾಡುತ್ತವೆ.
ಕಾದಂಬರಿ ಆಧ್ಯಾತ್ಮಿಕ ಸಂಗತಿಗಳ ಮೇಲೂ ಬೆಳಕು ಬಿಟ್ಟಿದೆ. ಯಾವ ಸಂಬಂಧಗಳ ಮೇಲೂ ಅಂಟಿಕೊಳ್ಳದ ಪದ್ಮಪತ್ರದಂತೆ ವ್ಯವಹರಿಸುವ ನಾಯಕ ಅನುಭಾವದ ಚಿಂತಕನಂತೆ ಕಂಡುಬರುತ್ತಾನೆ. ಸಾವು ಬಂದಾಗಲೂ ಅದನ್ನು ಸ್ಪೂರ್ತಿಯಿಂದ ಸ್ವೀಕರಿಸುವ ಮನೋದೈರ್ಯ ಆತನದು. ಸಾಂಪ್ರದಾಯಿಕ ಸಾಮಾಜಿಕ ಬದುಕಿನ ರೀತಿಗೆ ಅಸಂಗತವೆನಿಸಿದ್ದು ಆತನ ಸ್ವಭಾವ, ಅಸಂಗತ ಸಾಂಗತ್ಯಗಳಲ್ಲಿ ಸುಖಕಾಣುವ ಪರಿಕಲ್ಪನೆಗಳು ಒಳತುಡಿತದ ಯಾವುದೋ ಜಿಜ್ಞಾಸೆಗೆ ತಲ್ಲಣಿಸುತ್ತಿರುತ್ತವೆ. ಅದು ಅಸ್ತಿತ್ವವಾದದ ಮೂಲಸ್ತರ. “Existance over essence”
*****