ಸುಖದ ಸುಪ್ಪತಿಗೆಯಲ್ಲಿ
ದಶರಥನಿಗಾದರೋ ತನ್ನ ಸುಖಸಾಮ್ರಾಜ್ಯವನ್ನು ಕಂಡು ಒಂದು ರೀತಿಯ ಆನಂದ ಇನ್ನೊಂದು ಕಡೆ ಭಯ. ತನ್ನ ಸುಖ ಸಂಸಾರಕ್ಕೆ ಯಾರ ಕಣ್ಣು ತಾಗುವುದೋ ಎಂದು. ಮಕ್ಕಳನ್ನು ನೋಡಿದೆ, ಮುದ್ದಾಡಿದೆ. ದೊಡ್ಡವರನ್ನಾಗಿ ಮಾಡಿದೆ. ಸೊಸೆಯರನ್ನು ಕಂಡೆ. ಇನ್ನು ಮೊಮ್ಮಕ್ಕಳನ್ನು ಎತ್ತಿ ಮುದ್ದಾಡಬೇಕು. ಮಾನವನ ಆಸೆಗೆ ಮಿತಿಯೆಂಬುದೇ ಇಲ್ಲ. ಸಾಯುವ ಕೊನೆ ಕ್ಷಣದಲ್ಲೂ ನಾನು ಬದುಕಬೇಕೆಂದು ಜೀವ ತುಡಿಯುತ್ತಿರುತ್ತದೆ. ಅಷ್ಟು ಬೇಕೆಂಬವನಿಗೆ ಇನ್ನಷ್ಟು ಬೇಕೆಂಬಾಸೆ; ಮತ್ತಷ್ಟು ಪಡೆಯುವಾಶೆ, ಆದರೆ ಎಲ್ಲವೂ ಮಾನವನಂತೆ ನಡೆಯುವುದಾದರೆ ದೇವರಿಗೆಲ್ಲಿದೆ ಬೆಲೆ? ಅವನನ್ನು ಹಿಡಿಯುವವರಾರು? ಆದರೆ ವಿಧಿ ಹಂಚಿಕೆಯೇ ಬೇರೆ ಇರುತ್ತದಲ್ಲ ಎಲ್ಲರ ಸೂತ್ರಗಳನ್ನು ಹಿಡಿದು ಆಟ ಆಡಿಸುವ ಪರಮಾತ್ಮನಿಗಷ್ಟೇ ಗೊತ್ತು. ಮುಂದೆ ಯಾರ ಯಾರ ಬದುಕಿನಲ್ಲಿ ಏನೇನಾಗುತ್ತದೆ ಎಂದು ಮೇಲಿರುವ ಸೂತ್ರಧಾರ ಆಡಿಸಿದಂತೆ ಆಡಬೇಕು. ಕುಣಿಸಿದಂತೆ ಕುಣಿಯಬೇಕು. ದಶರಥನಿಗಾದರೋ ಉಜ್ವಲವಾದ ಬಯಕೆಗಳಿದ್ದವು. ಕನಸುಗಳ ಗೋಪುರವೇ ಎದುರಿಗಿತ್ತು. ನನಗೆ ಮುಪ್ಪಿನ ಕಾಲ ಬಂತು ನಾನೀಗ ಗೃಹಾಸ್ತಾಶ್ರಮ ತ್ಯಜಿಸಿ ವಾನಪ್ರಸ್ತಾಶ್ರಮ ಸೇರಬೇಕು. ಇನ್ನು ನನ್ನಿಂದ ರಾಜ್ಯಭಾರ ನಿರ್ವಹಿಸಲು ಆಗುವುದಿಲ್ಲ. ನನ್ನ ಪ್ರೀತಿಯ ಪತ್ರ ರಾಜ್ಯದ ಕಣ್ಮಣಿ ರಾಮನಿಗೆ ಯುವರಾಜ್ಯಾಭಿಷೇಕ ಮಾಡಬೇಕು. ರಾಮನೆಂದರೆ ಎಲ್ಲರಿಗೂ ಇಷ್ಟ. ಈತನಿಂದ ನನ್ನ ವಂಶದ ಹೆಸರು ಬೆಳಗುತ್ತದೆ. ಪ್ರಜೆಗಳ ಕಲ್ಯಾಣವೇ ತಮ್ಮ ಕಲ್ಯಾಣವೆಂದು ಸದಾ ಬಯಸುವ ಶ್ರೀರಾಮನೇ ಈ ರಾಜ್ಯಕ್ಕೆ ರಾಜನಾಗಲು ತಕ್ಕವನು” ಎಂದು ಯೋಚಿಸಿ “ಶುಭಸ್ಯಂ ಶೀಘ್ರಂ” ಎಂದು ನಿಶ್ಚಯಿಸಿ ಗುರು ವರಿಷ್ಠರು, ಮಂತ್ರಿಸುಮಂತ್ರ, ಸೇನಾಧಿಪತಿಗಳು, ಜೋಯಿಸರು, ವಿದ್ವಾಂಸರು, ಪಂಡಿತರು, ಎಲ್ಲರನ್ನು ಕರೆಸಿ, ಚರ್ಚಿಸಿದನು. ವೈಶಾಖ ಶುಕ್ಲಪಕ್ಷದ ಪಂಚಮಿ ದಿನ ಅಭಿಜಿನ್ ಮೂಹೂರ್ತದಲ್ಲಿ ಪಟ್ಟಗಟ್ಟಬೇಕೆಂದು ನಿರ್ಣಯವಾಯಿತು. ಈ ವಿಚಾರವನ್ನು ಮೊದಲು ತನ್ನ ಆಪ್ತಸಖಿ ಪ್ರಿಯಪತ್ನಿ ಕೈಕೇಯಿಗೆ ತಿಳಿಸಿದರೆ ಸಂತೋಷದಿಂದ ಕುಣಿದಾಡುತ್ತಾಳೆಂದು ಕನಸುಗಾಣುತ್ತಾ ಕೈಕ ಮಂದಿರಕ್ಕೆ ನಡೆದನು.
ಸೀತೆ ಸೊಸೆಯಾಗಿ ಬಂದ ಮೇಲೆ ಕೌಸಲ್ಯೆಗೆ ಯೌವ್ವನ ಮರುಕಳಿಸಿತ್ತು. ಸೊಸೆಗೆಷ್ಟು ಶೃಂಗಾರ ಮಾಡಿದರೂ ಸಾಲದು ಎಷ್ಟು ಉಪಚಾರ ಮಾಡಿದರೂ ತಣಿಯದು. ಮಗ ಸೊಸೆ ಜೋಡಿಯನ್ನು ಕಣ್ತುಂಬಾ ತುಂಬಿಕೊಂಡು ಆನಂದ ಭಾಷ್ಪ ಸುರಿಸುವುದು; ಮುಂದೆ ಸೊಸೆ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತ ಮಾಡಬೇಕು. ಮೊಮ್ಮಕ್ಕಳನ್ನು ತೂಗಬೇಕು, ಲಾಲಿಹಾಡಬೇಕು, ಅವರ ನಾಮಕರಣ ವಿದ್ಯಾಭ್ಯಾಸ ಒಂದೇ ಎರಡೇ ನೂರಾರು ಕನಸುಗಳನ್ನು ಕಟ್ಟಿ ಸುಖದ ಉಯ್ಯಾಲೆಯಲ್ಲಿ ಜೀಕುತ್ತಿದ್ದಳು. ಮೊನ್ನೆ ಮೊನ್ನೆಯಷ್ಟೇ ರಾಮನನ್ನು ಎತ್ತಿ ಮುದ್ದಾಡಿದ್ದು ಚಂದಿರನನ್ನು ತೋರಿಸಿ ಊಟಮಾಡಿಸಿದ್ದು ನಾಲ್ವರು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದಾಡಿದ್ದು ನಂತರ, ಅವರ ವಿದ್ಯಾಭ್ಯಾಸ ಮದುವೆ ಎಲ್ಲವೂ ಕಣ್ಮುಚ್ಚಿ ಬಿಡುವಷ್ಟರಲ್ಲಿ ನಡೆದೇ ಹೋಯಿತು. ವರುಷಗಳು ಕಳೆದು ಈಗ ರಾಮನ ಮಕ್ಕಳನ್ನು ಎತ್ತಿ ಮುದ್ದಾಡುವ ಸುಯೋಗ! ಓಹ್! ನಾನೆಷ್ಟು ಭಾಗ್ಯವಂತೆ, ಪುಣ್ಯವಂತೆ ಬೇರಾರು ಇರಲಿಕ್ಕಿಲ್ಲ. ಇನ್ನು ಲಕ್ಷ್ಮಣನ ತಾಯಿ ಸುಮಿತ್ರ ಅಕ್ಕನ ನೆರಳು ನೆರಳಾದರೂ ಒಂದು ಗಳಿಗೆ ಮಾಯವಾಗುತ್ತದೆ. ಆದರೆ, ಸುಮಿತ್ರ ಅಕ್ಕನ ಕಷ್ಟಸುಖ, ನೋವು ನಲಿವುಗಳಲ್ಲಿ ಸಮಭಾಗಿ. ಅವಳ ಗುಣವೇ ಲಕ್ಷ್ಮಣನಿಗೆ ಬಂದಿದ್ದು, ಅಣ್ಣನಿಗಾಗಿ ಪ್ರಾಣವನ್ನೇ ಕೊಡುವ ಪರಮ ವೀರಾಗ್ರಣಿ, ಅಕ್ಕನ ಕನಸುಗಳನ್ನೇ ತನ್ನದಾಗಿಸಿಕೊಂಡು ಅವಳ ಬಯಕೆಗಳು ಆದಷ್ಟು ಬೇಗ ನೆರವೇರಲಿ ಎಂದು ಪ್ರಾರ್ಥಿಸುತ್ತಾಳೆ. ಸೊಸೆ ಊರ್ಮಿಳೆ ಯೊಂದಿಗೆ ಮಕ್ಕಳ ಕಲ್ಯಾಣ ಗುಣಗಳನ್ನು ಕೌಸಲ್ಯಯ ಮೇರೆ ಮೀರಿದ ಪ್ರೀತಿಯನ್ನು ಬಣ್ಣಿಸುವುದಕ್ಕೆ ಹೊತ್ತೇ ಸಾಕಾಗುವುದಿಲ್ಲ. ಹೀಗೆ ಎಲ್ಲರೂ ಅವರವರ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವಾಗ ಮಿಡಿ ನಾಗರವೊಂದು ಕಚ್ಚಲು ಹೆಡೆ ಎತ್ತಿತು.
*****
ಮುಂದುವರೆಯುವುದು