ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ
ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ
ಹುಡು ಹುಡು ಎಂದಟ್ಟುವರಲ್ಲದೆ
ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರಲ್ಲದೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ
ಅನುಭಾವವ ಮಾಡಿದಡೆ ಮಚ್ಚುವರೆ
ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂತ ಕರಕಷ್ಟ
ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
ಮೋಳಿಗೆ ಮಾರಯ್ಯನ ಹೆಂಡತಿ ಮೋಳಿಗೆ ಮಹಾದೇವಿಯ ವಚನ ಇದು. ಪಚ್ಚಕರ್ಪೂರವು ಸುಗಂಧಭರಿತ ನಿಜ. ಊರ್ವಶಿ ಕರ್ಪೂರವನ್ನು ಮೆದ್ದು ಮುದ್ದುಕೊಟ್ಟರೆ ರುಚಿ, ಅದೇ ಹಂದಿ ಕರ್ಪೂರವನ್ನು ಮೆದ್ದು ಮುತ್ತುಕೊಟ್ಟರೆ ಅಸಹ್ಯ. ವಚನಗಳೇನೋ ದೊಡ್ಡ ಮಾತುಗಳು ನಿಜ. ಆದರೆ ನಡೆ, ನುಡಿಗಳಲ್ಲಿ ಪಕ್ವವಾದವರು ಅವನ್ನು ಓದಿ, ಹೇಳಿದರೆ ಹಿತ, ಹಾಗಲ್ಲದವರು ಹೇಳಿದರೆ ಹಂದಿಗಿಂತ ಅಸಹ್ಯ ಈ ಮಾತನ್ನು ಓದುಗರ ಜವಾಬ್ದಾರಿ ಎಂದೂ ವಿವರಿಸಿಕೊಳ್ಳಬಹುದು. ಕನ್ನಡವನ್ನು ಓದಲು ಬಂದ ಮಾತ್ರಕ್ಕೆ ಕನ್ನಡದಲ್ಲಿ ಬರೆದಿರುವುದೆಲ್ಲಾ ಅರ್ಥವಾಗಬೇಕೆಂದಿಲ್ಲ. ಓದುಗರ ಮನಸ್ಸೂ ಪಕ್ವವಾಗಿದ್ದಾಗ ಓದಿದ್ದಕ್ಕೆ ಹೊಸ ಅರ್ಥ ಹೊಳೆದು ಅದನ್ನು ಅವರು ಹೇಳಿದರೆ ಕೇಳುವವರಿಗೂ ಊರ್ವಶಿಯ ಚುಂಬನದಂತೆ ಹಿತವಾಗಿರುತ್ತದೆ.
ನಮ್ಮ ಕಾಲದ ದುರಂತವೆಂದರೆ ಯಾರು ಏನೇ ಹೇಳಿದರೂ ಓದುಗರಿಗೆ ಯಾವ ಜವಾಬ್ದಾರಿಯೂ ಇಲ್ಲ, ಅರ್ಥವತ್ತಾಗಿ ಹೇಳುವುದು ಲೇಖಕರ, ಮಾತನಾಡುವವರ ಜವಾಬ್ದಾರಿ ಎಂದು ಭ್ರಮಿಸಿರುವುದು. ಕೇಳಿದ ಓದಿದ ಮಾತಿನ ಬಗ್ಗೆ ಕಟು ಟಿಪ್ಪಣಿ ಮಾಡುವ ಮೊದಲು ಓದುಗರು ತಾವು ಊರ್ವಶಿಯಂಥವರೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದೇನೋ! ತೀರ ಇಷ್ಟು ಸಂಕುಚಿತ ಅರ್ಥದಲ್ಲಿ ಅಲ್ಲದಿದ್ದರೂ ಸ್ವೀಕರಿಸುವವರ ಯೋಗ್ಯತೆಯನ್ನು ಈ ವಚನ ಎತ್ತಿ ಹೇಳುತ್ತಿರುವುದು ಗಮನಾರ್ಹವೆಂದೇ ತೋರುತ್ತದೆ.
*****