೧
ನನಗಾಗಿ ನನ್ನದೇ ಒಂದು
ಕನ್ನಡಿ ಬೇಕೆಂಬ
ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ
ಕನ್ನಡಿಯೇ ಇಲ್ಲವೆಂದಲ್ಲ
ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ
ಅವರಿಗಿಷ್ಟದ ಪಾದರಸ
ಇವರಿಗಿಷ್ಟದ ಮಾಪಕ
ಅವರಿಗೆ ಬೇಕೆನಿಸಿದಷ್ಟು ಹೊತ್ತು
ಕಾಯಿಸಿ ಎರಕ ಹೊಯ್ದು
ಕನ್ನಡಿ ಮಾಡಿ
ಕುಳ್ಳಿರಿಸಿದ್ದಾರೆ ಕಟ್ಟು ಹಾಕಿ.
ಬಣ್ಣ ಬಣ್ಣದ ಕನ್ನಡಿ
ಪ್ರತಿಫಲಿಸುವುದೇ ಇಲ್ಲ
ಕಟ್ಟು ಕನ್ನಡಿ!
ಆ ಬಣ್ಣದ ಕನ್ನಡಿಯಲ್ಲೇ
ನಾವೂ ನೋಡಿಕೊಳ್ಳಬೇಕೆಂದು
ಅದರಲ್ಲಿ ನೋಡಿಕೊಂಡರೆ
ಇದೇನು ಕನ್ನಡಿಯೋ
ಅವರದೇ ಭಾವಚಿತ್ರವೋ?
ಕಣ್ಕಟ್ಟೋ?
ನನ್ನದೇ ಕನ್ನಡಿಯಿದ್ದರೆ
ಇಡಿಯಾಗಿ ಬಿಡಿಯಾಗಿ
ನಾನು, ನನ್ನ ರೆಕ್ಕೆ ಪುಕ್ಕ
ಒಳಗಿನ ಸೊಕ್ಕು
ಮುರುಕು ಮುಳ್ಳು
ಅರಳು ಮುದುಡು
ಇಂಚಿಂಚೂ ನೋಡಿಕೊಳ್ಳುವ
ಹಂಬಲದಲಿ ಕಾದಿದ್ದೇನೆ
ದಾರಿ ತೋರು ಗುರುವೇ.
೨
ನಿನ್ನ ತೋರುವ
ಸಿದ್ದ ಕನ್ನಡಿ
ಎಲ್ಲಿಯೂ ಎಂದಿಗೂ
ಬಿಕರಿಗೆ ಸಿಕ್ಕುವುದಿಲ್ಲ ಕಂದ
ಕನ್ನಡಿ ಬೇಕೇಬೇಕೆಂದರೆ
ಇರುವುದೊಂದೇ ದಾರಿ
ತಕ್ಕಡಿಯಲಿ ಪ್ರತಿಕ್ಷಣ ನಿನ್ನನಿಟ್ಟು
ತೂಗಿ ಅಳತೆ ಮಾಡುತ್ತಾ
ಕಣ ಕಣಗಳಿಗೂ
ಪಾರದರ್ಶಕವಾಗಿಸುವ ಲೇಪ ಬಳಿದು
ಆ ನೋವಿಗೆ ಕಾವಿಗೆ
ನಿನ್ನೊಳಗಿನದೆಲ್ಲ ಘನವನೂ
ಪ್ರತಿಫಲನ ಮೂಡುವವರೆಗೆ
ಕರಗಿಸಿ ಕರಗಿಸಿ ತಿಳಿಯಾಗಿಸಬೇಕು.
ಕಂದ, ನೀನೇ ಕನ್ನಡಿಯಾಗಬೇಕು!
*****