ಅರಸಿ ಅರಸಿ ಹಾ ಹಾ ಎನುತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು
ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನದಲ್ಲೂ ಬರಬಹುದಾದಂಥವು ಅನ್ನಿಸುತ್ತದೆ. ಗುಹೇಶ್ವರ ಅನ್ನುವುದರ ಬದಲಾಗಿ ಚನ್ನಮಲ್ಲಿಕಾರ್ಜುನ ಎಂದಿದ್ದರೆ ಅವಳ ವಚನವಲ್ಲ ಅನ್ನುವ ಧೈರ್ಯ ಯಾರಿಗೆ ಬಂದೀತು! ಹಾಗೆಂದರೆ ವಚನಗಳನ್ನು ಓದಿ ನಾವು ಕಲ್ಪಿಸಿಕೊಂಡ ಅಲ್ಲಮನ ಮಾತಿನ ರೀತಿಯದಲ್ಲ ಅನ್ನಿಸುತ್ತದೆ ಎಂದಷ್ಟೆ ಅರ್ಥ. ವಚನ ರಚನೆಯಾಗಿ ಮುನ್ನೂರು ವರ್ಷಗಳ ನಂತರದ ಹಸ್ತಪ್ರತಿಗಳಲ್ಲಿ ಸಿಗುವ ವಚನಗಳಲ್ಲಿ ಅಂಕಿತ ಬದಲಾಗಿಲ್ಲವೆಂದು ಹೇಳುವುದು ಹೇಗೆ! ಇದು ಇಂಥವರ ವಚನ ಅನ್ನುವುದು ಒಂದು ರೂಢಿಯಷ್ಟೆ, ಇನ್ನೇನೂ ಅಲ್ಲ. ವಚನಗಳು ಮನುಷ್ಯ ಮನಸ್ಸಿನ ಸಾಧ್ಯತೆಗಳ ಭಾಷಿಕ ರೂಪಗಳು. ಯಾರಾದರೂ ಹೇಳಿರಬೇಕಲ್ಲ ಅನ್ನುವುದಕ್ಕೆ ವಚನಕ್ಕೆ ಒಬ್ಬೊಬ್ಬ ವಚನಕಾರರನ್ನು ಕಲ್ಪಿಸಿಕೊಂಡು ಇವರ, ಅವರ ವಚನ ಎಂದು ವಾಗ್ವಾದ ಮಾಡುತ್ತಾ ವಚನಗಳನ್ನು ಮರೆತಿದ್ದೇವೆ.
ಇರಲಿ. ಮೇಲು ಮೇಲಿನ ತೋರಿಕೆಯನ್ನು ಮರೆತರೂ ಕೊನೆಯ ಸಾಲು ಕೂಡ ಅಕ್ಕ-ಅಲ್ಲಮ ಇವರಿಗೆ ಸಮಾನವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಣ್ಣಮೊದಲಿನಲ್ಲಿ ಇರುವವನ್ನು, (ಮತ್ತೆ ಯಾರು, ನೋಡುತ್ತಿರುವವನೇ ಅಲ್ಲವೆ!) ಹೊರಗೆ ಹುಡುಕಿ, ಹಾಗೆ ಹುಡುಕಿ ದಣಿದೆ ಅನ್ನುತ್ತಿದೆ ಈ ಸಾಲು. ದಣಿದ ಪರಿಯನ್ನು ಮೊದಲೆರಡು ಸಾಲುಗಳು ಹೇಳುತ್ತಿವೆ.
ತಾನು ಹುಡುಕುತ್ತಿರುವುದು ತನ್ನೊಳಗೇ ಇರುವುದನ್ನು ಅನ್ನುವ ನಿಲುವು ಅಕ್ಕನದೂ ಹೌದು. ಆದ್ದರಿಂದಲೇ `ನೀನೇಕೆ ಮುಖದೋರೆ’ ಎಂದು ಅಕ್ಕ ಕೂಡ ಅಲವತ್ತುಕೊಳ್ಳುವುದುಂಟು. ಬರಿಯ ಅಕ್ಕ ಅಲ್ಲಮ ಮಾತ್ರವಲ್ಲ ನಾವು ಕೂಡ ನಮ್ಮೊಳಗೆ ಬಿಂಬಿತವಾದದ್ದನ್ನೆ ಹೊರಗೆ ಕಾಣಲು ಯತ್ನಿಸುತ್ತ ದಣಿಯುವವರಲ್ಲವೇ? ಹಾಗಾಗಿ ಇಂಥ ವಚನಗಳು ನಮ್ಮ ಮಾತುಗಳೂ ಆಗುತ್ತವೆ.
*****