ತ್ಯಾಗಮೂರ್ತಿ ಮೇರುವ್ಯಕ್ತಿ
ಶ್ರೀ ಬಾಹುಬಲಿಗೆ ವಂದನೆ.
ಜಗದ ಸುಖವ ತ್ಯಜಿಸಿ,
ವ್ಯಾಮೋಹವೆಲ್ಲ ಅಳಿಸಿ
ಮುಗಿಲೆತ್ತರಕೆ ಏರಿನಿಂತ
ಸ್ಥಿತಪ್ರಜ್ಞಗೆ ವಂದನೆ!
ದಯಾಮಯಿ ಮಹಾತಪಸ್ವಿ
ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ
ನಿತ್ಯ ಸತ್‌ಚಿಂತನ;
`ಅಹಿಂಸಾ ಪರಮೋ ಧರ್ಮ; ತ್ಯಾಗವೇ ಜೀವನ’
ಶ್ರೀ ಬಾಹುಬಲಿಯ ಬೋಧನ
ಪರಮ ಸುಖದ ಮಹಾಸಾಧನ!
ನೀನು ಇಲ್ಲ, ನಾನು ಇಲ್ಲ
ಆಸೆಯಿಲ್ಲ, ನಿರಾಸೆಯಿಲ್ಲ,
ವಾಂಛೆ ಇಲ್ಲ, ಮೋಹವಿಲ್ಲ
ಹಿಂಸೆ ಇಲ್ಲ, ದ್ವೇಷವಿಲ್ಲ, ಅಸೂಯೆಯಿಲ್ಲ;
ಎಲ್ಲ ಇದ್ದೂ ಏನೂ ಇಲ್ಲ.
ಇದುವೆ ಶ್ರೀ ಬಾಹುಬಲಿಯ ಮಹಾ ಚಿಂತನ.
ಆಗಲಿ ಅಳಿಯುತ್ತಿರುವ ಸದ್ಭಾವಗಳ
ಪುನರುಜೀವನ!
ಶಕ್ತಿಯಲಿ ಮಹಾಶಕ್ತಿಯಾಗಿ
ಬೋಧನೆಯಲ್ಲಿ ಪರಮ ಜ್ಞಾನಿಯಾಗಿ
ಅಹಿಂಸೆಯಲಿ ಅದ್ವಿತೀಯನಾಗಿ
ಅನಂತದಲಿ ಲೀನನಾಗಿ
ದಿಗಂತದಲಿ ಗೋಚರನಾಗಿ
ಮನುಜ ಕುಲಕೆ ಮಾದರಿಯಾಗಿ
ಬೆಳೆದು ನಿಂತ ಶ್ರೀ ಬಾಹುಬಲಿಗೆ
ಶಿರಸಾ ವಂದನ!
*****