ಗಂಧವ ವಾಯು ಕೊಂಬಾಗ
ಅದ ತಂದು ಕೂಡಿದವರಾರು
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ
ಅದ ಬಂಧಿಸಿ ತಂದು ಇರಿಸಿದವರಾರು
ಅವು ತಮ್ಮ ಅಂಗಸ್ವಭಾವದಂತೆ
ನಿಂದ ನಿಜವೆ ತಾನಾಗಿ
ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ
ಎಂದನಂಬಿಗಚೌಡಯ್ಯ
ಗಾಳಿಯು ಸುಗಂಧವನ್ನು ಕೊಳ್ಳುವಾಗ ಅವೆರಡನ್ನೂ ಕೂಡಿಸಿದವರು ಯಾರು, ಸುಮ್ಮನೆ ಇರುವ ಮರಕ್ಕೆ ಸುಂಗಧ ಮೂಡಿದಾಗ ಅದನ್ನು ಮರದಲ್ಲಿ ಬಂಧಿಸಿಟ್ಟವರು ಯಾರು-ಇಂಥ ಪ್ರಶ್ನೆಗಳನ್ನು ಅನೇಕ ಕವಿಗಳು ಚೆಲುವಾದ ಪದ್ಯಗಳನ್ನಾಗಿಸಿದ್ದು ನಮಗೆಲ್ಲಾ ಗೊತ್ತೇ ಇದೆ.
ಈ ವಚನದಲ್ಲಿ ಅಂಬಿಗರ ಚೌಡಯ್ಯನು ಇಂಥ ಸಂದೇಹಗಳನ್ನು `ಸಂಧಿಸುವುದು ಇಲ್ಲ’, ಹೀಗೆ ಪ್ರಶ್ನಿಸಿಕೊಳ್ಳುವುದೇ ತಪ್ಪು ಅನ್ನುತ್ತಿದ್ದಾನೆ. ಯಾಕೆಂದರೆ ಸುಗಂಧ, ಗಾಳಿ, ಮರ ಇವೆಲ್ಲ ತಮ್ಮ ಸಹಜ ಸ್ವಭಾವಕ್ಕೆ ತಕ್ಕಂತೆ (ಅಂಗಸ್ವಭಾವದಂತೆ) ವರ್ತಿಸುತ್ತಿವೆ. ಅವು ನಿಜವಾಗಿ ಹೇಗಿವೆಯೋ ಹಾಗೇ ಇವೆ, ಹಾಗೇ ವರ್ತಿಸುತ್ತಿವೆ. ಹೀಗಿರುವಾಗ ಇದೆಲ್ಲ ಏಕೆ, ಹೇಗೆ ಎಂದು ಪ್ರಶ್ನೆ ಕೇಳುವುದು ಹುಸಿಯಲ್ಲವೇ ಎಂದು ಚೌಡಯ್ಯ ಕೇಳುತ್ತಿರುವಂತಿದೆ.
ಕವಿಗಳಿಗೆ ವಿಸ್ಮಯವಿರಬೇಕು ನಿಜ. ಆದರೆ ವಿಸ್ಮಯಪಡುವುದೂ ಒಂದು ಚಟವಾಗಬಾರದು ಎಂದು ಎಚ್ಚರಿಸುವಂತಿದೆ ಈ ವಚನ.
*****