ಉಂಬವರೆಲ್ಲ ಒಂದೇ ಪರಿಯೇ
ತಮ್ಮ ತಮ್ಮ ಬಾಯಿಚ್ಛೆಯಲ್ಲದೆ
ಇಕ್ಕುವರಂದಕ್ಕೆ ಉಂಡಡೆ
ತನಗೇ ಸಿಕ್ಕೆಂದೆ ಮಾರೇಶ್ವರಾ
[ಸಿಕ್ಕೆಂದೆ-ತೊಡಕು ಎಂದೆ]
ಮಾರೇಶ್ವರೊಡೆಯನ ವಚನ. ಎಲ್ಲರೂ ಒಂದೇ ಬಗೆಯಲ್ಲಿ ಉಣ್ಣುತ್ತಾರೇನು? ಇಲ್ಲ. ಅವರವರ ಬಾಯಿಯ ಇಚ್ಛೆ ಏನನ್ನು, ಎಷ್ಟು ಉಣ್ಣುತ್ತಾರೆ ಅನ್ನುವುದನ್ನು ನಿರ್ಧರಿಸುತ್ತದೆ. ಬಡಿಸುವವರು ಒತ್ತಾಯಮಾಡಿದರೆಂದೋ, ಅಕ್ಕರೆ ತೋರಿದರೆಂದೋ ಅವರಿಚ್ಛೆಗೆ, ಅವರ ತೃಪ್ತಿಗೆ ಉಂಡರೆ ನಮಗೇ ಕೇಡು.
ಬರಿಯ ಊಟದ ಮಾತಲ್ಲ, ಯಾವುದೇ ಆಗಲಿ ತನ್ನೊಳಗಿನಿಂದ ಸಹಜವಾಗಿ ಮೂಡಿಬರದಿದ್ದರೆ ಅದರಿಂದ ತೊಂದರೆ ತಪ್ಪಿದ್ದಲ್ಲ ಅನ್ನುತ್ತಿದೆ ಈ ವಚನ.
*****