ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು
ದೇವಗಾನದಿ ಬೆಳಕ ತಂದನೇನು?
ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ
ಸೂರ್ಯನಾರಾಯಣನು ಬಂದನೇನು ?
ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ
ಹಿಮಕೆ ಮುತ್ತಿದ ತಿಮಿರರಾಸಿಯನ್ನು
ಮಾಯಮಾಡಿದ ಅಬ್ಬ! ಆದಿತ್ಯನವಗಾವು-
ದೀಡಹುದು ! ಕೇಳುವನೆ ಘನತಮವನು?
ಭಕ್ತಿ ಹಣ್ಣಾದಂತೆ ಬೆಳಕು ಸೋರಿತು ಬುವಿಗೆ
ಹಿಮಕೆ ಎರೆದಿತು ಬೆಳೆಕುಜೇನು ತುಂಬ
ಜೀವಿಗಳನೆಬ್ಬಿಸಿತು “ಏಳಿ ಕಳೆದಿದೆ ಕಾಳು
ಬನ್ನಿ ತುಂಬಿಹುದೀಗ ಅಮೃತಕುಂಭ
ನಾರಾಯಣಾದ್ರಿಯಲಿ ಆತ್ಮಪ್ರಭೆಯನು ಕಂಡು
ಪೂರ್ವನರಗಿರಿ ಮಿಂಚಿ ಬೆಳಗುತಿಹುದು
ತನ್ನಲ್ಲಿ ಆ ಬಿಂಬದೈಸಿರಿಯನುಂಡುಂಡು
ಸಾರೂಪ್ಯ ಸೌಖ್ಯದಲಿ ತೊಳಗುತಿಹುದು
ಓ! ದಿವ್ಯ ದೃಷ್ಟಿಯನ್ನು ತೆರೆದಾಗ ಪುಣ್ಯವೋ
ಪಾಪವೋ ಏನೆಲ್ಲ ಮಾಯವಾಗಿ
ಏಕಮೇವಂ ಆದ ದಿವ್ಯ ಪುರುಷನ ಇದಿರು
ಜೀವ ನಿಲುವದು ಬಾಗಿ ಭಕ್ತನಾಗಿ
ಪ್ರಕೃತಿಗೀಯಲು ನೆರವ ಕಾರುಣ್ಯದಲಿ ಪುರುಷ
ಅವಳ ಬಸಿರಲಿ ಬಹುದು ದಿವ್ಯ ಸೃಷ್ಟಿ
ಮಾಯೆಯಾವುದು ಇಲ್ಲಿ ಭಗವಂತನಾಟದಲಿ?
ನೀಡಿರಲು ನಮಗಾತ ಸತ್ಯದೃಷ್ಟಿ
ಬದರಿಕಾಶ್ರಮದಲ್ಲಿ ನೋಡಿದೆನು ಬೆಳಗಿನಲಿ
ಹಿಮಗಿರಿಯು ಬುದ್ಧನೊಲು ನಿಂತಿದ್ದಿತು
ನಿಸ್ಸೀಮವಾಗಿರುವ ಬಾನು ಬಯಲುಗಳಲ್ಲಿ
ಬಗೆವಕ್ಕಿ ಪಕ್ಕಗಳ ಕೆದರಿದ್ದಿತು
*****