ಕರಿಯಪೂರ ನಗರದಲ್ಲಿ |
ಕಽವರವರು ಪಾಂಡವ್ರವರು |
ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧||
ಪರಮಪಾಪಿ ಶಕುನಿ ತಾನು|
ಫಾಶಾದೊಳಗ ಫಕೀರನಾಗಿ|
ಧರ್ಮರಾಜ ಧರುಣಿ ದೌಽಪತಿನ ಸೋತರ ||೨||
ಸೋತನಂತ ದುರ್ಯೋಧನ|
ಸಂತೋಷದಿಂದ ಕೇಳಿದಾನ|
ದೂತನ್ಹಚ್ಚಿದಾರು ಮಾರು ಬದುಕ ತರಸ್ಯಾರ ||೩||
ನಿಂಬೆಣ್ಹಂತ ಕೊಂಬೆಣ್ಹಂತ|
ಆನಿಹಂತ ನಿನ್ನ ನಡಗಿ|
ಜಾಣಮುತ್ತಿನಂಥ ರಂಬಿ ಬಾರ ದ್ರೌಪತಿ ||೪||
ಹೆಚ್ಚು ಕುಂದ್ಯಾನಾಡದಿಽರು|
ಹೆರವರ್ಹೆಣ್ಣಾ ನೋಡದಿಽರು|
ಹಲ್ಲ ಕಿತ್ತ್ಯಾರೈವರವರು ಬ್ಯಾಡೋ ದುಸುವಾಸಾ ||೫||
ಹೆಣ್ಣ ಬಾಲಿ ಇಽವಳಿಗೆ|
ಹೆಮ್ಮಿಯಾದ ಮಾತನ್ಯಾಕ|
ಕಣ್ಣ ಚಿವುಟಿ ದುರ್ಯೋಧನ ಸೆದರಿಗೊಪ್ಪ್ಯಾನ ||೬||
ಹೀನ ದುಸುವಾಸ ನಿನ್ನ|
ರಗತಿನೊಳೆಗೆ ನಿಲಿಯ ಹಿಂಡಿ|
ಕರಳ ತೆಗೆದು ಮಾಲಿಮಾಡಿ ಧರಿಸೇನಂದಳ ||೭||
ಮುದ್ದೆ ಮುಖದೆ ಮಾನವರಿಗಿ|
ಮುಂದೆ ಮಾಡಿ ತಂಜದೆವೆಂದ|
ಇಂದ ನಿಮಗ ಬಿನ್ನವೆಂದು ಕೈಯ ಮುಗಿದರ ||೮||
ನೀರಬೊಬ್ಬಿ ಇಕ್ಕತಾರ|
ಲಡ್ಡನಾದರು ಕಡವುತಾರ|
ಆಗ ದ್ರೌಽಪತಿಯ ಸೀರಿ ನೆಳೆಯುತಿದರ ||೯||
ಆಗ ಮಾಽಡಿಽದ ಪಾಪ|
ಈಗ ಬಂದು ಒದಗಿತೇನ|
ಕೃಷ್ಣದೇವನ ಪಾದಕ್ಹೋಗಿ ಎರಗಲೇೆನ ||೧೦||
ಹರಿಯ ಹರಿಯ ಅನ್ನುತಾಳ|
ಹರಿಗೆ ಮೊರೆಯನಿಡುವುತಾಳ|
ಧರಿಯ ಮ್ಯಾಲ ಬಿದ್ದು ದ್ರೌಪತ್ಹ್ಯೊರಳತಿದ್ದಳ ||೧೧||
ಆಽಕಾಶ ಬಣ್ಣ ಸೀರಿ|
ಲೋಕದಾಗ ಇಲ್ಲ ಸೀರಿ|
ಸಾಕ್ಷ ಕೊಽಟ್ವಂತ ಸೀರಿ ಸಂವಿಯಲ್ದ್ಹೋದವ ||೧೨||
ಹಾದಿ ಇಂಜಾನ ಕಾಯೊ|
ಗಿಡದ ಮಂಜಾನ ಕಾಯೊ|
ಹಿಂಡ ದೈತ್ಯರುಳುವಂಥ ದೇವ ನೀ ಕುಯೊ ||೧೩||
*****
ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ಅವಳ ಸೀರೆಯನ್ನು ಸೆಳೆದ ಕತೆಯಿದು. ಇದರಲ್ಲಿ ಎಂಟನೆಯ ನುಡಿಯೊಂದನ್ನು ಬಿಟ್ಟರೆ ಉಳಿದೆಲ್ಲ ಹಾಡಿನ ಭಾವವು ಸಹಜವಾಗಿ ಲಕ್ಷ್ಯಕ್ಕೆ ಬರುವಂತಿದೆ. ಆದರೆ ಎಂಟನೆಯ ನುಡಿಯಲ್ಲಿ ಭೀಷ್ಮಾದಿಗಳನ್ನು ಕುರಿತು ದ್ರೌಪದಿಯು ಆಡಿದ ಮಾತು ಹೇಳಲ್ಪಟ್ಟಿದೆಯೋ ಎನೋ. ಹಾಗೆ ತಿಳಿದುಕೊಂಡರೆ ಅರ್ಥವು ಸುಲಭವಾಗುವುದು.
ಛಂದಸ್ಸು :- ಭೋಗಷಟ್ಪದಿ.
ಶಬ್ದ ಪ್ರಯೋಗಗಳು :- ಕರಿಯಪೂರ=ಹಸ್ತಿನಾವತಿ. ಫಾಶ=ಪಗಡಿ ಆಟಡೊಳಗಿನ ಗಾಳುಗಳು. ಫಕೀರ=ಕಾಡುವ ಸನ್ಯಾಸಿ. ದಾರು ಮಾರು ಬದುಕು=ಸ್ಥಾವರಜಂಗಮ ಆಸ್ತಿ. ಕುಂದ್ಯಾನಾಡದಿರು=ಕುಂದಿಡಬೇಡ. ಸದರು=ಮುಖ್ಯ ಸ್ಥಳ. ರಗತ=ರಕ್ತ. ಲಡ್ಡ=ಚಬಕ. ಇಂಜಾನ=ಇಂಧನ. ಮಂಜಾನ=ಮಂಜು(ಮಬ್ಬು).