ಜೀವನದ ದಾರಿ ನಾವು ಯೋಚಿಸಿದ ಹಾಗೆ ಯಾವಾಗಲೂ ಸುಖಕರವಾಗಿ ಇರುವುದಿಲ್ಲ. ಅದು ಹೂಗಳ ಹಾಸಿಗೆಯಲ್ಲ. ಕಲ್ಲು, ಮುಳ್ಳು, ಏರು, ತಗ್ಗು, ಪ್ರಪಾತ ಎಲ್ಲವೂ ಜೀವನದ ದಾರಿಯಲ್ಲಿದೆ. ಏನೇನೋ ತಿರುವುಗಳು, ಅನಿರೀಕ್ಷಿತ ಆಘಾತಗಳು, ಅಪಘಾತಗಳು, ಮನನೋಯಿಸುವ ಪ್ರತಿಕೂಲ ಪರಿಸ್ಥಿತಿಗಳು, ಮುಂದಿನ ದಾರಿಯನ್ನೇ ಕೊಚ್ಚಿಕೊಂಡು ಹೋಗುವ ಬಿರುಗಾಳಿಗಳು, ಪ್ರತೀ ಕ್ಷಣದಲ್ಲೂ ಏಟುಗಳು, ಎದ್ದು ನಿಲ್ಲುವುದೇ ಸಾಧ್ಯವಾಗದ ಕುಸಿತಗಳು, ಇಳಿಸಲಾಗದ ಭಾರಗಳು. ಇವು ಜೀವನದ ರೀತಿ, ಇಂತಹ ಕಷ್ಟಕರ ಘಳಿಗೆಗಳಲ್ಲಿ ಹುಚ್ಚೇ ಹಿಡಿದಂತಾಗುವುದು ಸಹಜ. ಜೀವನ ಬೇಡವೆನಿಸಿದರೂ ವಿಚಿತ್ರವಲ್ಲ.
ಆದರೆ ಯಾವ ಘಳಿಗೆಯಲ್ಲೂ ಜೀವನ ಬೇಡವೆನಿಸಬಾರದು. ಬೇಡವೆನಿಸಿದ ಕೂಡಲೇ ಮಾನಸಿಕ ಕುಸಿತ ಕಾಣಿಸಿಕೊಳ್ಳುತ್ತದೆ. ಜೀವನದ ಸೋಲು ಇರುವುದೇ ಮಾನಸಿಕವಾಗಿ ಕುಸಿಯುವುದರಲ್ಲಿ. ಜೀವನ ಸೋತು ಕುಸಿಯುವುದಕ್ಕೆ ಅಲ್ಲ. ಇದ್ದಷ್ಟು ದಿನ ಗೆದ್ದು ಬಾಳುವುದಕ್ಕೆ. ಇದಕ್ಕೆ ಜೀವನವನ್ನು ಬಂದ ಹಾಗೆ ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳುವ ಛಲ ಮುಖ್ಯ.
ಯಾರನ್ನಾದರೂ ಒಮ್ಮೆ ಕೇಳಿನೋಡಿ ಅಥವಾ ನಿಮ್ಮನ್ನು ನೀವೇ ಕೇಳಿಕೊಳ್ಳಿ ಜೀವನದ ಕೆಲವು ಸಂತಸದ ಕ್ಷಣಗಳನ್ನು ನೆನಸಿಕೊಳ್ಳಿ ಎಂದು. ತತ್‌ಕ್ಷಣಕ್ಕೆ ಒಂದೂ ನೆನಪಿಗೆ ಬರುವುದಿಲ್ಲ. ಆದರೆ, ಪ್ರತಿ ಯೊಂದು ದುಃಖದ ಕ್ಷಣಗಳು ನೆನಪಿನಲ್ಲಿರುತ್ತವೆ. ಹೃದಯಕ್ಕೆ ಅದರಿಂದಾದ ನೋವುಗಳು ಆ ನೆನಪುಗಳೊಂದಿಗೆ ನುಗ್ಗಿ ಬರುತ್ತವೆ. ಕಣ್ಣುಗಳು ಒದ್ದೆಯಾಗುತ್ತವೆ. ಯಾಕೆಂದರೆ ಸಂತಸದ ಅನುಭವಗಳು ಆ ಕ್ಷಣಕ್ಕೆ ಸೀಮಿತವಾಗಿರುತ್ತವೆ. ಯಾವ ಪಾಠವನ್ನೂ ಕಲಿಸಿರುವುದಿಲ್ಲ. ದುಃಖದ ಅನುಭವಗಳು ಮನದಾಳದಲ್ಲಿ ಗೂಡು ಕಟ್ಟಿರುತ್ತವೆ. ನಾವದನ್ನು ನೆನಪಿನ ಬುತ್ತಿಯಲ್ಲಿ ಜೋಪಾನವಾಗಿ ಕಟ್ಟಿ ಇಡುತ್ತೇವೆ. ಮರೆಯ ಬೇಕೆಂದರೂ ಮರೆಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಸುಖ ನಮಗೆ ಯಾವ ಪಾಠವನ್ನೂ ಕಲಿಸಿರುವುದಿಲ್ಲ. ಬದಲಾಗಿ ಅಹಂಕಾರಿಗಳನ್ನಾಗಿ ಮಾಡಿರುತ್ತವೆ. ಕುರುಡರನ್ನಾಗಿ ಮಾಡಿರುತ್ತವೆ. ಆದರೆ ಕಷ್ಟಗಳು ಹಲವಾರು ಪಾಠಗಳನ್ನು ಕಲಿಸಿರುತ್ತವೆ. ನಮ್ಮಲ್ಲಿರುವ ಹಲವಾರು ವೀಕ್‌ನೆಸ್‌ಗಳನ್ನು ತೋರಿಸಿಕೊಟ್ಟಿರುತ್ತವೆ. ಯಾವಾಗಲೂ ಎಚ್ಚರಿಕೆಯಿಂದ ಇರುವುದನ್ನು ಕಲಿಸಿರುತ್ತವೆ. ಜೀವನವನ್ನು ಎದುರಿಸಲು ಬೇಕಾದ ಎದೆಗಾರಿಕೆಯನ್ನು, ಏನನ್ನಾದರೂ ಎದುರಿಸುವ ಸಹನೆಯನ್ನು ಕಲಿಸಿರುತ್ತವೆ. ನಮ್ರವಾಗಿರಲು ಕಲಿಸಿರುತ್ತವೆ. ಮಾನವೀಯವಾಗಿರಲು ಕಲಿಸಿರುತ್ತವೆ. ಅದಕ್ಕೇ ಹೇಳುವುದು ಜೀವನದಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳು ಯಾವತ್ತೂ ಸಂತಸಕರವಾಗಿರುವುದಿಲ್ಲ. ಆದರೆ, ಆ ಪ್ರತಿಕೂಲ ಪರಿಸ್ಥಿತಿಗಳು ನಮಗೆ ಕಲಿಸುವ ಪಾಠಗಳನ್ನು ಬೇರೆಲ್ಲಿಯೂ ಕಲಿಯಲಾಗದು.
ಜೀವನದ ಎಲ್ಲ ಕಷ್ಟಗಳ ಹಿಂದೆ ಒಂದು ದರ್ಶನವಿದೆ. ಮುಂದಿನ ಜೀವನದ ದಾರಿಗೆ ಬೆಳಕು ತೋರುವ ಬೆಳಕಿದೆ. ಅದನ್ನು ನಾವು ಗುರುತಿಸಿಕೊಳ್ಳಬೇಕು.
ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನವೇ ನಮಗೆ ಕವಲು ದಾರಿಗಳನ್ನು ತೋರಿಸಿಕೊಡುತ್ತದೆ. ಕವಲುದಾರಿಗಳನ್ನು ಆರಿಸಿಕೊಳ್ಳುವಾಗ ಜೀವನಪ್ರೀತಿಯಿಂದ ಆರಿಸಿಕೊಳ್ಳಬೇಕಲ್ಲದೆ ಸೇಡಿನ ಭಾವನೆಯಿಂದ ಖಂಡಿತಾ ಅಲ್ಲ. ಒಂದಂತೂ ನಿಜ. ಜೀವನ ಯಾರನ್ನೂ ಕಾಯುತ್ತಾ ನಿಲ್ಲುವುದಿಲ್ಲ. ಎಲ್ಲರ ನೋವು-ನಲಿವುಗಳನ್ನು ತನ್ನ ಉದರದೊಳಗೆ ಸೇರಿಸಿಕೊಂಡು ಎಲ್ಲರನ್ನೂ ಎಳೆದುಕೊಂಡೇ ಮುಂದೆ ಸಾಗುತ್ತಿರುತ್ತದೆ. ಜೀವನದೊಡನೆ ಓಡಲಾಗದೆ ಕುಸಿದರೆ ಅದೇ ಆತ್ಮಹತ್ಯೆಯಾಗುತ್ತದೆ. ಜೀವನಕ್ಕೆ ಯಾರನ್ನೂ ಕಾಯುವ ವ್ಯವಧಾನವಿಲ್ಲ. ಕುಸಿದವರನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗುವುದೇ ಅದರ ಕಾಯಕ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಜೀವನದಲ್ಲಿ ಸೋತು ಕುಸಿಯುವುದು ಬೇಡ, ಎದ್ದು ಓಡಬೇಕು. ಇವತ್ತಿನ ಕಷ್ಟದ ಹಿಂದೆ ಮುಂದಿನ ಸುಖವಿದೆ. ಇವತ್ತಿನ ಸುಖದ ಹಿಂದೆ ಮುಂದಿನ ಕಷ್ಟವಿದೆ. ನಮಗದರ ಅರಿವು ಮಾತ್ರ ಇರುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಉತ್ತರ ಕಾಲಗರ್ಭದಲ್ಲೇ ಅಡಗಿದೆ ಎನ್ನುವುದನ್ನು ತಿಳಿದುಕೊಂಡರೆ ಜೀವನದಲ್ಲಿ ಕುಸಿಯುವ ಸಂದರ್ಭವೇ ಇಲ್ಲ.
ಆದರೆ, ಒಂದು ಮಾತ್ರ ನಿಜ, ಜೀವನದಲ್ಲಿ ಕಷ್ಟಗಳು ತರುವ ಕಾವನ್ನು ತಗ್ಗಿಸಲು ಆಗಾಗ ಸುಖದ ತಂಪಾದ ಅನುಭವಗಳೂ ಇರಬೇಕು.
*****
(ಚಿಂತನ- ಅಕಾಶವಾಣಿ) (ಮಂತಣಿ)