ಎಲ್ಲಿ ಹೋಗಿವೆ ರೀತಿ ನೀತಿಗಳು
ಎಲ್ಲಿ ಹೋಗಿವೆ ಮೌಲ್ಯಗಳು?
ಎಲ್ಲಿ ಹೋಗಿದೆ ಸೌಜನ್ಯ
ಮಾನವೀಯತೆಯ ಮೊಳಗುವ ಪಾಂಚಜನ್ಯ?
ಹೆತ್ತವರಿಗಿಲ್ಲ ಮಕ್ಕಳು
ಗುರುಗಳಿಗಿಲ್ಲ ಶಿಷ್ಯರು
ಒಬ್ಬರಿಗಿಲ್ಲ ಇನ್ನೊಬ್ಬರು
ಆಗುತ್ತಿದ್ದಾರೆ ಸ್ವಾರ್ಥಿಗಳು
ಹೃದಯವಿಲ್ಲದ ಮಾನವರು.
ಮಕ್ಕಳಿಗಿಲ್ಲ ಹೆತ್ತವರು
ತುಂಬಿಹೋಗಿವೆ ಅನಾಥಾಶ್ರಮಗಳು!
ಹಿರಿಯರಿಗಿಲ್ಲ ಕಿರಿಯರು
ಆಶ್ರಯವಾಗಿವೆ ವೃದ್ಧಾಶ್ರಮಗಳು
ನಾಗರೀಕತೆಯ ಸಂಕೇತಗಳು!
ಕಳೆದುಹೋಗಿವೆ ರೀತಿನೀತಿಗಳು
ಕಾಣೆಯಾಗಿದೆ ಮಾನವೀಯತೆ
ಸೌಜನ್ಯತೆಯ ಮೊಳಗದು ಪಾಂಚಜನ್ಯ
ಇದೇ ಏನು ಆಧುನಿಕತೆ,
ಬೆಳೆಯುತ್ತಿರುವ ನಾಗರೀಕತೆ?
ಜಗತ್ತು ಹತ್ತಿರವಾದಂತೆಲ್ಲ
ಆಗಬೇಕೇನು ಮನಸ್ಸುಗಳು ದೂರ ದೂರ?
ಆಧುನಿಕತೆಯ ಮೈಗೂಡಿಸಿಕೊಂಡಂತೆಲ್ಲ
ಸಾಯಿಸಬೇಕೇ ನೆಚ್ಚಿಕೊಂಡಿದ್ದ ಮೌಲ್ಯಗಳ?
*****