೧
ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ.
ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು,
ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ,
ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ.
ಕಾಲವೇನೊ ಬಾಳ ಸೊಗಸು
ಎಲ್ಲ ಕಡೆಗು ಚೆಲ್ಲ ಬೆಳಸು,
ಬಯಸಿತದನು ಉಣಸು ಮನಸು,
ಬಳಿಯಲಿರುವ ಗೆಳೆಯರನೂ ಬರಲು ಕರೆದೆನು –
ಹೊಳೆಯ ತಡಿಯ ತೋಟದೆಡೆಗೆ ಹೊರಟು ನಡೆದೆನು.
೨
ಗೆಳೆಯರೊಡನೆ ಕೆಲೆದು ನಗುತ ಹೊಳೆಯ ಬಳಿಗೆ ಬರುತಲಿರೆ-
ಬಲದ ಬದಿಗೆ ಹೊಂದಿಯಿರುವ ತಳಿತ ಹೊಂಗೆಮರವ ಕಂಡೆ;
ತಿಳಿಯ ಹಸಿರಿನೆಳೆಯ ತಳಿರು ಬೆಳೆದ ಹಸಿರ ಬಲಿತ ತಳಿರು,
ಇಳಿಯ ಬಿಸಿಲಿನೊಳುಪ ಹೊರೆದು, ಸುಳಿವ ಗಾಳಿಗೊನೆದು ತೊನೆದು
ಸೂಸುತಿದ್ದುವಲ್ಲಿ ನಗೆಯ,
ಸೂರೆಗೈದುವೆನ್ನ ಬಗೆಯ,
ಮುಂದಕರಿಸದಾದೆನಡಿಯ;
ತಳಿರ ಸೊಬಗಿನಲಿಯೆ ನೋಟ ನೆಲಸಿ ನಿಂದೆನು;
ಚೆಲುವನಿದನು ಕಳೆದು ನಡೆವುದೆಂತು ಎಂದೆನು!
೩
ಒಡನೆ ಕೆಳೆಯರಿದ್ದರಲೆ ? ನಡೆದುಬಿಟ್ಟರವರು ಮುಂದೆ;
ತಡೆವುದೆಂತು ನಾನು ಹಿಂದೆ ? ಹಾಗೆ ನಸುವೆ ನಿಂತು ಬಗೆದೆ :
ಮನವನೆಳೆದುಕೊಂಡ ತಳಿರ ಗೊನೆಯನೊಂದ ಮುರಿದುಕೊಂಡೆ,
ಎನಿತೊ ನಲುಮೆಯಿಂದಲದನು ತನುವಿಗೊತ್ತಿಕೊಳುತ ನಡೆದೆ.
ಅಡಿಯನಿಟ್ಟೆ ಬೇಗ; ಮುಂದೆ
ನಡೆದಿರುವರ ಸಾರಿ ಬಂದೆ;
ನಡೆಯಿತೆನಿತೊ ಮಾತು ಅಂದೆ.
ಓತು ತಂದ ಗೊನೆಯ ತಳಿರನೊಂದನೊಂದನು-
ಮಾತಿನಲ್ಲಿ ಮರೆತು ಹರಿದು ಹಿಸುಕಿ ಒಗೆದೆನು.
೪
ಬಂದೆವಾಗ ಬನಕೆ; ಒಡನೆ ಬಂದ ಕೆಳೆಯರವರು ಕಲ್ಲಿ-
ನೊಂದು ಜಗುಲಿಯಲ್ಲಿ ಕುಳಿತು, ಮುಂದೆ ಸಾಗಿಸಿದರು ಮಾತು
ಕುಳಿತುಕೊಳ್ಳಲಿಲ್ಲ ನಾನು ಉಳಿದೆನವರ ಬರಿಯ ಹರಟೆ;
ಸುಳಿದು ಬರುವೆ ಬನದೊಳೆಂದು ಅಲೆದಾಡುತ ಹಾಗೆ ಹೊರಟೆ.
ಕಂಪಿನೆಲೆಯ ಗಿಡಗಳೇನು!
ಜೊಂಪಿನಲರ ಲತೆಗಳೇನು!
ಸೊಂಪ ನೋಡಿ ತಣಿದೆ ನಾನು.
ಎಡೆಯೊಳೊಂದು ಒಳುಗುಲಾಬಿಗಿಡವ ಕಂಡು ತಡೆದನು;
ಗಿಡದೊಳಿದ್ದದೊಂದೆ ಹೂವ ಬೆಡಗನೇನನೆಂಬೆನು ?
೫
ಹಸಿರುತಳಿರ ತುತ್ತತುದಿಗೆ ಮಿಸುಕಾಡುತ ಮೆಲುಗಾಳಿಗೆ-
ಎಸೆಯುವರಳ ಕಂಡು ಕಣ್ಣ ಹಸಿವು ಹೆಚ್ಚೆ, ನಿಂತೆ ಹಾಗೆ,
‘ಹಸಿರು ಸೀರೆಯುಟ್ಟು ಸೆರಗ ಮುಸುರೆ ತಾಯಿ ಮಲಗಿಸಿರಲು-
ಮುಸುಕ ಸರಿಸಿ ತಾಯ ನೋಳ್ಪ ಹಸುಳೆಯ ಮೊಗವಿದುವೊ?’ ಎಂದೆ.
ನಲ್ಲ ಬಿನದದಲ್ಲಿ ನುಡಿದ
ಲಲ್ಲೆ ವಾತುಗಳಿಗೆ ನಾಚಿ
ನಲ್ಲೆ ತನ್ನ ಸೆರಗ ಚಾಚಿ-
ಚೆಲ್ವಮೊಗವ ಮುಚ್ಚಿಕೊಳ್ಳಲು ಸೆರಗು ಸರಿದು ತೋರುವ-
ಗಲ್ಲದ ತೆರ ಬೀರಿತರಳು ಹೊಸತುಬಗೆಯ ಚೆಂದವ
೬
‘ಇನಿದುತಿನಿಸ ನಿನಗೀಯುವೆ, ಕುಣಿಕುಣಿಯುತ ಬಳಿಗೆ ಬಾರೊ!’
ಎನುತ ಕರೆಯೆ ನಮ್ಮ ಮುದ್ದ ಮಿನುಗುನಗೆಯ ಮೊಗದಿ ಬಂದು,
ಕೈಯ ನೀಡಿ ಬೇಡಲದನು, ‘ಬಾಯನು ತೆರೆ’ ಎನಲು ನಾನು,
ಬಾಯ ತರೆದು ನಿಲ್ಲಲವನ ಬಾಯಿ ಹೀಗೆ ಹೊಳವುದಲೇ?’-
ಹೀಗೆ ಎನಿತೊ ಮನದಿ ಬಗೆದೆ,
ಎವೆಯಿಕ್ಕದೆ ನೋಡುತಿರ್‍ದೆ,
ನೆಟ್ಟ ದಿಟ್ಟ ಕೀಳದಾದೆ.
ಕಳೆದೆನಿಂತದೇಸೊ ಕಾಲ; ಬಳಿಕ ಮೆ-ಲ್ಲ-ಕೆ-
ಅಲರ ಕೊಯಿದುಕೊಂಡು ಮರಳಿ ನಡೆದ ಹಿಂದಕೆ.
೭
ಎತ್ತಿಕೊಂಡು ಕೈಗೆ ಹೂವ ಮುತ್ತು ಕೊಟ್ಟೆ ಮೋಹದಿಂದೆ;
ಒತ್ತಿಕೊಂಡೆ ಗಲ್ಲಗಳಿಗೆ, ಮತ್ತೆ ಮತ್ತೆ ಮೂಸಿ ನಲಿದೆ.
ಬೆರಳಿಂದಲಿ ತಿರುಗಿಸುತಲಿ, ಮರಳಿ ಮರಳಿ ನಿರುಕಿಸುತಲಿ,
ಅರಿವು ಇರದ ತೆರದಿ ನಡೆದುಬರುತ ಕೆಳೆಯರನ್ನು ಕಂಡೆ.
ನಡೆದೆ ಇದ್ದಿತವರ ಮಾತು,
ಹರಟೆಗೆನ್ನ ಮನವೆಳಸಿತು,
ವಾದ-ಚರ್ಚೆ ಬಲು ನಡೆಯಿತು.
ಹುರುಳು ಇರದ ಹರಟೆಗಳಿಗೆ ಮನವನಾಗ ಮಾರಿದೆ;
ಅರಳಿನೆಸಳನೊಂದೊಂದನು ಹರಿದು ಹೊಸೆದು ತೂರಿದೆ.
೮
ಕೊನೆಯ ಕಾಣಲಿಲ್ಲ ಮಾತು; ದಣಿದು ನಿಲ್ಲಿಸಿದೆವು ವಾದ;
‘ಮನೆಗೆ ತೆರಳೆ ಸಮಯವಾಯ್ತೆ!’ ಎನುತಲೆಲ್ಲರೆದ್ದೆವಾಗ-
ಕೆಳಗೆ ನೆಲದಿ ಬಾಡಿ ಬಿದ್ದ ಅಲರಿನೆಸಳುಗಳನು ಕಂಡೆ ;
ಮರವೆ ತೊಲಗೆ, ನನ್ನ ಹುಚ್ಚನರಿದು ಹೀಗೆ ಎಂದುಕೊಂಡೆ :
‘ಅಲ್ಲಿ ತಳಿರ ಮುರಿದುದೇನು!
ಇಲ್ಲಿ ಹೂವ ಕೊಯ್ದುದೇನು !
ಮಾತಿಗೆ ಮರುಳಾದುದೇನು !
ಒಲಿದು ತಂದ ಚೆಲುವಿನೊಡನೆ ಬರಿದೆ ಮಣ್ಗೆ ಬೆರಸಿದೆ;
ಗಳಿಗೆಗಾಗಿ ಮಳಿಗೆ ಸುಡುವ ಮೂಳನಂತೆ ಮಾಡಿದೆ.
೯
‘ಮುರಿದು ನಾನು ಕಿಡಿಸದಿರಲು ಮೆರೆಯುತಿದ್ದಿತಲ್ಲಿ ತಳಿರು ;
ಹರಿದು ಹೊಸೆದು ಹಾಕದಿರಲು ಮಿರುಗುತಿದ್ದತಿಲ್ಲಿ ಅಲರು.
ಹಲವರಿದರ ಚೆಲುವ ನೋಡಿ ನಲಿವನಾನುತಿರ್‍ದರಲೆ ?
ಚೆಲುವ ಬೇಟೆಯಾಡಿ ಕಣ್ಗೆ ಬಲಿಯ ಸಲಿಸಿಕೊಂಡೆನಲೆ ?
ಇಳೆಯ ಕಳೆಯ ಕಿಡಿಯನೊಂದು
ತೊಳೆದು ಬಿಟ್ಟೆ ನಾನು ಇಂದು ;
ನುಡಿದೆನಿಂತು ಒಳಗೆ ನೊಂದು
ಬಗೆವ ಬಗೆಯ ಮುಗಿದ ಬಾಯ ದುಗುಡವೊಗೆದ ಮೊಗದಲಿ,
ಮುಗುದನಂತೆ ನಡೆಯುತಿರ್‍ದೆ ಆಗಿ ನಾನು ಮಾತಿಲಿ!
* * * *
ಚೆಲುವಿಗೊಲಿದು ತಳಿರ ಅಲರ ಕೊಂಡುದೇನು ತಪ್ಪೊ?
ಬಳಿಕ ಅದರ ಅಳಿವಿಗಾಗಿ ನೊಂದು ನುಡಿದುದೊಪ್ಪೊ?
*****