ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
ಆಯ್ದಕ್ಕಿ ಮಾರಯ್ಯನ ವಚನ. ಕಾಯಕವೆ ಕೈಲಾಸ ಅನ್ನುವ ಮಾತನ್ನು ಹೇಳಿದವ ಆಯ್ದಕ್ಕಿ ಮಾರಯ್ಯ. ಈತ ಕಲ್ಯಾಣದಲ್ಲಿ ನೆಲದ ಮೇಲೆ ಚೆಲ್ಲಿದ ಅಕ್ಕಿಯನ್ನು ಆಯ್ದು ಹೊಟ್ಟೆ ಹೊರೆದುಕೊಳ್ಳುವ ಕಾಯಕ ಮಾಡುತ್ತಿದ್ದನಂತೆ.
ಕಾಯಕವೆಂದರೆ ದೇಹ ಶ್ರಮದ ಕೆಲಸ. ಅದರಿಂದ ಹೊಟ್ಟೆಯ ಪಾಡು ನೋಡಿಕೊಳ್ಳಬೇಕು ಅನ್ನುವ ನಂಬಿಕೆ. ಕಾಯಕ ಎಷ್ಟು ಮುಖ್ಯವೆಂದರೆ ವೀರಶೈವರು ಬಹಳ ಮುಖ್ಯವೆನ್ನುವ ಗುರು ಲಿಂಗ ಜಂಗಮ ಎಲ್ಲವನ್ನೂ ಮರೆಯುವಷ್ಟು ಕಾಯಕದಲ್ಲಿ ಮಗ್ನನಾಗಬೇಕು ಅನ್ನುತ್ತಾನೆ. ದೇವರಿದ್ದರೆ ಅವನೂ ಕಾಯಕದಲ್ಲಿಯೇ ಇರುತ್ತಾನೆ. ಕಾಯಕಕ್ಕಿಂತ ದೊಡ್ಡವನಲ್ಲ.
ದೇಹಶ್ರಮವನ್ನೂ ಆಧ್ಯಾತ್ಮವನ್ನೂ ಸಮೀಕರಿಸುವುದಲ್ಲ, ದಿನನಿತ್ಯದ ಬದುಕಿಗೆ ಅಗತ್ಯವಾಗಿ ಮಾಡಲೇಬೇಕಾದ ಕೆಲಸಕ್ಕಿಂತ ಮಿಗಿಲಾಗದ ಆಧ್ಯಾತ್ಮ ಇಲ್ಲ ಅನ್ನುವ ನಿಲುವು ಇದು.
ಕಾಯಕವೆ ಕೈಲಾಸ ಅನ್ನುವ ಮಾತು `ಕಾಯ ವಿಡಿದಿಹನ್ನಬರ’ ಎಂದು ಆರಂಭವಾಗುವ ಮನಸಂದ ಮಾರಿತಂದೆಯ ವಚನದಲ್ಲೂ ಬರುತ್ತದೆ. ಆಯ್ದಕ್ಕಿ ಮಾರಯ್ಯನ ವಚನವೇ ಸ್ವಲ್ಪ ಬದಲಾವಣೆಯೊಂದಿಗೆ ನಂಜುಂಡ ಶಿವನಲ್ಲೂ ಕಾಣುತ್ತದೆ.
*****