ಧಗೆಯ ಒಡಲು ಈ ಧಾರಿಣಿಯ ಮಡಿಲು
ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು,
ಬೇಯುತ್ತಿರುವ ಒಡಲ ಬೆಂಕಿಯ
ಹಳದಿ ನೀರಾಗಿ ಉಗುಳುತ್ತಾಳೆ.
ನನ್ನ ಮೇಲಿನ ಹಸಿರು ಬರೀ ತೋರಿಕೆ
ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ.
ಆದರೂ ಇವಳಿಗಂಟಿ ತಾವೂ ತಿರುಗುತ್ತಿರುವ
ಈ ಹುಲು ಮಾನವರಿಗೇನೋ ಭ್ರಮೆ
ನಾವು ತಿರುಗುತ್ತಿಲ್ಲ ನಿಂತಿದ್ದೇವೆ.
ಇವಳ ತಲೆ ಮೇಲೇ ಮನೆ ಮಠ ಕಟ್ಟಿದ್ದೇವೆ.
ದೇಗುಲದ ಗೋಪುರ ಗೂಟ ಹೊಡೆದಿದ್ದೇವೆ
ಈ ಇವಳ ಓಲಾಡುವ ಒಡಲಿಗೇ ಲಂಗರು
ಹಡಗ ಬಿಗಿದಿದ್ದೇವೆ.
ಅವಳು ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ
ನಿದ್ರಿಸಿ ಎದ್ದಿದ್ದೇವೆ. ಕೋಳಿ ಕೂಗಿಸಿದ್ದೇವೆ
ಕಾಫಿ ಕಾಯಿಸಿದ್ದೇವೆ. ಆ ಸೂರ್ಯನಿಗೆ ನಮಸ್ಕಾರ
ಹಾಕಿದ್ದೇವೆ ಕಾಲಿಗೆ ಕೈಗೆ ನೀರು ಹೊಯ್ದಿದ್ದೇವೆ.
ಅವನ ನಿನ್ನ ಈ ಮಸೆದಾಟದ ನಡುವೆ
ನಾವು ಮುಗಿಸಬೇಕಿದೆ ನಮ್ಮ ದಿನಚರಿ
ನಿಮ್ಮ ಮಿಲನದ ಏರುಪೇರಿಗೇ ಆ ಸೂರ್‍ಯ
ಬಸವಳಿದು ನಿನ್ನೊಡಲಿನ ಬೆಂಕಿಗೆ ಸಮ ಸಮ
ತನ್ನೊಡಲಿನ ಬೆಂಕಿ ಸುರಿದು ನಿನ್ನಧರಾಮೃತ
ಪಾನದಿಂದ ಕೆಂಪೇರಿ ಕುಡುಕನಂತೆ ಬೀಳುತ್ತಾನೆ.
ಆಗ ನಿನಗಾದ ನಿರಾಸೆಯೇ ಕತ್ತಲಾಗಿ
ಹಬ್ಬಿ ನಿನ್ನ ತಬ್ಬುತ್ತದೆ. ಮತ್ತೆ ಅವನ, ಆ
ಹಳೇ ಗಂಡನ ಪತ್ತೆಯಾಗುವವರೆಗೆ ನಿನಗೆ
ತೂಕಡಿಕೆ ಆ ಅರೆ ಎಚ್ಚರದಲ್ಲಿ ನಿನ್ನ ಮೈ ಮೇಲೆ
ಎಲ್ಲಾ ಅವ್ಯವಹಾರ, ಒಂದೆರಡೆ ಜಾವ, ಮತ್ತೆ
ಇಬ್ಬನಿಯಲಿ ಮೈ ತೊಳೆದು ಹೂ ಸುಗಂಧ ಪೂಸಿ
ಕಣ್ಣರಳಿಸಿ ಅವನು ಬಂದನೆಂದರೆ ನಿನಗೆ
ಸಡಗರ ಹೊಸ ಯೌವನ, ಯುಗಯುಗ
ಗಳಿಂದ ನಡೆದ ಮೈಥುನ
ಬೇಸರವೇ ಬಾರದ ಮುಪ್ಪೇ ಇರದ
ನಿಮ್ಮಿಬ್ಬರ ಈ ಮಿಲನ.
*****
-ಗಾಂಧಿಬಜಾರ್ ಪತ್ರಿಕೆ