ಧರ್ಮರಾಯ,
ನೀನು ನಡೆದದ್ದು ಧರ್ಮದ ಹಾದಿಯಲ್ಲಿ
ಎಲ್ಲ ಹೊಗಳುತ್ತಾರೆ ನಿನ್ನನ್ನು.
ಆದರೆ ದ್ರೌಪದಿಗೆ
ನೀನು ಮಾಡಿದ್ದು ಮೋಸ?
ಅರ್ಜುನ ಜಯಸಿ ತಂದವಳ
ಅವನಿಗೇ ಬಿಡದೆ
ತಾಯಿ ಅರಿವಿಲ್ಲದೇ ಆಡಿದ
ಮಾತಿನ ನೆವದಿಂದ
ಐವರ ಪತ್ನಿಯಾಗಿಸಿದೆ-
ಅವಳ ಕನಸುಗಳ ಒಡೆದೆ.
ಆಗ ಎಲ್ಲಿ ಹೋಗಿತ್ತು ನಿನ್ನ ಧರ್ಮ?
ಜೂಜಾಟದ ಗುಂಗಿನಲ್ಲಿ
ಅವಳನ್ನು ಒಂದು ವಸ್ತುವಾಗಿಸಿದೆ
ಪಣ ಒಡ್ಡಿದೆ, ಸೋತೆ.
ತುಂಬಿದ ಸಭೆಯಲ್ಲಿ ಅವಳ ಸೆರಗಿಗೆ
ನಿನ್ನ ದಾಯಾದಿ ಕೈ ಹಾಕಿದಾಗ
ತಲೆ ಕೆಳಗೆ ಹಾಕಿದೆ.
ಆಗ ಎಲ್ಲಿ ಹೋಗಿತ್ತು ನಿನ್ನ ಧರ್ಮ?
ಕೈ ಹಿಡಿದವಳಿಗೆ ಕಾಯಾ ವಾಚಾ ಮನಸಾ
ಕೊಡ ಬೇಕಿದ್ದ ಸಂರಕ್ಷಣೆ?
ಹೇಗೆ ಒಪ್ಪಲಿ ನಾವು ನಿನ್ನ
ಧರ್ಮರಾಯನೆಂದು?
*****