ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ.
ಇವುಗಳ ಸುತ್ತವೇ ಸುತ್ತುವ ಜ್ಞಾನೀ.
ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು
ನಿನ್ನ ಲೆಕ್ಕ ಮುಗಿಯುವುದು ಯಾವಾಗ ?
ಲೆಕ್ಕ ಮಾಡುತ್ತೀಯ ?
ನಿನ್ನಪ್ಪನ ಪಗಾರೆಷ್ಟು? ಮನೆಯ ಬಾಡಿಗೆ ಎಷ್ಟು?
ಇಲಕ್ಟ್ರಿಕ್ ಬಿಲ್ ಎಷ್ಟು ? ಕೊನೆಗೆ ಉಳಿಯುವುದೆಷ್ಟು ?
ಮಿಗಿಲಾಗಿ, ತಲೆ ತುಂಬುವ, ತಲೆ ತಿನ್ನುವ ಸಮಸ್ಯೆಗಳೆಷ್ಟು ?
ಅದಕ್ಕೆ ಪರಿಮಿತಿ ಉಂಟೆ ? ಹೇಳು- ಇತಿಮಿತಿ ಉಂಟೆ ?
ಒಮ್ಮೆ ಪೆನ್ನು ಮುಚ್ಚು, ಕಣ್ಣ ಬಿಚ್ಚು
`ಅಬ್ಬ ! ಆಹಾ’ ಆಕಾಶ ನೋಡು – ಈ ಭೂಮಿ ನೋಡು
ಎತ್ತರ ಅಳೆ- ಆಷ್ಟೆ
ಎತ್ತರ ಬೆಳೆ
ಆಕಾಶಕ್ಕೆ ಮೇರೆ ಎಲ್ಲಿ ? ನಕ್ಷತ್ರಗಳ ಸಂಖ್ಯೆ ಎಷ್ಟು ?
ಇಷ್ಟು ಸಣ್ಣ ತಲೆಯಲ್ಲಿ ಅಂಥಂಥ ಘನ ವಿಚಾರ
ಹೊಳೆಯುವುದು ಹೇಗೆ ? ಅಲ್ಲ-
ಅವೆಲ್ಲ ತುಂಬಿದ್ದು ಹೇಗೆ?
ಲೆಕ್ಕ ಸಾಧ್ಯವಿಲ್ಲ ಅದಕ್ಕೆ ಸೂತ್ರ ಇಲ್ಲ
ಇದ್ದಲ್ಲಿ
ಗುಣಿಸು ಭಾಗಿಸು
ಕೂಡು-ಕಳೆ
ಬದುಕಿ ನುತ್ತರ ಏನು?
ಗಣಿತಜ್ಞ.
ನೀನು ಇಂಥಲ್ಲಿ ನಿನ್ನ ಲೆಕ್ಕದ ಗಣಿ-ತಜ್ಞನಾಗುವುದೇ ಜಾಸ್ತಿ
ನೀನು ಬೆಟ್ಟ ಏರಲಾರೆ-ನದಿ ಇಳಿಯಲಾರೆ
ಪ್ರತಿ ದಿವಸ ಮುಳುಗುವ ಸೂರ್ಯನ ಕಿರಣ ಎಣಿಸಲಾರೆ
ತಂಗಾಳಿಯ ಪಿಸುಮಾತಿಗೆ ವ್ಯಾಖ್ಯೆ ಕೊಡಲಾರೆ
ಇವೆಲ್ಲದರ ಒಳಗೆ ಅವಿತ
ನಿನ್ನ ಸಂಖ್ಯೆಗಳು, ಎಂದೂ ಸುಳ್ಳಾಗದ ಸಿದ್ಧಾಂತ
ಪಾಪ! ನೀ ರಚಿಸುವ ವೃತ್ತದ ಪಥವೇ ನೀನು
ನೀನು ಹಾರಲಾರೆ ತಪ್ಪಿಯೂ
ಬೀಳಲಾರೆ
ಒಂದು ಭಾಗಿಲೆ ಝೀರೋ (೧/೦)
ಝೀರೋ ಭಾಗಿಲೆ ಝೀರೋ (೦/೦)
ಉತ್ತರ ಎಷ್ಟು ?
ನಿನ್ನ ಲೆಕ್ಕ ಮುಗಿಯುವುದಿಲ್ಲ
ಅಸಂಬದ್ಧ-ಅನಿಶ್ಚಿತ-ಅನಂತ
ಹೊರಗೆ ಬರದ ನಿನ್ನ ಲೆಕ್ಕಾಚಾರ
ನನಗೆ ನಿರ್ಜೀವ – ಪೂರ ನಿಶ್ಚೇತ
*****