ಬಾನಂಗಳದಲಿ ಹಾರುವ ಹಕ್ಕಿಗೆ
ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು
ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ
ನಿರ್ಭಂಧಗಳಾಚೆ ತಂಬೆಲರ ತಾಣ.
ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ
ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ
ಹಗುರವಾಗುತ್ತಿದ್ದಾಳೆ ಅವಳು
ಇಷ್ಟಿಷ್ಟೇ ಗೋಡೆಗಳ ಲಂಘಿಸುತ್ತಿದ್ದಾಳೆ.
ಕಟ್ಟಿದ್ದ ಹುತ್ತದಲ್ಲಿ ಹಾವಿನ ಸಹವಾಸ,
ಸಾಕಿನ್ನು ಮನೆವಾಸ, ವನವಾಸ,
ಭೂಮಿಪುತ್ರರ ಸಹವಾಸವೂ ಸಾಕು.
ರಾಮ ರಾಜ್ಯದಲ್ಲಿ ಆಜ್ಞೆಪಾಲನೆ ಸಾಕು.
ದುಃಷ್ಯಂತನ ಪ್ರೇಮದುಂಗುರದಲಿ
ನಂಬಿಕೆಯಿಟ್ಟು ನಿರಾಶಳಾಗಿದ್ದು ಸಾಕು,
ಶಾಪಿತ ಅಹಲ್ಯೆ ಕಲ್ಲಾಗುವುದು ಸಾಕು,
ಸೀರೆ ಸೆಳೆಯುವ ಅಪಮಾನ ಸಾಕು ಸಾಕು.
ಬಿರುಮುಡಿಯ ಎತ್ತಿ ಕಟ್ಟಿದ ದೌಪದಿ
ಕಟ್ಟಳೆಗಳ ಮೆಟ್ಟಿ ನಿಂತಿದ್ದಾಳೆ ನೋಡು,
ಲಕ್ಷ್ಮಣ ರೇಖೆಗಳ ದಾಟಿ ಬಂದಿದ್ದಾಳೆ
ಆಕಾಶದಂಗಳಕೆ ಲಗ್ಗೆಯಿಟ್ಟಿದ್ದಾಳೆ.
ಎಲ್ಲ ನಿರ್ಭಂಧಗಳ ಕಿತ್ತೊಗೆದು
ಸೂರ್ಯ ಶಿಕಾರಿಗೆ ಹೊರಟ್ಟಿದ್ದಾಳೆ
ಸ್ವಚ್ಛಂಧ ಆಗಸದಲ್ಲಿ ಹಾರುತ್ತಿದ್ದಾಳೆ
ಮಾನವತೆಯ ಮೇರುಶಿಖರ ಏರುತ್ತಿದ್ದಾಳೆ,
ಏಕೆಂದರೆ ಅವಳುಂಟು ಅವಳ ರೆಕ್ಕೆಯುಂಟು
*****