ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ
ಆಡಿನ ಮರಿ ಆನೆಯಾಗಬಲ್ಲುದೆ
ಸೀಳುನಾಯಿ ಸಿಂಹದ ಮರಿಯಾಗಬಲ್ಲುದೆ
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಆಮುಗೇಶ್ವರಾ
[ಗಾವಿಲ-ಹಳ್ಳಿಗ, ಅಶಿಕ್ಷಿತ]
ಆಮುಗೆ ರಾಯಮ್ಮನ ವಚನ. ಅರಿವು, ಅರಿತದ್ದರ ಆಚರಣೆ, ಒಳ್ಳೆಯ ಜ್ಞಾನ ಇವು ಇಲ್ಲದೆ ಇದ್ದರೆ ಕಾಗೆಯ ಮರಿ ತಾನು ಕೋಗಿಲೆ ಎಂದುಕೊಂಡಂತೆ, ಆಡಿನ ಮರಿ ತಾನು ಆನೆಯ ಮರಿ ಎಂದುಕೊಂಡಂತೆ, ಸೀಳುನಾಯಿ ತನ್ನನ್ನು ಸಿಂಹದ ಮರಿ ಎಂದು ಕರೆದುಕೊಂಡಂತೆ. ಹಾಗೆ ಅಂದುಕೊಳ್ಳುವವರ ಮುಖ ನೋಡಬಾರದು ಅನ್ನುತ್ತಾಳೆ.
ತಾವು ಏನೋ ಎಂದು ಹೇಳಿಕೊಳ್ಳುವವರು ನಿಜವಾಗಿಯೂ ಅದು ಆಗಿರುವುದಿಲ್ಲ ಅನ್ನುವ ಸತ್ಯ ಸೂಕ್ಷ್ಮವಾದ ಹೆಣ್ಣು ಪ್ರಜ್ಞೆಗಷ್ಟೇ ಅರಿವಾಗುವ ಸಂಗತಿ ಅನ್ನಿಸುತ್ತದೆ.
*****