ಇಂದು ಜಗತ್ತಿನಾದ್ಯಂತ ಪ್ರತಿವರ್ಷ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸು. ೨೦ ಲಕ್ಷ ಬರಹಗಳು ನಾನಾ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯಕ್ಕೆ ಸಂಬಂಧಪಟ್ಟ ಬರಹಗಳ ಬಗ್ಗೆ ವಿವರವಾದ ಮಾಹಿತಿ ಯಾವುದೇ ಸಮಯದಲ್ಲಿ ದೊರೆಯುವಂತಾಗಲು ಕಂಪ್ಯೂಟರ್‌ನ ಮೊರೆ ಹೋಗಬೇಕಿತ್ತು. ೧೯೬೪ರಲ್ಲಿ ಕಂಪ್ಯೂಟರ್‌ವೊಂದನ್ನು ವೈದ್ಯಕೀಯಕ್ಕೆ ಸಹಾಯಕರ ರೂಪದಲ್ಲಿ ಬಳೆಸಲಾಯಿತು. ಇದಕ್ಕಾಗಿಯೇ ‘ಇಂಡೆಕ್ಸ್ ಮೆಡಿಕಸ್’, ಎಂಬ ಸಾಪ್ಟವೇರ್‌ಅನ್ನು ಸಿದ್ದಪಡಿಸಲಾಯಿತು. ಈ ಸಾಫ್ಟ್‌ವೇರ್ ಅನ್ನು ವೈದ್ಯಕೀಯ ಬರಹಗಳ ವಿಷಯಗಳ ಆಧಾರದ ಮೇಲೆ ಪಟ್ಟಿ ಮಾಡಲಾಯಿತು. ನಂತರದ ದಿನಗಳಲ್ಲಿ ಸುಧಾರಣೆಯನ್ನು ಪಡೆದ ಈ ಸಾಫ್ಟ್‌ವೇರ್ ಬರಹಗಳ ಪಟ್ಟಿಯ ಜೊತೆಗೆ ಪ್ರತಿಬರಹದ ವಿವರಗಳ ಸಂಪೂರ್ಣ ಮಾಹಿತಿ ನೀಡು ವಂತಾಯಿತು. ಸಾಫ್ಟ್‌ವೇರ್ ನಲ್ಲಾದ ಸುಧಾರಣೆಯೊಂದಿಗೆ ಅದರ ಹೆಸರೂ ಬದಲಾವಣೆ ಕಂಡು ಇಂಡೆಕ್ಸ್ ಮೆಡಿಕಸ್ನಿಂದ “ಮೆಡಾಲಾರ್ಸ್” ಎಂದಾಯಿತು. Medalars ಎಂಬುವುದು Medical Literature and Analysis and Retrieval System ಎಂಬುದರ ಸಂಕ್ಷಿಪ್ತರೂಪ.
೧೯೭೦ರ ನಂತರ ಮೆಡಾಲಾರ್ಸ್‌ನ ಉಪಯೋಗ ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತು ಕಂಪ್ಯೂಟರನ ಮೇಲೆ ಕೇಬಲ್‌ಗಳ ಮೂಲಕ ಸಂಪರ್ಕಿಸಿ ಪಡೆಯುವಂತಾಗಲು ‘ಮೆಡೆಲೈನ್’ ಎಂಬ ಅಂತರರಾಷ್ಟ್ರೀಯ ಸೇವಾ ಜಾಲ ಪ್ರಾರಂಭವಾಯಿತು. ಇಂದು ಪ್ರಂಪಚದಾದ್ಯಂತ ವೈದ್ಯರು ತಮ್ಮಇಚ್ಚಾನುಸಾರ ಬೇಕಾದ ಬರಹಗಳನ್ನು ಈ ಕಂಪ್ಯೂಟರ್ ಯುಕ್ತ ವೈದ್ಯಕೀಯ ಬರಹಗಳ ಬಂಡಾರದಿಂದ ಹೆಕ್ಕಿ ತೆಗೆದು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವಂತಾಗಿದೆ. ಸು. ೩೪೦೦ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವೈದ್ಯಕೀಯ ವಿಷಯಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸು. ೫೦ ಲಕ್ಷ ಕ್ಕೂ ಹೆಚ್ಚು ಬರಹಗಳು (ಎಲ್ಲ ವಿವರಗಳೊಂದಿಗೆ) ಈ ಬರಹಗಳ ಬಂಡಾರದಲ್ಲಿ ಲಭ್ಯವಾಗುತ್ತವೆ, ಇದೊಂದು ವೈದ್ಯಕೀಯ ‘ವಿಶ್ವಕೋಶ’ವೆಂದೇ ಹೇಳಬಹುದು.
*****