ಅಮವಾಸ್ಯೆ ಎಂದರೆ… ಕತ್ತಲು ಕಗ್ಗತ್ತಲು, ಭಯಾನಕ, ಕೇಡು, ಭಯ ಎಂದೂ… ಇದು ಸರಿಯಲ್ಲ. ಎಲ್ಲ ಅಮವಾಸ್ಯೆಗಳ ಲೆಕ್ಕ ಒಂದಾದರೆ… ಭೀಮನ ಅಮವಾಸ್ಯೆಯ ಕತೆ ಬೇರೇನೇ ಇದೆ.
ಭೀಮ- ಮಹಾಭಾರತದಲ್ಲಿ ಬರುವ ಶೂರ ಧೀರ ವೀರ ಗದೆ ಹಿಡಿದ ಶಕ್ತಿಮಾನ್, ದ್ರೌಪದಿ ಒಮ್ಮೆ ನನಗೆ ಬಲವಾದ ಗಂಡ ದೊರೆಯುವಂತಾಗಲಿ ಎಂದು ವ್ರತ ಆಚರಿಸಿದಳು. ಅದರಂತೆ ರಾಹುಕೇತು ಪ್ರತ್ಯಕ್ಷರಾಗಿ “ತಥಾಸ್ತು” ಎಂದರು. ಅದರಂತೆ ಬಲಭೀಮನೇ ಗಂಡನಾಗಿ ದ್ರೌಪದಿಗೆ ಸಿಕ್ಕಿದನೆಂಬ ಕಥೆಯುಂಟು.
ದ್ರೌಪದಿಗೆ ಐವರು ಗಂಡಂದಿರಿದ್ದರೂ ಭೀಮನ ಮೇಲೆ ಅತೀವಾದ ಜೀವವಿತ್ತು ಎಂಬುದು ಮಹಾಭಾರತದ ಕಥೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ದ್ರೌಪದಿ ಅಮವಾಸ್ಯೆಯ ದಿನ ಭೀಮನನ್ನು ಪೂಜಿಸಿ ನೆನೆದು ತನ್ನ ಕಷ್ಟ ಅವಮಾನವನ್ನು ಹೇಳಿಕೊಳ್ಳುತ್ತಿದ್ದಳು! ಹೀಗಾಗಿ ಇದು “ಭೀಮನ ಅಮವಾಸ್ಯೆಯಾಯಿತು” ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಈ ಭೀಮನ ಅಮಾವಾಸ್ಯೆ ಬರುವುದು ಪ್ರತಿವರ್ಷ ಆಷಾಢದ ಅಂತಿಮದ ಕಾಲಘಟ್ಟದ ದಿನದಂದು. ಅಮವಾಸ್ಯೆ ಆಷಾಢವನ್ನು ಕಳಿಸಿದ ಶುಭ ದಿನವನ್ನು ಅದು ನೆನಪಿಸುವುದು.
ಹಿಂದೆ-ಬಲು ಹಿಂದೆ ನಮ್ಮ ಜನಪದರು “ಗಂಡನ ಪಾದ ಪೂಜೆಯ ಮಾಡಬೇಕಮ್ಮಾ… ಗಂಡನ ಮನಸು ಒಳಿತಾಗಿದ್ದರೆ ನೀನಾಗುವೆ ಮುತ್ತೈದೆಯಮ್ಮ ನಿನ್ನಯ ಹರಕೆ ಹಾರೈಕೆ ಆತನಿಗೆ ಭೀಮಬಲವಮ್ಮಽ… ನೀ ತಿಳಿ ತಂಗಿವ್ವ… ಗಂಡನ ಗೆದ್ದವಳು ಕೈಲಾಸ ಗೆದ್ದವಳು ಮೂಜಗವ ಗೆದ್ದವಳು… ಗಂಡನ ತೇಜಸ್ಸು ನಿನ್ನಯ ಶ್ರೇಯಸ್ಸು ಪೂಜೆಯ ಫಲವಮ್ಮ…” ಎಂದು ಹಾಡುತ್ತಿದ್ದುದ್ದನ್ನು ಗಂಡನ ಪೂಜಿಸಿ ಆಶೀರ್ವಾದ ಪಡೆಯುತ್ತಿದ್ದುದ್ದನ್ನು ನಾನು ಸುಮಾರು ಐದಾರು ದಶಕಗಳಿಂದ ಕಂಡುಂಡವನಾಗಿದ್ದೇನೆ.
ಇಲ್ಲಿ ನಂಬಿಕೆಯೇ ವ್ರತ-ಪೂಜೆ-ಆಚರಣೆ-ಸಂಪ್ರದಾಯ-ಒಳಿತು-ಬಾಳ್ವೆ- ದಾಂಪತ್ಯ-ಪ್ರೀತಿ-ಪ್ರೇಮ-ನೆಮ್ಮದಿ-ತೃಪ್ತಿ-ಆನಂದ-ಬಿಡುಗಡೆ ಎಂದು ನಂಬಿ ನಚ್ಚಿ ನಡೆಸುವ ಎಷ್ಟೋ ಹಳ್ಳಿ ಪಟ್ಟಣ ನಗರ ದೇಶಗಳಿವೆ.
ಆಷಾಢದಲ್ಲಿ ಹೆಂಡತಿ ಕಡ್ಡಾಯವಾಗಿ ನಾಲ್ಕೈದು ವಾರ ತವರು ಮನೆ ಸೇರಬೇಕೆಂಬ ನಿಯಮವಿದೆ.
“ಆಷಾಢವೆಂದು ಕಳೆವುದು ಅಮ್ಮಯ್ಯ ಗಂಜಿಯ ಕುಡಿದರೂ ಗಂಡನೂ ಇರಬೇಕು. ಗಂಡನ ಆಗಲಿಕೆ ಬೇಸರಿಕೆ ತಂದಿರಲು ಆಷಾಢದ ಗುಮ್ಮವೇಕೆ ಹಡೆದವ್ವಽಽ….” ಎಂದು ಗರತಿಯೊಬ್ಬಳು ಹಾಡಿ ಕಣ್ಣೀರ ಕೋಡಿ ಹರಸುವುದಿದೆ.
“ಆಷಾಢ ಕಳೆದು ದಿನವಾಗಿಲ್ಲ ಗಂಡನಾಗಲೆ ಅತ್ತೆಯ ಹೊಸ್ತಿಲಲ್ಲಿ… ಅಳಿಯ ಬಂದಿಹನು ಆಷಾಢ ಕಳೆದಿಹದ ಪೂಜೆಗೆ ಬನ್ನಿರಿ ನೀವೆಲ್ಲ… ಆರತಿ ಎತ್ತಿರಿ ದಿನವೆಲ್ಲ….” ಎಂದು ಅತ್ತೆಯು ಸಡಗರದಿ ಹಾಡುವ ಪರಿಯು ಕತೆಯಾಗಿ ಹರಿಯುವುದು.
ಎಲ್ಲ ಅಮವಾಸ್ಯೆಗಳಂತಲ್ಲ ಇದು ಭೀಮನ ಅಮವಾಸ್ಯೆ ಒಳಿತಿನ ಲೆಕ್ಕ. ಮಂಗಳಪ್ರದಾಯಕವೆಂದೇ ಇದು ಸಿದ್ಧಿ ಪ್ರಸಿದ್ಧ ವರಸಿದ್ಧಿ ಅಮವಾಸ್ಯೆಯಾಗಿದೆ.
*****