Home / ಕವನ / ಕವಿತೆ / ಬಾಡಿಗೆ ತಾಯಂದಿರು

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ
ತಾಯಂದಿರ ಗರ್ಭಗಳು ಬಾಡಿಗೆಗೆ
ತಾಯ್ತನದ ಬಯಕೆಗಳ ಅದುಮಿಟ್ಟು
ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು
ಇಲ್ಲಿ ಬಾಡಿಗೆ ತಾಯಂದಿರು

ಬಸಿರಲಿ ಮೂಡಿದ ಮಗು
ಒದ್ದು ಮೈ ಬದಲಿಸುವ ಚಲನೆ
ತಾಯ್ತನದ ಖುಷಿಯ ಘಳಿಗೆಯಲಿ
ಕಲ್ಲಾಗಿ ಕನಸಿಗೆ ನಿಷೇಧ ಹೇರುವರು.
ಹಿಂಸೆಯ ಶಿಲುಬೆಗೇರುವರು
ಇಲ್ಲಿ ಬಾಡಿಗೆ ತಾಯಂದಿರು.

ಕನಲುವ, ಮಗ್ಗಲು ಬದಲಿಸುವ
ಮುಲುಕುವ, ಹೊಟ್ಟೆಗೆ ಒದೆಯುವ,
ಕಂದನ ಕೈಸರಬೇಕೆಂದರೆ
ಸತ್ತ ಹೃದಯ ತಾಯಿಯವಳು
ಗಂಡನ ಸಾಲ ತೀರಿಸಲು
ಕೇವಲ ಬಾಡಿಗೆ ಗರ್ಭವಾದವಳು.

ಹೆತ್ತ ಕೂಸಿಗೆ ಅವಡುಗಚ್ಚಿ ಕೊಡುವಳು
ಉಕ್ಕಿ ಹರಿವ ಹಾಲಿನ ತೊರೆಯ
ಮನಸು ಕಲ್ಲಾಗಿಸಿ ಆವಿಯಾಗಿಸುವಳು
ಕೊಟ್ಟ ಮಕ್ಕಳ ಮರಳಿ ನೋಡಳು
ಹೊಟ್ಟೆ ಹೊರೆಯಲವಳು
ಸಂತೆಯಲಿ ಗರ್ಬವಿಟ್ಟವಳು

ಅವಳದೆಂತಹ ಹಣೆಬರಹ ನೋಡು
ಹೆತ್ತ ಮಗುವಿಗೆ ಎತ್ತಿ ಮುದ್ದಿಸಲಾರಳು
ತನ್ನದೇ ಕುಡಿ, ತನ್ನಾತ್ಮದ ತುಣುಕನು
ಕರುಳಿಲ್ಲದ ಮಾರುಕಟ್ಟೆಯಲ್ಲಿಟ್ಟು
ಜಾಗತೀಕರಣದ ಹೊಸ ಉದ್ಯಮದಲಿ
ಕೇವಲ ಬಾಡಿಗೆ ತಾಯಾದವಳು.

ಪ್ರಭುವೆ! ಕಣ್ಣಲ್ಲಿ ಕನಸುಗಳ ಕೊಡಬೇಡವೆಂದು
ಕಣ್ಣು ರೆಪ್ಪೆ ಗಟ್ಟಿ ಮುಚ್ಚಿಕೊಳ್ಳುವಳು
ತೇಲಿ ಬರುವ ಕನಸುಗಳಿಗೆ ನಿಷೇಧ ಹೇರುವಳು
ಬಸಿರೋದ್ಯಮದಲಿ ಗರ್ಭ ಮಾರಾಟಕ್ಕಿಡುವಳು
ಮಮತೆಯ ಕತ್ತು ಹಿಸುಕಿದ ಅವಳು,
ಕೇವಲ ಬಾಡಿಗೆ ತಾಯಿಯಾದವಳು.

ದೇವತೆಯೆಂದು ಪೂಜಿಸಿದವರೇ
ಅವಳ ಕ೦ಡು ಇಂದೇಕೆ ನಗುವಿರಿ?
ತಾಯ್ತಾನದ ಘನತೆ ಮಾರಾಟದ ಸರಕಾಗಿಸಿ
ಘನತೆಯ ಬದುಕು ಬೀದಿಪಾಲಾಗಿಸಿ
ಕೇವಲ ಬಾಡಿಗೆ ತಾಯಾಗಿಸಿದಿರಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...