ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ
ಒಂದಿಷ್ಟು ಅಳು ಕೊಡುತ್ತೀರ ನನಗೆ?
ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ
ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ?
ಸದ್ಯ ನಿಮ್ಮ ಭೂಮಿ ಬೇಡ ಬಂಗಲೆ ಬೇಡ
ಮೊದಲು ಒಂದಿಷ್ಟು ಅಳು ಕೊಡುತ್ತೀರ ನನಗೆ?
ನಿಮ್ಮ ಮರ್‍ಯಾದೆ ಮಹಲು ಕೇಳುತ್ತಿಲ್ಲ
ಸುಖದ ಅಮಲು ಬೇಡುತ್ತಿಲ್ಲ
ಬಡವನಿಗೆ ಬೇಕಿಲ್ಲ ಬಡಿವಾರ ಬದುಕು
ಒಂದಿಷ್ಟು ಅಳು ಕೊಡಿ ಅಷ್ಟೇ ಸಾಕು.
ನನಗೆ ಗೊತ್ತು-
ಧರಣಿ ಕೂತರೆ ಒಂದಿಷ್ಟು ಧರಣಿ ಕೊಡಬಲ್ಲಿರಿ
ಹೋರಾಟ ಹೂಡಿದರೆ ಹಣ ಹಂಚಬಲ್ಲಿರಿ
ಕಾಲು ಕಟ್ಟಿದರೆ ಕೆಲಸ ಕೊಡಬಲ್ಲಿರಿ
ದೇವರೆಂದರೆ ಸಾಕು, ಅಡ್ಡಾಗಿ ಹರಸಬಲ್ಲಿರಿ.
ಆದರೆ ಹೇಳುತ್ತೇನೆ ಕೇಳಿ-
ಅಳುವುದನ್ನು ನೀವು ಖಂಡಿತ ಕೊಡುವುದಿಲ್ಲ
ಯಾಕೆಂದರೆ-
ಎಲ್ಲ ಇದ್ದೂ ನಿಮ್ಮಲ್ಲಿ ಅಳುವೇ ಇಲ್ಲ
ಅಳುವಿಲ್ಲದ ನೀವು ಮನುಷ್ಯರೇ ಅಲ್ಲ.
*****