ರಘುಕುಲ ಸೋಮನವತಾರ
ಸೂರ್ಯವಂಶದಲ್ಲಿ ಅನೇಕ ರಾಜರು ಜನ್ಮ ತಾಳಿ ಅಯೋದ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರಾರು ವರ್ಷ ರಾಜ್ಯಭಾರ ಮಾಡಿದರು. ಅವರಲ್ಲಿ ಅಜರಾಯನ ಮಗನೇ ಪ್ರಸಿದ್ಧನಾದ ದಶರಥರಾಜನು; ಇವನು ಪರಾಕ್ರಮಶಾಲಿಯಾಗಿದ್ದು ದೇವತೆಗಳೂ ಇವನ ಸಹಾಯವನ್ನು ಬಯಸುತ್ತಿದ್ದರು. ಇವನು ಹತ್ತು ಲೋಕಗಳಿಗೂ ರಥದಲ್ಲಿ ಹೋಗುತ್ತಿದ್ದುದರಿಂದ ದಶರಥನೆಂಬ ಹೆಸರು ಬಂತು. ಕೌಸಲ್ಯ, ಕೈಕೆ, ಸುಮಿತ್ರ ಮೂವರು ಪತ್ನಿಯರು ಅರವತ್ತು ಸಾವಿರ ವರ್ಷಗಳವರೆಗೆ ರಾಜ್ಯಭಾರ ಮಾಡುತ್ತಿದ್ದಾಗ ವರ್ಣಸಂಕರ, ಧರ್ಮದ್ರೋಹ ಮೊದಲಾದ ಪಾಪಗಳು ಇರಲಿಲ್ಲ. ಅಕಾಲಮರಣವಿದ್ದಿಲ್ಲ. ವ್ಯಭಿಚಾರದ ಸುಳಿವು ಇದ್ದಿಲ್ಲ. ಹಲ್ಲು ಬಿದ್ದು ಕೂದಲು ಬೆಳ್ಳಗಾಗಿ ಮುಪ್ಪಿನ ಕೊನೆ ಹಂತಕ್ಕೆ ಬಂದಾಗ ದಶರಥನಿಗೆ ತನಗೆ ಮಕ್ಕಳಾಗಲಿಲ್ಲವಲ್ಲ ಎಂಬ ಕೊರಗು ದಿನೇ ದಿನೇ ಹೆಚ್ಚಾಯಿತು. ಮಕ್ಕಳಿಲ್ಲದವರಿಗೆ ಸ್ವರ್ಗದಲ್ಲಿ ಸ್ಥಾನವಿಲ್ಲೆಂಬ ಮಾತು ಎದೆಯನ್ನು ಚುಚ್ಚುತ್ತಿತ್ತು. ಮಕ್ಕಳಿಲ್ಲದ ರಾಜ್ಯ, ಶವಕ್ಕೆ ಇಕ್ಕಿದ ಆಭರಣಗಳು ಪ್ರಯೋಜನವಿಲ್ಲದ ವಸ್ತುಗಳು ನನ್ನಿಂದಾಗಿ ಈ ಸೂರ್ಯವಂಶ ನಿಂತು ಹೋಗಬಾರದು, ಮುಂದೆ ನನ್ನ ಗತಿ ಏನು? ಚಿಂತೆಯಲ್ಲೇ ಹಣ್ಣಾಗುತ್ತಿರುವಾಗ ಕುಲಪುರೋಹಿತರಾದ ವಶಿಷ್ಠರು, ಜಾಬಾಲಿ, ಅತ್ರಿಮಹರ್ಷಿಗಳು ಬಂದು ಚಿಂತೆಯ ಕಾರಣವನ್ನು ಕಂಡುಹಿಡಿದು “ಮಹಾರಾಜ ಇದಕ್ಕೇಕೆ ಇಷ್ಟು ಚಿಂತಿಸುವೆ. ನೀನು ಋಷ್ಯಶೃಂಗ ಮುನಿಗಳ ನೆರವಿನಿಂದ “ಪುತ್ರಕಾಮೇಷ್ಠಿ” ಯಾಗವನ್ನು ಮಾಡು ನಿನಗೆ ನಿಶ್ಚಯವಾಗಿ ಸಂತಾನ ಪ್ರಾಪ್ತಿಯಾಗುವುದು” ಆನಂದಗೊಂಡ ದಶರಥನು ಮಂತ್ರಿ ಶ್ರೇಷ್ಠರನ್ನು ಕರೆಯಿಸಿ ಯಾಗ ಮಾಡುವ ಬಗ್ಗೆ ವಿಧಿವಿಧಾನಗಳನ್ನು ಬೇಕಾಗುವ ಸಾಮಾಗ್ರಿಗಳನ್ನು ತಿಳಿದುಕೊಂಡು ಶುಭದಿನದಲ್ಲಿ ಶುಭ ಮಹೂರ್ತದಲ್ಲಿ ಯಾಗ ಆರಂಭಿಸಿದನು. ವೇದೋಕ್ತವಾಗಿ ದರ್ಬಾಂಕುರ, ಗಂಧ, ಪತ್ರ, ಪುಷ್ಪ, ಧೂಪ, ದೀಪಗಳಿಂದ ಶ್ರದ್ಧಾಭಕ್ತಿಯಿಂದ ಅಗ್ನಿದೇವರನ್ನು ಅರ್ಚಿಸಿದನು, ಸಂತುಷ್ಟರಾದ ದೇವತೆಗಳು ಪ್ರತ್ಯಕ್ಷವಾಗಿ ಬಂದು ತಮ್ಮ ತಮ್ಮ ಹವಿರ್ಭಾಗಗಳನ್ನು ಪಡೆದು ಆಶೀರ್ವದಿಸಿದರು. ಅಗ್ನಿದೇವ ಪ್ರತ್ಯಕ್ಷನಾಗಿ ಬಂಗಾರದ ಪಾತ್ರೆಯಲ್ಲಿ ಪಾಯಸವನ್ನು ಹಿಡಿದು ದಶರಥ ರಾಜನಿಗೆ ಕೊಟ್ಟು “ಸುಪುತ್ರಪ್ರಾಪ್ತಿರಸ್ತು” ಹಾರೈಸಿ ಅಂತರ್‍ಗತನಾದನು.
ದಶರಥನು ಪಾಯಸವನ್ನು ಎರಡು ಭಾಗ ಮಾಡಿ ಬಂದು ಭಾಗ ಕೌಸಲ್ಯೆಗೆ ಎರಡನೇ ಭಾಗವನ್ನು ಕೈಕೇಯಿಗೂ ಕೊಟ್ಟನು. ಅಷ್ಟರಲ್ಲಿ ಸುಮಿತ್ರೆಯು ಬರಲು ಕೌಸಲ್ಯ ಸುಮಿತ್ರೆಯರು ತಮ್ಮ ಪಾಲಿನಲ್ಲಿ ಸ್ವಲ್ಪ ಭಾಗವನ್ನು ಕೊಟ್ಟರು. ನಾರಾಯಣನ ಸಂಕಲ್ಪದಂತೆ ಮೂವರು ಸತಿಯರು ಗರ್ಭವತಿಯರಾಗಿ ಶುಭಗಳಿಗೆ, ಶುಭನಕ್ಷತ್ರದಲ್ಲಿ ಗಂಡು ಮಕ್ಕಳನ್ನು ಪಡೆದರು. ವಶಿಷ್ಠರು ಶಾಸ್ತ್ರೋಕ್ತವಾಗಿ ಜಾತಕರ್ಮವನ್ನು ಮಾಡಿ ರಾಮ, ಲಕ್ಷ್ಮಣ, ಭರತ ಶತ್ರುಘ್ನರೆಂದು ಹೆಸರಿಟ್ಟರು. ದಶರಥನು ತೃಪ್ತಿಯಿಂದ ಇನ್ನಿಲ್ಲದ ಹಾಗೆ ದಾನ ಧರ್ಮಗಳನ್ನು ಮಾಡಿ ನೆಮ್ಮದಿಯಿಂದ ಮಕ್ಕಳೊಡನೆ ಕಾಲಕಳೆಯತೊಡಗಿದನು.
“ನಿನ್ನ ಆ ಶ್ರೀರಾಮನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶ್ರೀಮನ್ನಾರಾಯಣ ನೆಂದು ಹೇಳುತ್ತಿರುವೆಯಾ, ಈ ಸುಳ್ಳಿನ ಕಂತೆಯನ್ನು ಬಿಸಾಕು, ಆ ನಿನ್ನ ರಾಮ ಮನುಷ್ಯರೂಪದಲ್ಲಿ ಹುಟ್ಟಿ ನಾನಾ ಕಷ್ಟ ಕೋಟಲೆಗಳನ್ನು ಎದುರಿಸಿ ಭೂಮಿಗೇಕೆ ಬರಬೇಕಿತ್ತು. ಯಾರನ್ನು ಉದ್ಧರಿಸಲು ಈ ಅವತಾರ?
“ಅಗ್ರಜಾ! ಜಗತ್ತಿನಲ್ಲಿರುವ ಸಜ್ಜನರ ರಕ್ಷಣೆ ದುರ್ಜನರ ಶಿಕ್ಷೆಗಾಗಿ, ಭಗವಂತನು ಈ ವಿಶೇಷ ಮಾನವ ರೂಪ ಧರಿಸಿದನು. ಆಪದ್ಭಾಂದವನಾದ ನಾರಾಯಣನು ಸಜ್ಜನರ ಉಪದ್ರವವನ್ನು ಸಹಿಸುವುದಿಲ್ಲ. ವೇದ ಮಾರ್ಗದ ಕೆಡಕು ಧರ್ಮದ ಅಳಿವನ್ನು ಸೈರಿಸನು. ಅದಕ್ಕಾಗಿ ಈ ಅವತಾರವಿತ್ತಬೇಕಾಯಿತು. ಅದಕ್ಕೆ ಸಹಾಯಕರಾದವರು ದೇವತೆಗಳು ಅವರು ಸಹ ತಮ್ಮ ಅಂಶದಿಂದ ಜನ್ಮತಾಳಿದರು. ಇಂದ್ರನು ಆಂಗದನಾಗಿ, ಸೂರ್ಯನೇ ಸುಗ್ರೀವನು, ವಾಯುದೇವನು ಹನುಮಂತನು, ವಿಶ್ವಕರ್ಮನೇ ನಳನಾಗಿ, ಅಗ್ನಿಯು ನೀಲನಾಗಿ ಧರ್ಮದೇವತೆ ಯಾಮರಾಜನು ಗವಯ, ಗಜ, ಶರಭ ಮೊದಲಾದ ಐದು ಕಪಿಗಳ ರೂಪ ತಾಳಿರುವನು. ಆದಿಶೇಷನೇ ಲಕ್ಷ್ಮಣನು ಬ್ರಹ್ಮದೇವನೇ ಜಾಂಬವಂತನು, ಶಂಕರನು ವೃಷಭ ರೂಪವನ್ನು ತಾಳಿರುವನು. ಲಕ್ಷ್ಮಿ ದೇವಿಯೇ ಜನಕರಾಜನ ಮಗಳು ಜಾನಕಿ ಸೀತೆಯೆಂಬ ಹೆಸರಿನಿಂದ ಬೆಳೆದಳು. ಮಾಯೆಯೇ ಮಂಥರೆಯಾಗಿ ಶ್ರೀರಾಮನ ಬದುಕಿಗೆ ತಿರುವು ನೀಡಿದವಳು.
“ಆಗ್ರಜಾ ಶ್ರೀರಾಮನ ಬಾಲಲೀಲೆಗಳನ್ನು ಮುನಿಗಳು ವರ್ಣಿಸುವುದನ್ನು ನೀನು ಕಿವಿಯಾರೆ ಕೇಳಬೇಕು. ಸ್ಥಿತಿ ಕರ್ತನಾದ ನಾರಾಯಣನು ಮಗುವಾಗಿ ಚಿಕ್ಕ ತೊಟ್ಟಿಲಲ್ಲಿ ಮಲಗಿದನು. ಸಾವಿರದೆಂಟು ಬ್ರಹ್ಮಾಂಡಗಳನ್ನು ಒಡಲೊಳಗೆ ಧರಿಸಿದ ನಾರಾಯಣನು ವೇದಗಳು ಹೊಗಳಲು ಅಸಾಧ್ಯವೋ ಅಂತಹ ಪುರಾಣ ಪುರುಷೋತ್ತಮನು ಚಿಕ್ಕ ಮಗುವಾಗಿ ಹೆಂಗಳೆಯರ ಜೋಗುಳ ಕೇಳಿ ಆನಂದದಿಂದ ನಗುತ್ತಿದ್ದನು. ಮಹಾಮಹಿಮನು ಮೊಲೆ ಹಾಲಿಗೆ ಆತುರನಾಗಿದ್ದನು. ಆದಿಶೇಷನೇ ಹೊರಲಾರದೆ ಎದುಸಿರುಬಿಡುವಂತಹ ಮಹಾತ್ಮನನ್ನು ಮಾನಿನಿಯರು ಎತ್ತಿಕೊಂಡು ಲಲ್ಲೆಯ ಮಾತುಗಳಿಂದ ಮುದ್ದು ಗರೆಯುತ್ತಿದ್ದರು. ದೇವಾದಿ ದೇವತೆಗಳಿಗೆ ಆಜ್ಞೆ ಮಾಡುವ, ವಾಮನವತಾರದಲ್ಲಿ ಇಡೀ ಭೂ ಮಂಡಲವನ್ನು ಒಂದೇ ಪಾದದಿಂದ ಅಳೆದ ತ್ರಿವಿಕ್ರಮನು ರಾಜಭವನದಲ್ಲಿ ಮೋಹಕವಾಗಿ ಮುದ್ದು ಮಾತುಗಳಿಂದ ಪುಟ್ಟ ಪುಟ್ಟ ಹೆಜ್ಜೆಗಳಿಡುತ್ತಾ ಎಲ್ಲರ ಕಣ್ಮಣಿಯಾಗಿ ರಂಜಿಸುತ್ತಿದ್ದನು. ಸುಂದರವದನ, ಅರವಿಂದ ನಯನ, ಕೋಮಲವಾದ ಅದರ, ಮುತ್ತಿನದಂತ ಪಂಕ್ತಿಗಳು, ಮುಂಗುರುಳುಗಳು, ನೀಲವರ್ಣ ಪರಿಪರಿಯಿಂದ ಪರಮಾತ್ಮನು ಮಗುವಾಗಿ ಶೋಭಿಸುತ್ತಿದ್ದನು. ಶುಕ್ಲಪಕ್ಷದ ಚಂದ್ರನಂತೆ ನಾಲ್ವರು ಬಾಲಕರು ಬೆಳೆದರು. ಸಕಲವಿದ್ಯೆಗಳನ್ನು ಬಿಲ್ಲು ವಿದ್ಯೆಯನ್ನು ಗಜ, ತುರಗಗಳ ಸವಾರಿಯನ್ನು ಕಲಿತು ಪಾರಂಗತರಾದರು.
ಹೀಗಿರಲು ಒಂದು ದಿನ ಗಾದಿಪುತ್ರನಾದ ವಿಶ್ವಾಮಿತ್ರರು ಯಾಗವನ್ನು ಕೈಗೊಂಡು ರಾಕ್ಷಸರಿಂದಾಗುವ ತೊಂದರೆಗಳಿಂದ ರಕ್ಷಣೆಗಾಗಿ ಶ್ರೀರಾಮಲಕ್ಷ್ಮಣರನ್ನು ಕರೆದೊಯ್ಯಲು ಬಂದರು. ದಶರಥನು ವಿನಯ, ವಿದೇಯತೆಗಳಿ೦ದ ಮುನಿಯನ್ನು ಎರ್ದುಗೊಂಡು ಭಕ್ತಿಯಿಂದ ಅರ್ಘಪಾದ್ಯಾಚಮನಗಳಿಂದ ಪೂಜಿಸಿದನು. ಕೈಕಟ್ಟಿ ನಿಂತ ತಾವು ಬಂದ ಕಾರಣವೇನೆಂದು ಕೇಳಿದನು. “ತಮ್ಮ ಸೇವೆಯೇ ನನ್ನ ಸುಕೃತ” ಎಂದು ಬೇಡಿಕೊಳ್ಳಲು “ಮಹಾರಾಜ ನಾನೊಂದು ಮುಕ್ತಿ ಪ್ರದೀಪಯಾಗ ಆರಂಭಿಸಿದ್ದೇನೆ. ಸುಬಾಹು, ಮಾರೀಚರೆಂಬ ರಾಕ್ಷಸರು ತಮ್ಮ ತಾಯಿ ತಾಟಕಿ ಜೊತೆಗೂಡಿ ನಾನಾ ತೊಂದರೆ ಕೊಡುತ್ತಿದ್ದಾರೆ. ಯಾಗ ಪೂರ್ತಿ ಮಾಡುವುದೇ ಕಷ್ಟವಾಗಿದೆ. ಅವರನ್ನು ಸಂಹರಿಸಲು ನಿನ್ನ ಮಗ ರಾಮಚಂದ್ರನನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ.” ಮುನಿಯ ಮಾತು ಕೇಳಿ ದಶರಥನಿಗೆ ಮಾತೇ ನಿಂತು ಹೋಯಿತು. ಸಿಡಿಲು ಬಡಿದ ಮರದಂತೆ ವದನವು ಸುಟ್ಟು ಕರಕಲಾಯಿತು. ಸಾವರಿಸಿಕೊಂಡು ಭಯ ಆತಂಕದಿಂದ “ಅನೇಕ ಸಾವಿರ ವರ್ಷಗಳವರೆಗೆ ಮಕ್ಕಳ ಸುಖ ಕಾಣದ ನಾನು ತಮ್ಮಂತವರ ಕೃಪೆಯಿಂದ ದೇವತೆಗಳ ಅನುಗ್ರಹದಿಂದ ಪುತ್ರರನ್ನು ಪಡೆದು ಪುನೀತನಾಗಿ ಬಾಳುತ್ತಿದ್ದೇನೆ. ಅವರಿನ್ನು ಹಾಲುಗಲ್ಲದ ಹಸುಳೆಗಳು, ಸಮರಜ್ಞಾನವಿಲ್ಲ ಮನುಷ್ಯರೊಡನೆ ಯುದ್ಧ ಮಾಡಿಲ್ಲ ಇನ್ನು ರಾಕ್ಷಸರನ್ನು ಹೇಗೆ ಸದೆಬಡಿಯುತ್ತಾರೆ. ದಯವಿಟ್ಟು ಕ್ಷಮಿಸಿ, ನಾನೇ ಬಂದು ರಕ್ಕಸರನ್ನು ಕೊಂದು ಯಾಗಕ್ಕೆ ಸಹಾಯ ಮಾಡುತ್ತೇನೆ” ವಿಶ್ವಾಮಿತ್ರರು ಕೆಂಡಾಮಂಡಲವಾಗಿ “ಎಲೈ ಅರಸನೇ ಹರಿಶ್ಚಂದ್ರನ ವಂಶದಲ್ಲಿ ಹುಟ್ಟಿ ಈ ಮಾತನಾಡಲು ನಾಚಿಕೆಯಾಗುವುದಿಲ್ಲವೇ ನಿನ್ನಂತಹ ಕೈಲಾಗದವನನ್ನು ಕಟ್ಟಿಕೊಂಡು ಕೈಕಟ್ಟಿಕುಳಿತುಕೊಳ್ಳುವುದೇ? ಹುಚ್ಚು ದೊರೆಯೇ ನಿನ್ನ ಮಗನಾರೆಂದು ತಿಳಿದಿರುವೆ. ಸಾಮಾನ್ಯ ಮನುಷ್ಯನಲ್ಲ ಭೂಭಾರವನ್ನಿಳಿಸಲು ದೇವತೆಗಳ ಕೋರಿಕೆ ಮೇರೆಗೆ ನರರೂಪ ಧರಿಸಿದ್ದಾನೆ. ಇವನು ಬ್ರಹ್ಮನಾಗಿ ಸಕಲ ಸೃಷ್ಠಿದಾತ, ವಿಷ್ಣುವಾಗಿ ಸಕಲ ವಿಶ್ವದಾತ, ರುದ್ರನಾಗಿ ಸಕಲ ವಿಶ್ವನಾಶ, ಬ್ರಹ್ಮರ್ಷಿಗಳು, ಸುರಮುನಿಗಳು ಈತನ ನೆಲೆಯನ್ನು ಕಾಣರು, ಇಂತಹ ಪುತ್ರವಾತ್ಸಲ್ಯವನ್ನು ಬಿಡು, ಮೂರ್ಖದೊರೆಯೇ ಈ ನಿನ್ನ ಮಗನು ಹಿಂದಿನ ಜನ್ಮದಲ್ಲಿ ಮತ್ಸ್ಯ, ಕೂರ್‍ಮ, ವರಾಹ, ನಾರಸಿಂಹ, ವಾಮನ, ಪರಶುರಾಮನಾಗಿ ಹುಟ್ಟಿ ಭೂಭಾರ ಕಡಿಮೆ ಮಾಡಿ ದೇವತೆಗಳನ್ನು ಭಕ್ತರನ್ನು ಕಾಪಾಡಿ ಧರ್ಮರಕ್ಷಣೆ ಮಾಡಿದ. ಪುಣ್ಯಪುರುಷ, ನಾಲ್ಕು ವೇದಗಳು ಪರಮಾತ್ಮನ ನಿಜಸ್ವರೂಪ ತಿಳಿಯಲಿಲ್ಲ. ಅಣುವಿಗಿಂತ ಅಣುವು ಜ್ಯೋತಿಯೊಳಗಿನ ಪರಂಜ್ಯೋತಿ ಸಕಲ ಬ್ರಹ್ಮಾಂಡಗಳನ್ನೇ ತನ್ನ ಒಡಲೊಳಗಿಟ್ಟು ವಿಶ್ವವೆಲ್ಲಾ ವ್ಯಾಪಿಸಿರುವ ವಿಶ್ವವಂದ್ಯನಾದ ರಾಮನು ನಿನ್ನ ಮಗನಾಗಿ ಹುಟ್ಟಿದ್ದು ನಿನ್ನ ಪುಣ್ಯದ ಫಲ ಪೂರ್ವಜನ್ಮ ಸುಕೃತ. ತಂದೆಯೆಂಬ ಅಹಂಕಾರದಲ್ಲಿ ಮೆರೆಯಬೇಡ ಇದು ನನ್ನ ಮಾತಲ್ಲ ವಿಶ್ವಾಸ ಬರದಿದ್ದರೆ, ನಿನ್ನ ಕುಲಗುರು ವಶಿಷ್ಠರನ್ನು ಕೇಳು ಮಹಾರಾಜ ನನ್ನನ್ನು ಸಾಮಾನ್ಯ ಋಷಿಯೆಂದು ತಿಳಿಯಬೇಡ. ವಶಿಷ್ಠರಿಗೆ ಸವಾಲೊಡ್ಡಿ ಬ್ರಹ್ಮರ್ಷಿ ಪಟ್ಟ ಪಡೆದವನು ನಾನು, ಯಾಗದ ರಕ್ಷಣೆ, ರಾಕ್ಷಸರ ಸಂಹಾರ, ನಿನ್ನನ್ನು ಸಹ ನಾಶಗೊಳಿಸುವ ಶಕ್ತಿ ನನ್ನಲ್ಲಿದೆ. ಆದರೆ ಶ್ರೀರಾಮನ ಶಕ್ತಿ, ಕೀರ್ತಿಗಳು ಲೋಕಕ್ಕೆ ತಿಳಿಯಲೆಂದು ಬಂದಿದ್ದೇನೆ.
ವಿಶ್ವಾಮಿತ್ರರ ಮಾತು ಕೇಳಿ ದಶರಥನಿಗೆ ಮರಳಿ ಜೀವ ಬಂದಂತೆ. ಧೈರ್ಯತಾಳಿ ವಶಿಷ್ಠರ ಕಡೆ ನೋಡಿದಾಗ ಅವರು ಕಣ್ಣಲ್ಲೇ ಸಮ್ಮತಿಯಿತ್ತರು. ಶ್ರೀರಾಮಲಕ್ಷ್ಮಣರನ್ನು ಅಪ್ಪಿಕೊಂಡು ಆಶೀರ್ವದಿಸಿ ಕಳುಹಿಸಿಕೊಟ್ಟರು. ಯಾಗಕ್ಕೆ ಮೊದಲು ವಿಶ್ವಾಮಿತ್ರರು ಅನೇಕ ದಿವ್ಯಾಸ್ತ್ರಗಳನ್ನು ಉಪದೇಶಿಸಿದರು. ನಾರಾಯಣಶಾಸ್ತ್ರ, ಪಾಶುಪತಾಸ್ತ್ರ, ಬ್ರಹ್ಮಾಸ್ತ್ರಗಳ ಪ್ರಯೋಗಿಸುವ ರೀತಿ ಅವುಗಳ ಉಪಸಂಹಾರವನ್ನು ಕಲಿಸಿ ಅವರನ್ನು ಅಜೇಯರನ್ನಾಗಿ ಮಾಡಿದನು. ತನ್ನಲ್ಲಿದ್ದ ದಿವ್ಯವಾದ ಧನಸ್ಸನ್ನು ಕೊಟ್ಟು ಆಶೀರ್ವದಿಸಿದನು. ತನ್ನ ಯಾಗವು ಈ ವೀರಾಗ್ರಣಿಗಳಿಂದ ಯಾವೊಂದು ವಿಘ್ನಗಳಿಲ್ಲದೆ ನೆರವೇರುವುದೆಂದು ನಿಶ್ಚಿಂತನಾದನು. ಯಾಗವನ್ನು ಆರಂಭಿಸಿದನು.
ಮೊದಲಿಗೆ ತಾಟಕಿಯು ಎದುರಾದಳು. ಅವಳ ಜೊತೆ ಶಾಕಿಣಿ ಡಾಕಿಣಿಯರು ಇದ್ದರು. ಅವಳನ್ನು ನೋಡಿದರೆ ಹಂತಕನ ತಾಯಿಯೋ, ಕಾಲಭೈರವನ ತಂಗಿಯೋ, ಮೃತ್ಯುವಿನ ಸವತಿಯೋ ಎಂಬಂತೆ ಭಯಂಕರ ರೂಪದಲ್ಲಿ ಕಾಣಿಸಿದಳು. ವಿಶ್ವಾಮಿತ್ರರು “ಶ್ರೀರಾಮ ಹೆದರಬೇಡ ಬಿಲ್ಲಿಗೆ ಬಾಣ ಹೂಡಿ ಇವಳ ರುಂಡ ಮುಂಡವನ್ನು ಕತ್ತರಿಸು” ಎಂದರು. “ಗುರುವರ್ಯ ಈಕೆ ಹೆಂಗಸು ಸೂರ್ಯವಂಶದ ಅರಸರು ಇದುವರೆಗೆ ಹೆಂಗಸರನ್ನು ಕೊಲೆ ಮಾಡಿಲ್ಲ” “ರಾಮ! ಭೂಮಿಗೆ ಕಂಟಕ ಪ್ರಾಯಳಾದ ಇವಳನ್ನು ಸಂಹರಿಸುವುದು ಕ್ಷತ್ರಿಯಧರ್ಮ, ಅನುಮಾನಿಸದೆ ಸಂಹರಿಸು” ಎನ್ನಲು ಒಂದೇ ಬಾಣದಿಂದ ತಾಟಕಿಯನ್ನು ಕೊಂದನು. ತಾಯಿ ಸತ್ತು ಬಿದ್ದುದನ್ನು ನೋಡಿ ಸುಬಾಹು, ಮಾರೀಚರು ರೋಷಾವೇಷದಿಂದ ರಾಮಲಕ್ಷ್ಮಣರ ಮೇಲೆ ಬಿದ್ದರು. ಶ್ರೀರಾಮನು ದಿವ್ಯಾಸ್ತ್ರವೊಂದನ್ನು ಹೂಡಿ ಸುಬಾಹುವಿನ ತಲೆಯನ್ನು ಆಕಾಶಕ್ಕೆ ಹಾರಿಸಿದನು. ಅವನ ಶರೀರವು ರಣಭೂಮಿಯಲ್ಲಿ ಪರ್ವತದಂತೆ ಬಿತ್ತು. ಕಂಗಾಲಾದ ಮಾರೀಚನು ಪ್ರಾಣವನ್ನು ಉಳಿಸಿಕೊಳ್ಳಲು ಬ್ರಾಹ್ಮಣವೇಷವನ್ನು ಧರಿಸಿ, ಶ್ರೀರಾಮನ ಹತ್ತಿರ ಬಂದು “ಎಲೈ ರಾಜಕುಮಾರನೇ ನನ್ನನ್ನು ರಕ್ಷಿಸು ಈ ರಾಕ್ಷಸರು ನನ್ನನ್ನು ಕೊಲೆಗೈಯುತ್ತಿದ್ದಾರೆ” ಎಂದನು. ಆಗ ವಿಶ್ವಾಮಿತ್ರರು “ರಾಮಚಂದ್ರನೇ ಇವನು ಬ್ರಾಹ್ಮಣನಲ್ಲ ಮಾಯಾವಿಯಾದ ಮಾರೀಚನು ಇವನ ತಲೆಯನ್ನು ಹಾರಿಸು” ಎನ್ನಲು “ಮುನಿವರ್ಯ ಬ್ರಾಹ್ಮಣರನ್ನು ಬ್ರಾಹ್ಮಣವೇಷದಲ್ಲಿರುವಾಗ ಕೊಲ್ಲುವುದು ಕ್ಷತ್ರಿಯರಿಗೆ ಭೂಷಣವಲ್ಲ. ಇವನು ಹೋದತ್ತ ಹೋಗಲಿ” ಎಂದು ವಾಯು ವ್ಯಾಸ್ತ್ರದಿಂದ ಅವನನ್ನು ಹಾರಿಸಲು ಮಾರೀಚನು ನಮ್ಮ ಲಂಕೆಗೆ ಬಂದು ಬಿದ್ದನು ಹೀಗೆ ಚಿಕ್ಕವರಿರುವಾಗಲೇ ತಮ್ಮ ಪರಾಕ್ರಮದಿಂದ ರಕ್ಕಸರನ್ನು ನಿರ್ನಾಮ ಮಾಡಿ ಯಾಗ ನಿರ್ವಿಘ್ನವಾಗಿ ಸಾಗಲು ನೆರವಾದರು.
*****
ಮುಂದುವರೆಯುವುದು