೧
ಕೂಗುತಲಿದೆ ಕಹಳೆಯು-
ನವಯುಗ ವೈತಾಳಿಯು!
‘ಬಾಳಿದು ಕಾಳೆಗದ ಕಣ!’
ಹೇಳುತಿರುವುದಿಂತಾ ಸ್ವನ !
ಕೂಗುತಲಿದೆ ಕಹಳೆಯು….
ನಮಯುಗವೈತಾಳಿಯು!
೨
‘ಬೇಡ ಕದನ’ ಎಂದೊರೆವಾ
ಕೇಡುಗಾರನೆಲ್ಲಿರುವ….?
ಹೇಡಿ ಏನ ಬಲ್ಲನವ?
ನಾಡಿಗೆ ಕಾಳೆಗವೆ ಜೀವ!
ಕೂಗುತಲಿದೆ ಕಹಳೆಯು….
ನವಯುಗವೈತಾಳಿಯು!
೩
ಗೆಳೆಯರಂತೆ ನಟಿಸುತೆ ಹಗೆ-
ಬಳಗ ನಮ್ಮ ಬೀಡಿನೊಳಗೆ
ತಿಂದು ತೇಗಿ ಬಾಳುತಿದೆ…
ಕೊಂದೆಲ್ಲರನಾಳುತಿದೆ!
ಕೂಗುತಲಿದೆ ಕಹಳೆಯು
ನವಯುಗವೈತಾಳಿಯು!
೪
‘ಈ ಸ್ಮಶಾನ ಶಾಂತಿಯು
ಶಾಂತಿಯೆ ಇದು? ಭ್ರಾಂತಿಯು!
ನಿಮ್ಮೆಲ್ಲರ ಮಾನವತನ
ಬೇಯುತಲಿದೆ ನೋಡಿರದನ’….
ಕೂಗುತಲಿದೆ ಕಹಳೆಯು,
ನವಯುಗವೈತಾಳಿಯು!
೫
‘ಬದುಕಿದುದಕೆ ಕುರುಹಾವುದು ?
ಕದನವೆ ಸರಿ ಬೇರಾವುದು ?
ಬೇಡ ಕದನವೆಂಬ ರೀತಿ-
ಹೇಡಿಯದಿದು ಹೆಣದ ನೀತಿ!’
ಕೂಗುತಲಿದೆ ಕಹಳೆಯು,
ನವಯುಗವೈತಾಳಿಯು!
೬
‘ಅಕ್ಕ-ತಾಯಿ-ತಂಗಿದರು
ಅಕ್ಕರೆಯಾ ಅಂಗನೆಯರು-
ನಿಮ್ಮ ಬಲುಹು ಬೀರತನ
ನೋಡಿ ನಲಿವವಂಬರು ದಿನ.’
ಕೂಗುತಲಿದೆ ಕಹಳೆಯು,
ನವಯುಗವೈತಾಳಿಯು!
೭
‘ಬಿಡಿರಿ ಬಿಡಿರಿ ಹಳೆಯಾಯುಧ
ಕೊಡಲಿ ಕತ್ತಿ ಬಿಲ್ಲು ಗದಾ-
ಹೊಸತು ಕಾಲ, ಹೊಸ ಕಾಳೆಗ,
ಹೊಸಕೈದುನ ಹುಡುಕಿರೀಗ,
ಕೂಗುತಲಿದ ಕಹಳೆಯು,
ನವಯುಗವೈತಾಳಿಯು!
೮
‘ಬಲಿದಿರುವುವೆ ಜಾಲಗಳು?
ಬಳಸಿರುವುವೆ ಬೇಲಿಗಳು?
ಹರಿದೊಗೆಯಿರಿ ಕೊಳೆತ ಜಾಲ
ಮುರಿದೇಳಿರಿ ಹುಳಿತ ಬೇಲಿ!’
ಕೂಗುತಲಿದೆ ಕಹಳೆಯು,
ನವಯುಗವೈತಾಳಿಯು!
೯
‘ಕೇಳಿ ಕೇಳಿ ಕಹಳೆಯ,
ಕೆಲದೊಳೆ ಇದೆ ಪಾಳೆಯ!
ಕಾಳೆಗಕೆದ್ದವ ಬಾಳುವ,
ಏಳದಿದ್ದರವ ಬೀಳುವ!
ಕೂಗುತಲಿದೆ ಕಹಳೆಯು
ನವಯುಗವೈತಾಳಿಯು!
*****