ಐವತ್ತಾರರ ಹರಯದಲ್ಲಿ
ಜೀವನ ಮೌನವಾಗಿದ್ದಾಗ
ನನ್ನ ಮನವನೊಬ್ಬ ಕದ್ದನಮ್ಮ
ಅಪರೂಪದ ಚೆಲುವನಮ್ಮ!
ಅವನು ಮಡಿಲಲ್ಲಿ ಮಲಗಿದಾಗ
ಸ್ವರ್ಗವೇ ಧರೆಗಿಳಿದಂತೆ
ನಾನೆಲ್ಲ ಮರತೆನಮ್ಮ!
ಅವನು ಮುಖನೋಡಿ ನಕ್ಕಾಗ
ತಂಪಾದ ಹವೆಯಲ್ಲಿ ಮಿಂದಂತೆ
ಪುಳಕಿತಗೊಂಡೆನಮ್ಮ!
ಅವನು ಕೈಕಾಲು ಬಡಿದಾಗ
ಸಂತಸದಿಂದ ಹೃದಯ
ತಾಳತಪ್ಪಿ ನಲಿಯಿತಮ್ಮ!
ಅವನು ಅತ್ತಾಗ
ನನ್ನೆದೆಗೆ ಬಾಣಗಳು ನಾಟಿ
ನೋವಿನಿಂದ ಚೀರಿದೆನಮ್ಮ!
ಅವನು ಕಿಲಕಿಲ ನಕ್ಕಾಗ
ಸುಂದರವಾದ ಹೂಗಳ ಕಂಡಂತೆ
ಮೈಮರೆತೆನಮ್ಮ!
ಜೀವನದಲಿ ಹೊಸ ಆನಂದ ಬಂತಮ್ಮ
ಎಲ್ಲ ಮರೆತು ಅವನದ್ದೇ ಧ್ಯಾನದಲಿ
ಜೀವನದ ಸುಖವನ್ನೆಲ್ಲ
ಸಾಕ್ಷಾತ್ಕರಿಸಿಕೊಂಡೆನಮ್ಮ!
ನಿನಗೂ ಹೀಗೆ ಆಗಿತ್ತೇನಮ್ಮ
ಮೂವತ್ತ ಮೂರು ವರುಷಗಳ ಹಿಂದೆ
ನನ್ನ ಮಗನ ನಿನ್ನ ಮಡಿಲಿಗೆ ಹಾಕಿದಾಗ?
ನನ್ನ ಸಂತಸದಲಿ ಭಾಗಿಯಾಗದೆ
ನೀನೇಕೆ ಹೋಗಿಬಿಟ್ಟೆಯಮ್ಮ?
*****