(ಕೆಲವು ಸಾಲುಗಳು)
ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು.
ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು.
ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ
ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ
ಕಾಲಪಥಿಕನಾ ಕಿವಿಗೆ ಮುಟ್ಟಿತಾ ಕರೆಯು, ಕೇಳಿ ಸೊಲ್ಲ
ಒಂಟಿಯಾಗಿ ಏಕಾಂತಿಯಾಗಿ ಅದರಾಳವವನೆ ಬಲ್ಲ.
ಹೊರಟ ಯಾತ್ರಿ ದಿಕ್ತಟದ ಶಕ್ತಿಯಲಿ ಮೂಕಮುಗ್ಧನಾಗಿ.
* * *
ಕಾಲ-ಜನಿತ ಮಾನವರ ಈ ಜ್ಞಾನ ಇತ್ತು ಮೊದಲು ಅವಗೆ
ಬೆಳಕು-ಮನದ ತೆರೆ ಸರಿದು ಹಿಂದೆ ಅವ ಹೊಕ್ಕನಾಗ ಒಳಗೆ.
ನಮ್ಮ ಬಗೆಗೆ ಕೇವಲದ ಕಣ್ಗೆಮರೆಯಾಗಿ ಮುಸುಕ ನಡುವೆ
ಗೂಢಗವಿಯ ಅವ ಕಂಡ, ಮತ್ತೆ ಮುಂದಾ ರಹಸ್ಯದ್ವಾರ
ಆತ್ಮನೊಳಗಿನಾ ದೃಷ್ಟಿ ದಾನದಾ ಬಾವಿ ಅದರ ಬಳಿಗೆ
ಅಲ್ಲಿ ಇತ್ತು ಶ್ರೀವಿಜಯಪಕ್ಷಿ ಕಾವ್ಗೊಡುತ ಧ್ಯಾನಲೀನ
ಇಲ್ಲ ಬೆಳಕೆ ಆಕಾಶ ಸರ್ವಸರ್ವತ್ರ ಜ್ಞಾನತಾನ.
ಪ್ರಾಣಸ್ಪಂದನವು ನಿಂತುಬಿಟ್ಟರೂ ಸಾವು ದುಮುಕ ಸಲ್ಲ.
ಉಸಿರು ಹಿಂಗಿಯೂ ಬಗೆಯು ಇಂಗಿಯೂ ಆತ ಬದುಕಬಲ್ಲ.
* * *
ದೇವರೆಚ್ಚರಿವ ಉದಯರಾಗ ಬ್ರಾಹ್ಮೀಮುಹೂರ್ತದಲ್ಲಿ
ದಿವ್ಯಘಟನೆ ಘಟಿಸುವದು ಇತ್ತು ಆ ದೇವಯಾನದಲ್ಲಿ
ತನ್ನ ಶಾಶ್ವತಿಯ ಗರ್ಭಗುಡಿಯ ನಿರ್ದೀಪ್ತ ಐಕ್ಯವಲ್ಲಿ
ಮೌನದಂಚಿನಲಿ ಮೈಯು ಚಾಚಿ ಮಲಗಿತ್ತು ಮಿಸುಕದಾಗಿ.
ನಿಶೆಯ ಮಹಮನವು ಏನೊ ಮುಂಗಂಡು ಸ್ವಯಂ ಲೀನವಾಗಿ.
ಅನಿರ್ಭೇದ್ಯವಿದು ಇದು ಅಪಾರ ಎನಿಸುವದಗಾಧ ಚಿಂತೆ
ಆ ಅಮೂರ್ತ ಆನಂತ್ಯದಾಳ ಪಾತಾಳಖಾತ ಬಂತೇ
ಕಣ್ಣು ಮುಚ್ಚಿದಾ ಧ್ಯಾನಗಮ್ಯ ಸಂಕೇತ ಚಿತ್ರದಂತೆ.
*****