ರಾವಣಾಂತರಂಗ – ೭

ರಾವಣಾಂತರಂಗ – ೭

ಅಕ್ಷಯಕುಮಾರನ ಅವಸಾನ

ಮಾನಸಿಕವಾಗಿ ತೊಳಲಾಡುತ್ತಾ ಹಾಗೆಯೇ ನಿದ್ದೆಹೋದೆ, ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು. “ಇದೇನಿದು ಇಷ್ಟೊಂದು ನಿದ್ದೆ ಯಾವ ಕೇಡಿಗೋ! ರಾಜ್ಯದಲ್ಲಿ ಅನಾಹುತಗಳಾಗಿವೆಯೋ, ಗಮನಿಸಬೇಕು” “ರಾವಣೇಶ್ವರನಿಗೆ ಜಯವಾಗಲಿ ಲಂಕಾಧಿಪನಿಗೆ ಜಯವಾಗಲಿ” “ಇದೇನಿದು ಸುಮಾಲಿ ; ನೀನಿಲ್ಲಿಗೆ ಬಂದೆ, ವಿಶೇಷ ವಿಷಯವಿರುವುದೇ?” “ದೊರೆಯೇ ಒಂದು ದೊಡ್ಡ ಕಪಿಯು ಬಂದು ಲಂಕೆಯ ಉದ್ಯಾನವನಗಳನ್ನು ನಾಶ ಮಾಡುತ್ತಿದೆ. ಅವನು ಶ್ರೀರಾಮಚಂದ್ರನ ದೂತನಂತೆ, ಅವನಿಂದ ಲಂಕೆಯು ಹಾಳಾಗುತ್ತಿದೆ. ಪ್ರಾರಂಭದಲ್ಲೇ ಅವನನ್ನು ತಡೆಯದಿದ್ದರೆ ದೊಡ್ಡ ಅನಾಹುತವೇ ಆಗುತ್ತದೆ” “ಏಯ್ ಯಾರ ಮುಂದೆ ಮಾತನಾಡುತ್ತೀದ್ದೀಯಾ ಎನ್ನುವ ಪರಿಜ್ಞಾನವಿದೆಯಾ, ಒಂದು ಕಪಿಯು ಬಂದು ವನವನ್ನು ಮುರಿದಿದೆಯಂತೆ, ವನಕಾಯುವರನ್ನು ಕೊಂದಿತಂತೆ ತನ್ನ ಸಂಗಡ ಯುದ್ಧ ಮಾಡಲು ವೀರರನ್ನು ಕಳಿಸು ಎಂದಿತಂತೆ. ಈ ಅಂತೆಕಂತೆಗಳನ್ನು ನಂಬುವಷ್ಟು ಮೂರ್ಖಶಿಖಾಮಣಿ ಯಲ್ಲ ಈ ರಾವಣೇಶ್ವರ ಇನ್ನೊಂದು ಅಪದ್ಧ ಮಾತನಾಡಿದರೆ ನಿನ್ನ ಹಲ್ಲು ಉದುರಿಸುತ್ತೇನೆ ನಡೆಯಾಚೆ” ಕೋಪದಿಂದ ಗದರಿಸಿದೆ.

“ಒಡೆಯ ನನ್ನನ್ನೇಕೆ ನಿಂದಿಸುವೆ. ಬೇಕಾದರೆ ಪ್ರತ್ಯಕ್ಷವಾಗಿ ಬಂದು ನೋಡಿ. ಊರಲ್ಲಿ ಸತ್ತವರ ಹೆಂಡತಿ ಮಕ್ಕಳನ್ನು ಕೇಳಿ, ಅವರ ದುಃಖವನ್ನು ನೋಡಿ” ಸುಮಾಲಿಯ ಮಾತು ಕೇಳಿ ಆಶ್ಚರ್ಯವಾಯಿತು. ಸಾಮಾನ್ಯ ಕಪಿಯೆಂದು ಸುಮ್ಮನಿರಬಾರದು. ವಾನರ ಶ್ರೇಷ್ಠವಾಲಿಯನ್ನು ಸಾಮಾನ್ಯನೆಂದು ತಿಳಿದು ಹೆಡೆಮುರಿಕಟ್ಟಿಕೊಂಡು ಮೂರು ಸಮುದ್ರ ನೀರು ಕುಡಿದು ಅದೃಷ್ಟವಶಾತ್ ಬದುಕಿ ಬಂದೆ, ಈಗ ಸಣ್ಣ ಕಪಿಯೆಂದು ಅಲಕ್ಷ್ಯಮಾಡಿದರೆ ಅನಾಹುತಗಳೇ ನಡೆದಾವು. ಇರಲಿ, ನಾನೇ ಹೋಗಿ ಒಂದೆಜ್ಜೆ ಆ ವಾನರನಿಗೊಂದು ಗತಿಕಾಣಿಸುವೆ” ಎಂದು ಮುಂದಡಿಯಿಟ್ಟೆ ಆಗ ನನ್ನ ಎರಡನೆಯ ಮಗ ಅಕ್ಷಯಕುಮಾರನು “ಅಪ್ಪಾಜಿ ಉಗುರಿನಿಂದ ಹೋಗುವುದಕ್ಕೆ ಕೊಡಲಿ ಯಾಕೆ? ನನಗಪ್ಪಣೆ ಕೊಡಿ ಕ್ಷಣಾರ್ಧದಲ್ಲಿ ಆ ಮಾಯಾವಿ ಕಪಿಯನ್ನು ಹಿಡಿದು ನಿಮ್ಮ ಮುಂದೆ ನಿಲ್ಲಿಸುತ್ತೇನೆ” ಅವನ ಪರಾಕ್ರಮವನ್ನು ಪಿತೃಭಕ್ತಿಯನ್ನು ಕಂಡು ಹೆಮ್ಮೆಯಿಂದ “ಒಳ್ಳೆಯದು ಮಗನೇ ಜಯಶಾಲಿಯಾಗಿ ಮರಳಿ ಬಾ” ಎಂದು ವೀಳೆಯವನ್ನು ಕೊಟ್ಟು ಅವನ ಸಹಾಯಕಾಗಿ ಸೇನಾನಾಯಕರನ್ನು ಮಂತ್ರಿ ಕುಮಾರರನ್ನು ಕಳಿಸಿದೆನು.

ಮಗ ಯುದ್ಧಕ್ಕೆ ಹೋದರೂ ಮನಸೆಲ್ಲಾ ಅವನ ಹಿಂದೆಯೇ ಶತಪಥ ತಿರುಗುತ್ತಾ ಯಾವ ಅನಿಷ್ಟ ಸುದ್ದಿ ಕಾದಿದೆಯೋ! ಅವನನ್ನು ಕಳಿಸುವ ಬದಲು ನಾನೇ ಹೋಗಬೇಕಾಗಿತ್ತು. ನೋಡೋಣ, ಅಕ್ಷಯಕುಮಾರನೇನು ಸಾಮಾನ್ಯನಲ್ಲ. ವಾನರನನ್ನು ಬಂಧಿಸಿಯೇ ತರುತ್ತಾನೆ. ಅಷ್ಟರಲ್ಲಿ ಕೆಲವು ರಕ್ಕಸರು ಓಡಿಬಂದು “ರಾಕ್ಷಸೇಂದ್ರನೇ ನೀನು ಕಳುಹಿಸಿದ ಸೇನಾ ನಾಯಕರು, ಮಂತ್ರಿ ಕುಮಾರರು ಮೃತರಾದರು. ಅಕ್ಷಯಕುಮಾರನು ಒಬ್ಬನೇ ಹೋರಾಡುತ್ತಿದ್ದಾನೆ” ಎನ್ನಲು ಮೂರು ಲಕ್ಷ ರಾಕ್ಷಸ ಸೇನೆಯನ್ನು ಸಹಾಯಕ್ಕೆ ಕಳುಹಿಸಿದನು. ಮೂರು ಲಕ್ಷ ಸೇನೆಯ ಮುಂದೆ ಅಕ್ಷಯಕುಮಾರನ ಪರಾಕ್ರಮದ ಮುಂದೆ ಕಪಿಯ ಆಟ ಸಾಗುವುದಿಲ್ಲ. ಅದನ್ನು ಕಟ್ಟಿಯೇ ತರುತ್ತಾರೆ. ಆ ಕಪಿ ಎದುರಾದಾಗ ಏನೇನೆಲ್ಲಾ ಮಾತನಾಡಬೇಕು ಎಂದು ಲೆಕ್ಕಾಚಾರ ಹಾಕುತ್ತಾ ಕುಳಿತ. “ರಾಜೇಂದ್ರ! ಅನಾಹುತ! ಅನಾಹುತ! ಮೂರು ಲಕ್ಷ ಸೈನಿಕರೆಲ್ಲಾ ಮೂರು ಗಳಿಗೆಯಲ್ಲಿ ಹೇಳಹೆಸರಿಲ್ಲದಂತಾದರು. ಆ ಕಪಿಯು ಅಕ್ಷಯಕುಮಾರನ ಕೆನ್ನೆಗೆ ಜೋರಾಗಿ ಅಪ್ಪಳಿಸಿದನು. ಅವನು ರಕ್ತವನ್ನು ಕಾರಿ ಯಮಸದನವನೈದಿದನು.”

ರಾಕ್ಷಸರ ಬಾಯಿಂದ ಹೊರಬಂದ ಮಾತುಗಳನ್ನು ಕೇಳಿ ಸ್ತಬ್ಧವಾಗಿ ನಿಂತೆ, ಕಣ್ಣು ಕತ್ತಲಿಟ್ಟು ಕೆಳಬೀಳುವಂತಾಯಿತು. ಮಗ ಅಕ್ಷಯಕುಮಾರನ ಮುದ್ದು ಮೊಗ ಕಣ್ಣಿಗೆ ರಾಚಿತು. ಅಯ್ಯೋ! ಎಂತಹ ಕೆಲಸ ಮಾಡಿದೆ. ಅನ್ಯಾಯವಾಗಿ ನಾನೇ ನಿನ್ನನ್ನು ಬಲಿಕೊಟ್ಟೇನಲ್ಲ. ನಿನ್ನ ಹಡೆದವನ ತಪ್ಪಿನಿಂದ ನೀನು ಮರಣ ಹೊಂದಿದೆಯಾ, ಹಾ! ಕುಮಾರ! ರಣಧೀರನಾದ ಕಂದನೇ ನನ್ನನ್ನು ಬಿಟ್ಟು ಹೋದೆಯಾ ಅಯ್ಯೋ’ ನಿನ್ ತಾಯಿಗೆ ಹೇಗೆ ವಿಷಯ ತಿಳಿಸಲಿ? ಯಾವ ರೀತಿ ಮುಖ ತೋರಿಸಲಿ, ದೈವವೇ ನನ್ನ ತಪ್ಪುಗಳಿಗೆ ಒಂದೊಂದಾಗಿ ಶಿಕ್ಷೆ ನೀಡಲು ಪ್ರಾರಂಭಿಸಿದೆಯಾ; ನನ್ನ ಒಳ್ಳೆಯ ದಿನಗಳು ಮುಗಿದವೆಂದೇ ತೋರುತ್ತದೆ. ಇಲ್ಲಾ ಮಗನೇ ನಾನು ಸುಮ್ಮನಿರುವುದಿಲ್ಲ ನಿನ್ನ ಕೊಂದ ಕಪಿಯನ್ನು ಅಣು ಅಣುವಾಗಿ ಕತ್ತರಿಸುತ್ತೇನೆ; “ಏಯ್ ಯಾರಲ್ಲಿ? ನನ್ನ ರಥವನ್ನು ತೆಗೆದುಕೊಂಡುಬನ್ನಿ! ಚಂದ್ರಹಾಸಖಡ್ಗವೆಲ್ಲಿ? ನಾನೇ ಯುದ್ಧಕ್ಕೆ ಹೋಗುತ್ತೇನೆ” ಮೀಸೆಯನ್ನು ಹುರಿಮಾಡಿ ಹೊರಡಲಿಕ್ಕೆ ಸಿದ್ಧನಾದನು. ತಮ್ಮನ ಸಾವಿನ ಸುದ್ದಿ ತಿಳಿದ ಇಂದ್ರಜಿತ್ತು ಓಡೋಡಿ ಬಂದನು. ನನ್ನ ರೋಷಾವೇಶವನ್ನು ಕಂಡು “ತಂದೆಯೇ ಕಪಿಯನ್ನು ಹೊಡೆಯುವ ಅಲ್ಪಕಾರ್ಯಕ್ಕೆ ನೀವೇಕೆ ಹೋಗಬೇಕು. ತಮ್ಮನ ಸಾವಿನಿಂದ ನೀವು ಕಂಗೆಟ್ಟಿರುವಿರಿ. ಸ್ವಲ್ಪ ಸಮಾಧಾನ ತಂದುಕೊಳ್ಳಿ. ಇಂದ್ರನನ್ನೇ ಜಯಿಸಿದ ನಾನು ಆ ಕಪಿಯನ್ನು ಸುಮ್ಮನೆ ಬಿಡುವೆನೇ. ನನಗೆ ಅಪ್ಪಣೆ ಕೊಡಿ, ಆಶೀರ್ವಾದ ಮಾಡಿ” ಎಂದು ಸೈನ್ಯ ಸಮೇತ ಹೊರಟನು.

ಅತ್ತ ಇಂದಜಿತ್ತು ಮರೆಯಾದ ಮೇಲೆ ಮನಸ್ಸಿಗೆ ಸಮಾಧಾನವಾಗಲಿಲ್ಲ. ಕ್ಷಣಗಳು ಯುಗವಾಗಿ ಬಂಧನದಲ್ಲಿದ್ದ ಸ್ಥಿತಿಯಂತೆ ಚಡಪಡಿಸಿದೆ. ಇಂದ್ರಜಿತ್ತು ಮಾರುತಿಯನ್ನು ಸೆರೆಹಿಡಿದು ತರುತ್ತಾನೆಂದು ಬಲವಾದ ನಂಬಿಕೆಯಿದ್ದರೂ ಅಶಂಕೆಯ ಕೀಟವೊಂದು ಕೊರೆಯುತ್ತಿತ್ತು. ಸುಮಾಲಿಗೆ ಬೇಗ ಬಂದು ವಿಷಯ ತಿಳಿಸೆಂದು ಅರುಹಿದ್ದೆ. ಏನಾಗಿದೆ ನನಗೆ ಕೈಕಾಲುಗಳು ಒಂದು ಕಡೆ ನಿಲ್ಲುತ್ತಿಲ್ಲ. ಪರಮೇಶ್ವರಾ ! ಯಾವ ಅನಾಹುತವೂ ನಡೆಯದೆ ಇಂದ್ರಜಿತ್ತು ಕ್ಷೇಮವಾಗಿ ಬಂದರೆ ಸಾಕು! ಸಾವಿರದೊಂದು ಸಲ ಪ್ರಾರ್ಥಿಸಿದೆ. ನನ್ನ ಕಾತುರಕ್ಕೆ ಸರಿಯಾಗಿ ಸುಮಾಲಿ ಬಂದವನೇ ಮಹಾರಾಜ ಮಾರುತಿಯನ್ನು ಸೆರೆಹಿಡಿದೆವು ಎಂದನು. “ಹೌದೇ ಹೇಗಾಯಿತು ವಿಷಯವನ್ನು ವಿಶಧವಾಗಿ ತಿಳಿಸು” “ಮಹಾರಾಜ ಎಲ್ಲರೂ ಹೊಳೆಯುವ ಕತ್ತಿಗಳನ್ನು ಹಿಡಿದು ಮಿತಿಮೀರಿದ ಉತ್ಸಾಹದಿಂದ ಜೈಕಾರ ಹಾಕುತ್ತಾ ಮಾರುತಿಯತ್ತ ಧಾವಿಸಿದರು.

“ಅಶೋಕವನವನ್ನು ಮುರಿದುಹಾಕಿದ ಕಪಿಯೆಲ್ಲಿ? ನಮ್ಮ ರಾಜ ಕುಮಾರನನ್ನು ಕೊಂದು ಹಾಕಿದ ವಾನರರೆಲ್ಲಿ?” ಎಂದು ಕೂಗುತ್ತಾ ಇಂದ್ರಜಿತ್ತವು ಮಾರುತಿಯಿದ್ದಲ್ಲಿಗೆ ಹೋದರು. ದೊಡ್ಡ ಮರವೊಂದರ ತುದಿಯನ್ನೇರಿ ಕುಳಿತಿದ್ದ ಮಂಗವೊಂದು ಕೆಳಕ್ಕೆ ಜಿಗಿಯಿತು, ಕ್ಷಣಾರ್ಧದಲ್ಲಿ ಬೃಹದಾಕಾರತಾಳಿ ರಾಕ್ಷಸ ಸೇನೆಗಳನ್ನು ಸದೆ ಬಡಿದನು. ರಥಗಳನ್ನು ಪುಡಿಪುಡಿ ಮಾಡಿದನು. ಆನೆ ಕುದುರೆಗಳನ್ನು ಅಪ್ಪಳಿಸಿ ಕೊಂದನು. ಆಗ ನೋಡಬೇಕಿತ್ತು ರಕ್ತದ ಓಕುಳಿಯ ಮಧ್ಯದಲ್ಲಿ ರಣಭೂಮಿ ಮಾಂಸ ಮಜ್ಜಾದಿಗಳಿಂದ ಗಿಜಿಗಿಜಿಯಾಯಿತು. ಹತ್ತು ಅಕ್ಷೋಹಿಣಿ ರಾಕ್ಷಸ ಸೈನ್ಯವು ಮಾರುತಿಯ ವೀರಾವೇಶವನ್ನು ಕಂಡು ಎದೆ ಒಡೆದು ಕೈಕಾಲು ನಡುಗಿ ದಿಕ್ಕುದಿಕ್ಕಿಗೆ ಪರಾರಿಯಾದರು. ಬಿಲ್ಲುಬಾಣಗಳನ್ನು ಬಿಸುಟ, ಇಂದ್ರಜಿತುವು ಬಲವಾದ ಗದೆಯಿಂದ ಮಾರುತಿಗೆ ಹೊಡೆದನು. ಕ್ಷಣದಲ್ಲಿ ಮಾರುತಿ ಆ ಹೊಡೆತವನ್ನು ತಪ್ಪಿಸಿಕೊಂಡು ಇಂದ್ರಜಿತ್ತುವಿನ ರಥವನ್ನು ಎಡಗಾದಿನಿಂದ ಒದ್ದೊಡನೆ ಗಾವುದ ದೂರ ಹೋಗಿ ಬಿತ್ತು. ಇಂದ್ರಜಿತುವು ಬೇರೊಂದು ರಥಕ್ಕೆ ಜಿಗಿದು ದಿಕ್ಪಾಲಕರಿತ್ತ ಬೇರೆ ಬೇರೆ ಪ್ರಕಾರದ ಅಸ್ತ್ರಗಳನ್ನು ಪ್ರಯೋಗಿಸಿದರೂ ರವೆಯಷ್ಟು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ವಿಧಿಯಿಲ್ಲದೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಆಗ ನೋಡಬೇಕಿತ್ತು! ರಾವಣೇಶ್ವರಾ! ದೇವತೆಗಳೆಲ್ಲಾ ಹಿಮಾಲಯದ ಕಡೆಗೆ ನಡೆದರು. ಪಾಶ ಹಿಡಿದು ಸತ್ತವರ ಆತ್ಮಗಳನ್ನು ಸೆರೆಹಿಡಿಯುತ್ತಿದ್ದ ಯಮರಾಜನು ತಲೆಮರೆಸಿಕೊಂಡನು ರಣಭೂಮಿಯೇ ಅಲ್ಲೋಲ ಕಲ್ಲೋಲವಾಯಿತು, ಇಂದ್ರಜಿತುವು ರುದ್ರನಿಗಿಂತಲೂ ಭಯಂಕರವಾಗಿ “ಎಲೈ ಮಂಗನ ಮುಖದವನೇ?! ಈ ಅಸ್ತ್ರವನ್ನು ಸಹಿಸಿಕೋ! ನೀನು ಕಪಿಯ ಮುಖದ ರುದ್ರನಾದರೂ ಸರಿ! ನಾರಾಯಣನಾದರೂ ಸರಿಯೇ ಅಥವಾ ನೀನೇ ಬ್ರಹ್ಮನಾದರೂ ಆಗಲಿ ಈ ಅಸ್ತ್ರವನ್ನು ಗೆದ್ದೆಯಾದರೆ ನಾನು ಸೋತು ಶರಣಾಗುತ್ತೇನೆ ಎಂದು ಬೊಬ್ಬಿರಿದನು. ಏನಾಶ್ಚರ್ಯ! ಪ್ರಳಯರುದ್ರನಂತೆ ಕಂಗೊಳಿಸುತ್ತಿದ್ದ ಮಾರುತಿಯ ಬ್ರಹ್ಮಾಸ್ತ್ರವನ್ನು ಕಂಡು ಕೈಮುಗಿದು ವಿನೀತ ಭಾವದಿಂದ ತಲೆತಗ್ಗಿಸಿನಿಂತನು. ಅಸ್ತ್ರಪ್ರಭಾವಕ್ಕೊಳಗಾಗಿ ಮೈ ಮರೆತುನಿಂತನು. ಬ್ರಹ್ಮಾಸ್ತ್ರವು ಮಾರುತಿಯನ್ನು ಕಟ್ಟಿ ಹಾಕಿತು. ಮಾರುತಿಯನ್ನು ಹೊತ್ತು ತರುವುದಕ್ಕೆ ಕುಂಭಕರ್ಣನ ರಥವನ್ನು ತಂದರು. ಅದರ ಅಚ್ಚು – ಕೀಲು ಗಟ್ಟಿಯಾಗಿದ್ದ ರಥಕ್ಕೆ ನಲ್ವತ್ತು ಸಾವಿರ ಆನೆಗಳನ್ನು ಹೊಡೆದೆವು, ಮಾರುತಿಯನ್ನು ರಥಕ್ಕೆ ಹತ್ತಿಸಿದೊಡನೆ ಭೂಮಿಯು ಕುಗ್ಗಿತು. ಮೇರು ಗಿರಿಯು ಪಾತಾಳಕ್ಕೆಳಿಯಿತು. ಆದರೇನು ಆನೆಗಳು ಮಾರುತಿ ಕುಳಿತಿದ್ದ ಗಾಡಿಯನ್ನು ಎಳೆಯದಾದವು. ಇಂದ್ರಜಿತುವು ಅಸಹಾಯಕನಾಗಿ ಕೈ ಕೈ ಹಿಸುಕಿಕೊಳ್ಳುತ್ತಾ ಏನು ಮಾಡಲು ತೋರದೆ “ನೋಡು ನೀನು ಈ ಬ್ರಹ್ಮಾಸ್ತ್ರದಿಂದ ಪಾರಾಗಬೇಕಾದರೆ ಸುಮ್ಮನೆ ನನ್ನ ಜೊತೆಯಲ್ಲಿ ಬಾ ನಿನ್ನ ಪ್ರಾಣಕ್ಕೇನು ಅಪಾಯವಾಗದು” ಎಂದಾಗ “ಒಳ್ಳೆಯದು ರಾವಣೇಶ್ವರನನ್ನು ನಾನು ಕಾಣಬೇಕು. ಅವರೊಂದಿಗೆ ಮಾತಾಡಬೇಕು. ಹಾಗಿದ್ದಲ್ಲಿ ಬರುತ್ತೇನೆ” ಎಂದ ಮಾರುತಿಯನ್ನು ಯುವರಾಜರು ಆಸ್ಥಾನಕ್ಕೆ ಕರೆ ತರುತ್ತಿದ್ದಾರೆ. ನೀವು ಕೂಡಲೇ ಆಸ್ಥಾನಕ್ಕೆ ಬರಬೇಕೆಂದು ಆಜ್ಞಾಪಿಸಿದ್ದಾರೆ.

ಇಂದ್ರಜಿತ್ತುವು ಯುದ್ಧಕ್ಕೆ ಹೋದಾಗಿನಿಂದ ಆತಂಕದ ಮಡಿಲಿನಲ್ಲಿ ಹೊಯ್ದಾಡುತ್ತಿದ್ದ ನನ್ನ ಜೀವವು ತಹಬಂದಿಗೆ ಬಂತು. ಮಗನ ಪರಾಕ್ರಮವನ್ನು ಕಂಡು ಆನಂದದಿಂದ ಮೂಕನಾದೆನು. ಮಾರುತಿಯ ಆಕಾರ ಶೌರ ಪರಾಕ್ರಮಗಳಿಗೆ ಬೆರಗಾದೆನು. ಮಾರುತಿಯನ್ನು ಕಣ್ಣಾರೆ ಕಾಣಬೇಕೆಂಬ ಕಾತುರದಲ್ಲಿ ಆಸ್ಥಾನದತ್ತ ಹೆಜ್ಜೆಯಿಟ್ಟೆನು.

ಇಂದ್ರಜಿತುವನ್ನು ಹಿಂಬಾಲಿಸಿ ಸಭೆಗೆ ಬಂದ ಕಪಿಶ್ರೇಷ್ಠನನ್ನು ಕಂಡು ನೋಡಲು ಸಾಮಾನ್ಯ ವಾನರನಂತೆ ಕಾಣುವ ಈ ಮಾರುತಿಯು ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾದನೇ! “ತಂದೆಯೇ ಅಕ್ಷಯಕುಮಾರ ಮೊದಲಾದ ಪ್ರಮುಖ ರಕ್ಕಸರನ್ನು ಕೊಂದ ಕಪಿಯನ್ನು ಹಿಡಿದು ತಂದಿದ್ದೇನೆ. ನಿಮ್ಮ ಮನಸ್ಸಿಗೆ ಬಂದಂತೆ ಮಾಡಿರಿ” ಎನ್ನಲು ಮಗನ ಸಾವಿನಿಂದ ಕಂಗೆಟ್ಟು ಕೋಪೋದ್ರೇಕದಿಂದ “ಈ ಕಪಿಯನ್ನು ಹೊಡೆಯಿರಿ, ತಿವಿಯಿರಿ ಚರ್ಮವನ್ನು ಸುಲಿಯಿರಿ. ಹಲ್ಲುಗಳನ್ನು ಮುರಿಯಿರಿ ಎಂದು ಆಜ್ಞಾಪಿಸಲು ವಿಭೀಷಣನು ಎದ್ದು ನಿಂತು “ಅಣ್ಣಾ ರಾಮದೂತನಾದ ಈತನಿಗೆ ಶಿಕ್ಷೆ ಕೊಡುವುದು ನ್ಯಾಯವಲ್ಲ, ದೂತರನ್ನು ಗೌರವದಿಂದ ನಡೆಸಿಕೊಳ್ಳುವುದು ನಿನಗೆ ಶ್ರೇಯಸ್ಕರ” ಎನ್ನಲು ನಾನು ಸಮಾಧಾನ ಚಿತ್ತದಿಂದ “ನೀನ್ಯಾರು ನಮ್ಮ ಪಟ್ಟಣಕ್ಕೆ ಏಕೆ ಬಂದೆ ಯಾರ ದೂತನಾಗಿ ಬಂದಿರುವೆ?

“ನನಗೆ ಬಹಳ ನೋವಾಗಿದೆ. ಮಾತಾಡಲಿಕ್ಕೆ ಆಗುತ್ತಿಲ್ಲ. ಜೀವಕ್ಕೆ ಕಸಿವಿಸಿಯಾಗುತ್ತಿದೆ. ನಾನು ಮಾಡಿದ ಕೆಟ್ಟ ಕೆಲಸವಾವುದು? ಪ್ರಾಣ ಉಳಿಸಿಕೊಳ್ಳಲು ಹೋರಾಡುವುದು ತಪ್ಪೇ? ದೂತನಾದ ನನ್ನನ್ನು ಈ ರೀತಿ, ಕಟ್ಟಿ ಹಿಂಸಿಸುವುದು ನಿನ್ನಂತಹ ಜಗದೇಕವೀರನಿಗೆ ತಕ್ಕುದಲ್ಲ ಎನ್ನಲು ಸೇವಕರನ್ನು ಕರೆದು ಇವನ ಕೈಕಾಲುಗಳ ಕಟ್ಟನ್ನು ಬಿಚ್ಚಿರಿ” ಅಪ್ಪಣೆ ಮಾಡಲು ಸೈನಿಕರು ಕಟ್ಟುಗಳನ್ನು ಬಿಚ್ಚಿದರು ಕಟ್ಟುಗಳನ್ನು ಬಿಚ್ಚಿದ ತಕ್ಷಣ ಮಾರುತಿಯು ತನ್ನ ಬಾಲದಿಂದಲೇ ದೊಡ್ಡ ಸಿಂಹಾಸನವನ್ನು ಮಾಡಿ ನನ್ನ ಎದುರಿಗೆ ಕುಳಿತುಕೊಂಡನು. ಮಂತ್ರಿಯಾದ ಪ್ರಹಸ್ತನು “ಎಲೈ ವಾನರನೇ ಲಂಕೆಯಲ್ಲಿ ನಿನಗೇನು ಕೆಲಸ? ಯಾರಿಗೋಸ್ಕರ ಲಂಕೆಯನ್ನು ಸುತ್ತುತ್ತಿರುವೆ. ಅಶೋಕವನವನ್ನೇಕೆ ಹಾಳು ಮಾಡಿದೆ. ನಿನ್ನ ತಪ್ಪಿಗೆ ಸರಿಯಾದ ಶಿಕ್ಷೆ ಕಾದಿದೆ ಹೇಳು ಯಾರು ನೀನು ಇಲ್ಲಿಗೇಕೆ ಬಂದೆ? “ರಕ್ಕಸನಾದ ರಾವಣನ ತಲೆಯನ್ನು ತೆಗೆಯಲು ಬಂದಿದ್ದೇನೆ. ಅವನ ಒಡಹುಟ್ಟುಗಳಾದ ಖರಾದಿ ರಾಕ್ಷಸರನ್ನು ಕೊಂದ, ಮಾಯಾಮೃಗವಾಗಿ, ಸುಳಿದ ಮಾರೀಚನನ್ನು ಕೊಂದ ಶೂರ್ಪನಖಿಯ ಮೂಗು ಕತ್ತರಿಸಿದ. ಲಕ್ಷ್ಮಣಾಗ್ರಜ, ನರೇಂದ್ರ ಪುರುಷೋತ್ತಮ ರಾಮನದೂತ ನಾನು ನಮ್ಮ ಸೀತಾಮಾತೆಯನ್ನು ಹುಡುಕಲಿಕ್ಕೆ ನನ್ನನ್ನು ಕಳುಹಿದನು. ಈ ಕೆಲಸಗಾರರು ನನ್ನನ್ನು ಬಹುಪರಿಪರಿಯಾಗಿ ಪೀಡಿಸಿದರು ಮತ್ತು ನನ್ನನ್ನು ಬಂಧಿಸಿ ಇಲ್ಲಿಗೆ ಕರೆತಂದರು. ನಿಮಗೆ ಸೆರೆ ಸಿಕ್ಕಿದ್ದೇನೆ. ಕೊಲ್ಲುವುದಾದರೆ ಕೊಂದು ಬಿಡಿ ಬಿಟ್ಟರೆ ಬಿಡಿ. ನನ್ನ ಅದೃಷ್ಟವಿದ್ದಂತಾಗುತ್ತದೆ.

“ಆದರೆ ನನ್ನ ಒಡೆಯನ ವೈರಿಯನ್ನು ತೋರಿಸಿರಿ” ಎಂದಾಗ ಪ್ರಹಸ್ತನು “ನಿನ್ನ ಮುಂದೆ ಕುಳಿತಿರುವವರೇ ಲಂಕಾಧಿಪತಿ ರಾವಣೇಶ್ವರ” “ರಾವಣೇಶ್ವರ! ಲಯಕರ್ತನಾದ ಈಶ್ವರನ ಹೆಸರನ್ನು ಸೇರಿಸಿಕೊಂಡು ಮರೆಯುವ ನಿನಗೆ ಯಾರ ಭಯವೂ ಇಲ್ಲವೇ! ಸೀತಾಮಾತೆಯನ್ನು ಕದ್ದು ತರುವಷ್ಟು, ನೀಚಮಟ್ಟಕ್ಕೆ ಇಳಿದೆಯಾ? ಅಕ್ಕ ತಂಗಿಯರಿಲ್ಲವೇ ನಿನಗೆ? ನೀನು ಮಾಡಿದ ಕಾರ್‍ಯವನ್ನು ನೆನೆಸಿಕೊಂಡರೆ ನಿನ್ನನ್ನು ಕೊಂದು ಹಾಕುವಷ್ಟು ಸಿಟ್ಟುಬರುವುದು ಏನು ಮಾಡಲಿ? ಶ್ರೀರಾಮಚಂದ್ರನೇ ನಿನ್ನನ್ನು ಕೊಲ್ಲುವುದಾಗಿ ಶಪಥ ಮಾಡಿರುವನು. ಒಡೆಯನ ಮಾತಿಗೆ ಮನ್ನಣೆ ಕೊಟ್ಟು ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಹೇಡಿಯಾದ ರಕ್ಕಸನೇ! ಹೆಣ್ಣುಗಳ್ಳನೇ! ಯಾವುದರಿಂದ ಕೊಬ್ಬಿ ದುರಹಂಕಾರದಿಂದ ಮೆರೆಯುತ್ತಿವೆಯೋ ಆ ಸಂಪತ್ತೆಲ್ಲಾ ನಾಶವಾಗುತ್ತದೆ. ಎಚ್ಚರಿಕೆಯಿಂದ ಬಾಳು”

“ಮುಚ್ಚುಬಾಯಿ, ವಾಲಿಯ ವಂಶದವನೆಂದು ನಿನ್ನ ಸುಮ್ಮನೆ ಬಿಟ್ಟಿದ್ದೇನೆ. ಅಧಿಕ ಪ್ರಸಂಗಿ. ನೀನು ಬಂದ ಕಾರ್ಯ ಎಷ್ಟಿದೆಯೋ ಅಷ್ಟನ್ನು ಮಾಡಿಕೊಂಡು ಹೋಗು. ಅದು ಬಿಟ್ಟು, ಅಶೋಕವನವನ್ನೆಲ್ಲಾ ಹಾಳು ಮಾಡಿದೆ. ತಡೆಯಲು ಬಂದ ಜಂಬುಮಾಲಿಯನ್ನು ಕೊಂದೆ. ನನ್ನ ಸೈನ್ಯದ ಬಹುಭಾಗ ನಿನ್ನಿಂದ ನಾಶವಾಯಿತು ಅದು ಹೋಗಲಿ ನನ್ನ ಪ್ರೀತಿಯ ಪುತ್ರನಾದ ಅಕ್ಷಕುಮಾರನನ್ನು ಕೊಂದು ನನ್ನ ಮನಸ್ಸಿಗೆ ಘಾಸಿ ಮಾಡಿದೆ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನ್ನ ಸಂಗಡ ನನಗೇನು ಮಾತು, ಯಾರಲ್ಲಿ? ಈ ಬಾಯಿಬಡುಕನನ್ನು ಕರೆದುಕೊಂಡು ಹೋಗಿ ಲಂಕಾನಗರದ ಹೆಬ್ಬಾಗಿಲಿಗೆ ಶೂಲಕ್ಕೇರಿಸಿ ಎಂದ ಆ ತಕ್ಷಣ ವಿಭೀಷಣನು ಎದ್ದು ನಿಂತು ಕೈಮುಗಿದು “ಅಗ್ರಜಾ ದೂತರು ತಮ್ಮ ಯಜಮಾನನನ್ನು ಹೊಗಳುವುದು ಸರ್ವೇಸಾಮಾನ್ಯ. ಅಂತಹ ದೂತರನ್ನು ಸಾಯಿಸುವುದು ರಾಜಧರ್ಮಕ್ಕೆ ವಿರುದ್ಧವಾದದ್ದು. ಅವನನ್ನು ಬಿಟ್ಟುಬಿಡು ನಿನ್ನ ಕೋಪ, ಆಕ್ರೋಶ ಏನಿದ್ದರೂ ಶ್ರೀರಾಮನ ಮೇಲೆ” ಎಂದಾಗ “ಹಾಗಾದರೆ ಈ ಕಪಿಯ ಕಿವಿಗಳನ್ನು ಕತ್ತರಿಸಿ ಕಳಿಸಿರಿ. ತನ್ನ ಒಡೆಯ ರಾಮನಿಗೆ ಹೇಳಲಿ” ಎಂದ ಕೂಡಲೇ ಅನುಚರರು ಖಡ್ಗದಿಂದ ಮಾರುತಿಯ ಕಿವಿಯನ್ನು ಕೊಯ್ಯಲು ಖಡ್ಗವೇ ತುಂಡಾಯಿತು. ಇದನ್ನು ಕಂಡು ಎಲ್ಲರಿಗೂ ಆಶ್ಚರ್ಯ! ಮಂತ್ರಿ ಪ್ರಹಸ್ತನು “ನಮ್ಮ ಅಶೋಕವನವನ್ನೇಕೆ ಹಾಳು ಮಾಡಿದೆ” ಎನ್ನಲು “ಅದು ನನ್ನ ಬಾಲ ಮಾಡಿದ ಕಾರ್ಯವು ನನಗೇನು ಗೊತ್ತಿಲ್ಲ” “ಇಂದ್ರಜಿತುವು ಎದ್ದು ನಿಂತು ಇದರೊಡನೆ ಹೊಡೆದಾಡಬೇಡಿರಿ. ಶಸ್ತ್ರಗಳು ಇವನಿಗೆ ಗಾಯ ಮಾಡಲಾರವು. ಆದ್ದರಿಂದ ಬಾಲವನ್ನೇ ಸುಟ್ಟುಬಿಡುವುದು ಒಳ್ಳೆ ಮಾರ್ಗವು” ಎಂದನು. ಅವನ ಮಾತನ್ನು ಕೇಳಿ ಮಾರುತಿಯು ಚೀರಿ ಕಿರಿಕಿರಿಯೆಂದು ಹಲ್ಲುಕಿರಿಯುತ್ತಾ ಹುಬ್ಬು ಏರಿಸುತ್ತಾ, ಅಣಗಿಸುತ್ತಾ, ಹೆದರಿದಂತೆ ತೋರಿಸುತ್ತಾ ತಲೆ ಚಚ್ಚಿಕೊಳ್ಳುತ್ತಾ, ಬಾಲವನ್ನು ಅಲ್ಲಾಡಿಸುತ್ತಾ ನಟನೆಯನ್ನು ಮಾಡುತ್ತಾ ಕುಳಿತನು. ಯುವರಾಜನ ಆಣತಿಯಂತೆ ರಕ್ಕಸರು ಮಾರುತಿಯ ಬಾಲಕ್ಕೆ ಅರಿವೆಯನ್ನು ಸುತ್ತಹತ್ತಿದರು. ಸುತ್ತಿದಂತೆ ಬಾಲವು ಬೆಳೆಯ ತೊಡಗಿತು. ಊರೊಳಗಿನ ಎಲ್ಲರ ಮನೆಯ ವಸ್ತ್ರಗಳೆಲ್ಲ ತೀರಿದ ಬಳಿಕ ಅರಮನೆಯೊಳಗಿನ ಹೊಸ ವಸ್ತ್ರಗಳೆಲ್ಲವನ್ನು ತರಿಸಿ ಬಾಲಕ್ಕೆ ಸುತ್ತಿದರು. ಎಲ್ಲಾ ತರಹದ ಎಣ್ಣೆಗಳನ್ನು ತಂದು ಬಾಲಕ್ಕೆ ಸುತ್ತಿದ ಅರಿವೆಗಳನ್ನು ತೋಯಿಸಿ ಬೆಂಕಿ ಹಚ್ಚಿದರು. ಆಗ ಮಾರುತಿಯು ಪರ್ವತಾಕಾರವಾಗಿ ಬೆಳೆದು ಮೇಲಕ್ಕೆ ಜಿಗಿದು ತನ್ನ ಬಾಲದಿಂದ ವಿಭೀಷಣನ ಮನೆಯನ್ನು ಉಳಿಸಿ, ಸೀತಾಮಾತೆಯಿರುವ ಅಶೋಕವನವನ್ನು ಬಿಟ್ಟು ಎಲ್ಲಾ ಮನೆಗಳನ್ನು ತನ್ನ ಬಾಲದ ಬೆಂಕಿಯಿಂದ ಹಚ್ಚಿ ಸುಟ್ಟು ಬಿಟ್ಟನು. ಲಂಕೆಯ ಜನರೆಲ್ಲಾ ಹಾಹಾಕಾರ ಮಾಡುತ್ತಾ ಮನೆಬಿಟ್ಟು ಹೊರಬಂದು ಬೊಬ್ಬೆ ಹೊಡೆಯ ತೊಡಗಿದರು. ಕ್ಷಣಾರ್ಧದಲ್ಲಿ ಸುವರ್ಣನಗರಿ ಲಂಕೆ ಸುಟ್ಟು ಬೂದಿಯಾಯಿತು. ಮಾರುತಿಯು ತನ್ನ ಬಾಲವನ್ನು ಸಮುದ್ರದಲ್ಲಿ ಅದ್ದಿ ಬೆಂಕಿಯನ್ನು ಆರಿಸಿಕೊಂಡು ಚಂಗನೆ ನೆಗೆದು ಅಶೋಕವನದಲ್ಲಿದ್ದ. ಸೀತಾಮಾತೆಗೆ ನಮಸ್ಕರಿಸಿ “ನಾನು ಕ್ಷೇಮವಾಗಿದ್ದೇನೆ ತಮ್ಮ ಕ್ಷೇಮವನ್ನು ಆದಷ್ಟು ಬೇಗ ಶ್ರೀರಾಮಚಂದ್ರ ಪ್ರಭುವಿಗೆ ತಿಳಿಸುತ್ತೇನೆ?” “ತಾವು ಯೋಚನೆ ಮಾಡಬೇಡಿರೆಂದು ಭಿನ್ನವಿಸಿ ಗಗನ ಮಾರ್ಗದಲ್ಲಿ ಚಲಿಸುತ್ತಾ ಉತ್ತರ ದಿಕ್ಕಿನತ್ತ ಪ್ರಯಾಣ ಬೆಳೆಸಿದನು.”

ನನ್ನ ಕನಸಿನ ಅರಮನೆ ಸುಂದರ ಸುವರ್ಣನಗರಿ ಸುಟ್ಟು ಹೋದುದನ್ನು ಕೇಳಿ, ಕಣ್ಣಾರೆ ನೋಡಿ ನನ್ನ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು. ಶಿಲ್ಪಿಗಳನ್ನು ಕರೆಸಿ, ಮತ್ತೆ ಮನೆಗಳನ್ನು ಕಟ್ಟಿ ಯಥಾರೂಪಕ್ಕೆ ತರುವಷ್ಟರಲ್ಲಿ ಸಾಕು ಬೇಕಾಯಿತು. ನಾನು ತಪ್ಪು ಮಾಡಿದೆ. ಸಾಮಾನ್ಯ ಕಪಿಯೆಂದು ಉದಾಸೀನ ಮಾಡಿ ದೂತನೆಂದು ಕ್ಷಮಾದಾನ ಮಾಡಿದರೆ ನನ್ನನ್ನೇ ಮುಳುಗಿಸಿ ಬಿಟ್ಟೆನಲ್ಲ ಯಾರಿವನು? ಯಾರ ಮಗನು? ಇವನ ದೈವಭಕ್ತಿ ಸ್ವಾಮಿನಿಷ್ಠೆ, ಧೈರ್ಯ ಪರಾಕ್ರಮಗಳು ಸಾಮಾನ್ಯರಿಗೆ ಇರುವಂತಹದ್ದಲ್ಲ. ಈಗ ನೆನಪಿಗೆ ಬಂತು ಒಮ್ಮೆವಾಲಿ ತನಗೊಬ್ಬ ಮೊಮ್ಮಗನಿದ್ದಾನೆ. ಆಂಜನೇಯನೆಂದು ಹೆಸರು; ಬಲಿಷ್ಟನಾಗಿದ್ದಾನೆ. ಜನಪ್ರಿಯನಾಗಿದ್ದಾನೆ ಎಂದು ತನ್ನ ಪೂರ್ವಜರ ಕಥೆ ಹೇಳಿದ್ದನು. ಕಶ್ಯಪಮುನಿಗೆ ದಕ್ಷಬ್ರಹ್ಮನು ತನ್ನ ಹದಿನಾಲ್ಕು ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಿದ್ದನು. ಅವನು ತನ್ನ ದೇಶದ ಸುತ್ತ ದುರ್ಗವನ್ನು ಕಟ್ಟಿ ಕಿಷ್ಕಿಂದೆಯೆಂದು ಹೆಸರಿಟ್ಟು ರಾಜ್ಯಭಾರ ಮಾಡುತ್ತಿದ್ದನು. ಎಷ್ಟೋ ಕಾಲವಾದರೂ ಮಕ್ಕಳಾಗಲಿಲ್ಲ. ಮುಪ್ಪಿನ ಕಾಲದಲ್ಲಿ ಮುಕ್ತಿಗಾಗಿ ಹಂಬಲಿಸಿ ಕಿಷ್ಕಿಯು ಹಿಮಾಚಲ ಪರ್ವತದಲ್ಲಿ ಪರಮೇಶ್ವರನನ್ನು ಕುರಿತು ಘೋರವಾದ ತಪಸ್ಸು ಮಾಡಿದನು. ಅವನ ಭಕ್ತಿಗೆ ಮೆಚ್ಚಿ ಶಂಕರನು ಪ್ರತ್ಯಕ್ಷನಾದನು. ಅಲ್ಲಿರುವ ಎರಡು ಪುಷ್ಕರಣೆಗಳಲ್ಲಿ ಒಂದರಲ್ಲಿ ಹೋಗಿ ಸ್ನಾನ ಮಾಡಿ ಬರಬೇಕೆಂದು ತಿಳಿಸಲು ಅದರಂತೆ ಒಂದು ಕೊಳದಲ್ಲಿ ಕಿಷ್ಕಿಯು ಸ್ನಾನಮಾಡಲು ಪುರುಷತ್ವವು ನಷ್ಟವಾಗಿ ಸುಂದರ ರೂಪದ ಹೆಣ್ಣಾದನು ಅವಳ ಸೌಂದರ್ಯವನ್ನು ವರ್ಣಿಸುವುದೇ ಕಷ್ಟವಾಗಿತ್ತು. ತನ್ನ ಪೂರ್ವ ಜನ್ಮ ಸ್ಮರಣೆಯಿಲ್ಲದೆ ಹೆಣ್ಣಿಗೆ ಸಹಜವಾದ ಸಂಕೋಚದಿಂದ ಕಂಗೊಳಿಸುತ್ತಾ ಒನಪು ವೈಯ್ಯಾರಗಳನ್ನು ಪ್ರದರ್ಶಿಸುತ್ತಾ ಬರುವಾಗ ದೇವಲೋಕದ ಇಂದ್ರನ ಕಣ್ಣಿಗೆ ಬಿದ್ದನು. ಇಂದ್ರನಾದರೋ ಇವಳ ರೂಪ ಲಾವಣ್ಯಕ್ಕೆ ಮಾರುಹೋಗಿ ಇವಳನ್ನು ಮೋಹಿಸಿದನು. ಇವರಿಬ್ಬರ ಸಮಾಗಮದಿಂದ ವಾಲಿಯು ಜನಿಸಿದನು. ನಂತರದ ದಿನಗಳಲ್ಲಿ ಸೂರ್‍ಯನು ಇವಳ ಅಂದಕ್ಕೆ ಬೆರಗಾಗಿ ಪ್ರೇಮಿಯಾದನು. ಇವರಿಬ್ಬರ ಸಂಬಂಧದ ಫಲವಾಗಿ ಸುಗ್ರೀವನು ಜನಿಸಿದನು. ಹೀಗಿರಲು ಕಿಷ್ಕಿಯು ಎರಡನೆಯ ಪುಷ್ಕರಣೆಯಲ್ಲಿ ಸ್ನಾನಮಾಡಲು ತನ್ನ ನಿಜರೂಪವನ್ನು ತಾಳಿದನು, ಆಮೇಲೆ ನಿಜಾಂಶವನ್ನು ತಿಳಿದು ತನ್ನ ಮಕ್ಕಳಾದ ವಾಲಿ ಸುಗ್ರೀವರನ್ನು ಕರೆಸಿ ತನ್ನ ರಾಜ್ಯವಾದ ಕಿಷ್ಕಂದೆಯನ್ನು ಒಪ್ಪಿಸಿ, ನಳ, ನೀಲ ಜಾಂಬವಂತ, ಮೊದಲಾದ ತನ್ನ ಕೈಕೆಳಗಿನ ಕಪಿವೀರನನ್ನು ನೇಮಿಸಿ ತಪಸ್ಸು ಮಾಡಲು ಹಿಮಾಲಯಕ್ಕೆ ತೆರಳಿದನು. ಇಬ್ಬರೂ ಶೂರರೂ ಬಲಾಡ್ಯರೂ ಆಗಿದ್ದರಿಂದ ಕಿಷ್ಕಿಂದ ರಾಜ್ಯವನ್ನು ಚೆನ್ನಾಗಿ ಆಳಿದರು. ಅವರಿಬ್ಬರಲ್ಲಿ ವಾಲಿಯು ಅತ್ಯಂತ ಪರಾಕ್ರಮಶಾಲಿ, ಅವನಿಗೆ ಒಬ್ಬ ಮಗಳು ಅಂಜನಾದೇವಿ ಎಂಬ ಹೆಸರಿತ್ತು. ವಾಯುವು ಅವಳನ್ನೇ ಪ್ರೀತಿಸಿ ಮದುವೆಯಾದನು. ಅವರಿಬ್ಬರ ಮಗನೇ ಆಂಜನೇಯ. ಚಿಕ್ಕವನಿದ್ದಾಗಲೇ ಸೂರ್ಯನನ್ನು ಹೆಣ್ಣೆಂದು ಭಾವಿಸಿ ಹಿಡಿಯಲು ಹೋಗಿ ಮುಖ ಸುಟ್ಟುಕೊಂಡಿದ್ದನು. ಕಿಷ್ಕಿಯು ವಾಲಿ, ಸುಗ್ರೀವ, ಆಂಜನೇಯರಿಗೆ ಕಾಮರೂಪವನ್ನು ಧರಿಸುವ ವರವನ್ನು ಕೊಟ್ಟಿದ್ದನು. ಮಾರುತಿಯಾದರೋ ಅಸಾಧಾರಣ ವಿದ್ಯೆಗಳನ್ನು ಕರತಾಲಮಕ ಮಾಡಿಕೊಂಡಿದ್ದನು. ಸೂರ್‍ಯನಿಂದ ವೇದಗಳನ್ನು, ದೇವೇಂದ್ರನಿಂದ ವ್ಯಾಕರಣ ಶಾಸ್ತ್ರಗಳನ್ನು ಶುಕ್ರಾಚಾರ್ಯರಿಂದ ರಾಜಕಾರ್‍ಯವನ್ನು ತಿಳಿದು ಪಂಡಿತನೆನಿಸಿದ್ದನು. ಅಖಂಡ ಬ್ರಹ್ಮಚಾರಿಯಾಗಿದ್ದು ಈಗ ಶ್ರೀರಾಮನ ಕಿಂಕರನಾಗಿ, ಸ್ವಾಮಿನಿಷ್ಠೆ ಸೇವಕನಾಗಿ ಸೇವೆ, ಸಲ್ಲಿಸುತ್ತಿದ್ದಾನೆ” ನೆನಪಿನ ಪರದೆ ಸರಿದು ವಾಸ್ತವ ಜಗತ್ತಿಗೆ ಇಳಿದೆ. ಈ ಆಂಜನೇಯನು ನನ್ನ ಮಿತ್ರ ವಾಲಿಯ ಮೊಮ್ಮಗನು ಆದರೇನು? ತನ್ನ ಅಜ್ಜನನ್ನು ಕೊಂದವನ ಪಕ್ಷ ಸೇರಿ ನನಗೆ ವೈರಿಯಾಗಿದ್ದಾನೆ. ಅವನಿಗೆ ಕರುಣೆ, ಮಮಕಾರ ತೋರಬಾರದು. ಇನ್ನೊಮ್ಮೆ ಬಂದರೆ ಕಿಂಚಿತ್ತು ದಯಾದಾಕ್ಷಿಣ್ಯ ತೋರದೆ ಬಂಧಿಸಿ ಗಲ್ಲಿಗೇರಿಸಬೇಕು. ಅಷ್ಟರಲ್ಲಿ ಸಮರಕ್ಕೆ ನಿಯೋಜಿಸಿದ್ದ ಗುಪ್ತ ಗೂಡಚಾರರು ಬಂದರು. ಅವರನ್ನು ರಹಸ್ಯ ಕೊಠಡಿಯೊಳಗೆ ಕರೆದುಕೊಂಡು ಹೋಗಿ ಮಾತು ಕಥೆ ಆರಂಭಿಸಿದೆ. “ರಾವಣೇಶ್ವರ ಶ್ರೀರಾಮನ ಸಕಲ ಸೇನೆಯು ದಕ್ಷಿಣ ದಿಕ್ಕಿನತ್ತ ಸಾಗಿ ಬಂತು ಶ್ರೀರಾಮನನ್ನು ಹನುಮಂತನೂ ಲಕ್ಷ್ಮಣನನ್ನು ಅಂಗದನೂ ಹೆಗಲ ಮೇಲೆ ಹತ್ತಿಸಿಕೊಂಡು ಬಂದರು. ಮಹಾರಾಜ! ಆ ಕಪಿಸೈನ್ಯದಲ್ಲಿ ಕರಡಿಗಳು, ಆನೆಗಳು, ಮುಸವಗಳೇ, ಕುದುರೆಗಳು, ಸಿಂಗಳಿಕಗಳೇ ತೇರುಗಳು ಲಕ್ಷಾಂತರ ಕಪಿಗಳೇ ಕಾಲ್ಬಲಗಳಾಗಿವೆ. ಈ ಚತುರಂಗ ಬಲಕ್ಕೆ ಕಲ್ಲು, ಗುಂಡು, ಕಟ್ಟಿಗೆ ಮರಗಳೇ ಆಯುಧಗಳು, ಪ್ರಭು! ಅಪಾರ ಸೈನ್ಯದೊಂದಿಗೆ ರಾಮ ಲಕ್ಷ್ಮಣರು ದಕ್ಷಿಣ ಸಮುದ್ರ ದಂಡೆಗೆ ಬಂದು ಬೀಡು ಬಿಟ್ಟಿದ್ದಾರೆ. ಮಹಾಸಾಗರದಂತಹ ಆ ಕಪಿಸೇನೆಯನ್ನು ಕಂಡು ರಾಕ್ಷಸರು ಹೆದರಿ ಓಡಿ ಬರುತ್ತಿದ್ದಾರೆ ಮಹಾರಾಜ!’

“ಇರಲಿ, ಬೀಡು ಬಿಟ್ಟರೇನಾಯಿತು? ಕೆಲವೇ ವೀರರು ಮಾತ್ರ ಸಮುದ್ರವನ್ನು ಹಾರಬಲ್ಲರು. ಆದರೆ ಇನ್ನುಳಿದವರಿಗೆ ಸಮುದ್ರ ದಾಟ ಲಂಕೆಯನ್ನು ಸೇರುವುದು ಸುಲಭದ ಕೆಲಸವಲ್ಲ. ಶತ್ರುಗಳ ಮುಂದಿನ ಚಲನ ವಲನಗಳ ಬಗ್ಗೆ ಗಮನವಿಟ್ಟು, ನೋಡುತ್ತಿರಿ. ಆಗಾಗ್ಗೆ ವಿಷಯಗಳನ್ನು ತಿಳಿಸಿರಿ” ಎಂದು ಸಲಹೆ ನೀಡಿ ಹೊರಗೆ ಬಂದೆನು, ಹೊರಗೆ ಬಂದಾಗ ಮೇಘನಾದನು ಮಂಡೋದರಿಯು ಮಾತಾಡುತ್ತಾ ನಿಂತಿದ್ದರು. ಶತ್ರುಗಳು ಬರುತ್ತಿರುವ ವಿಷಯ ತಿಳಿದಿರಬೇಕು. ವಿಚಾರಮಗ್ನನಾಗಿ ಶತ್ರುಗಳ ಬಗ್ಗೆ ತಲೆಕೆಡಿಸಿಕೊಂಡಿದ್ದ ನಾನು ಅವರತ್ತ ಗಮನಹರಿಸದೆ ಆಸ್ಥಾನಕ್ಕೆ ಬಂದೆ. ಸಭೆಯಲ್ಲಿ ಮಂತ್ರಿಗಳು ಸೇನಾಧಿಪತಿಗಳು ಆತಂಕದಿಂದ ಕುಳಿತಿದ್ದರು. ಮಂತ್ರಿ ಪ್ರಹಸ್ತನು ಎದ್ದು ನಿಂತು ಶತ್ರು ಸೈನ್ಯವು ಬೀಡುಬಿಟ್ಟಿರುವ ವಿಷಯ ಅರಿಕೆ ಮಾಡಿದನು. “ಹೌದು, ನನಗೂ ವಿಷಯ ಗೊತ್ತಾಗಿದೆ. ವೈರಿಯ ಸೈನ್ಯವೆಷ್ಟು? ಅವರಲ್ಲಿರುವ ವೀರರುಗಳು ಯಾರು? ಆಯುಧಗಳ್ಯಾವುವು? ಯುದ್ಧದ ಸಾಮಾಗ್ರಿಯೆಷ್ಟು? ಇವನ್ನೆಲ್ಲಾ ಗೂಢಾಚಾರರಿಂದ ತಿಳಿದುಕೊಂಡು ಅದಕ್ಕೆ ತಕ್ಕಂತೆ ನಮ್ಮ ಸೇನೆಯ ಸಿದ್ಧತೆ ಮಾಡಿಕೊಳ್ಳಲು ಸೇನಾಧಿಪತಿಗಳಿಗೆ ಆಜ್ಞಾಪಿಸು ; ಲಂಕೆಯ ಮಹಾದ್ವಾರಗಳ ರಕ್ಷಣೆಗೆ ಯೋಗ್ಯ ಅಧಿಕಾರಿಗಳನ್ನು ನೇಮಿಸು. ಯಾವಾಗ ಯುದ್ಧ ಆರಂಭವಾಗುತ್ತದೋ ತಿಳಿಯದು. ಆದರೆ ಎಲ್ಲರೂ ಸಿದ್ಧರಾಗಿರಿ” ಎಚ್ಚರಿಕೆಯ ಮಾತುಗಳಿಂದ ಅಪ್ಪಣೆ ಹೊರಡಿಸಿದೆ. “ರಾವಣೇಶ್ವರ ರಾಮಲಕ್ಷ್ಮಣರೆಂದರೆ ಸಾಮಾನ್ಯ ಹುಲು ಮನುಜರು ಶಸ್ತ್ರಗಳನ್ನು ಹೊಂದಿರುವ ನಮ್ಮ ಸೈನ್ಯದ ಎದುರು ಕಲ್ಲುಗುಂಡುಗಳನ್ನು ಧರಿಸಿದ ಕಪಿಗಳೇನು ಮಾಡಬಲ್ಲರು” ಎಂದು ಹೊಗಳುತ್ತಿರಲು ಅಲ್ಲೇ ಸಭೆಯಲ್ಲಿ ಕುಳಿತಿದ್ದ ವಿಭೀಷಣನು ಎದ್ದುನಿಂತು “ಅಣ್ಣಾ ರಾಮಲಕ್ಷ್ಮಣರನ್ನು ಹುಲುಮಾನವರೆಂದು ಹೇಳುವ ಈ ಪ್ರಹಸ್ತನ ಮಾತುಗಳನ್ನು ನಂಬಬೇಡ. ಖರದೂಷಣ, ತ್ರಿಶಿರ, ಸುಬಾಹು, ಮಾರೀಚರನ್ನು ಸಂಹರಿಸಿದ ಅವರು ಹುಲು ಮಾನವರಲ್ಲ. ದೇವಾಂಶ ಸಂಭೂತರು ಅವರೊಂದಿಗೆ ವೈರತ್ವ ಬೇಡ, ಅವರೊಂದಿಗೆ ಒಮ್ಮೆಲೆ ಯುದ್ಧ ಮಾಡಬೇಡ, ಸಾಮಾದಿ ಬೇಧಗಳನ್ನು ಪ್ರಯೋಗಿಸಿ ನೋಡು ದುಡುಕಬೇಡ” ವಿಭೀಷಣನಾಡಿದ ಮಾತುಗಳನ್ನು ಕೇಳಿ ಮನಕೆರಳಿತು. “ಎಲೈ ಅ೦ಜುಬುರುಕ! ರಣಹೇಡಿ ನಾನು ನಿನ್ನನ್ನು ಶತ್ರುಗಳ ಗುಣಗಳ ವರ್ಣನೆ ಮಾಡೆಂದು ಕೇಳಲಿಲ್ಲ ನನ್ನ ಎದುರಿಗೆ ಶತ್ರುವನ್ನು ಹೊಗಳಿ ನಮ್ಮ ವೀರರನ್ನು ಹೆದರಿಸುವೆಯಾ ನೀನು ರಾಮಪಕ್ಷಪಾತಿಯಾದರೆ ಅವನನ್ನು ಸೇರಿಕೊ. ಸುಖದಲ್ಲಿದ್ದಾಗ ನಮ್ಮಲ್ಲಿದ್ದು ಕಷ್ಟಬಂದಾಗ ಸಲಹೆಗಳನ್ನು ನೀಡದೆ ಧೈರ್ಯಕೊಡದೆ ನನ್ನ ನಿರ್ಧಾರವನ್ನು ಖಂಡಿಸುತ್ತಿರುವ ನೀನೆಂತಹ ತಮ್ಮ! ನಡೆ ನನ್ನ ಕಣ್ಣೆದುರಿಗೆ ಇರಬೇಡ. ನೀನು ನಿನ್ನ ಮಂತ್ರಿಗಳು ಬಂಧುಗಳೊಡನೆ ಈಗೀಂದೀಗಲೆ ಹೊರಡು ಇನ್ನು ಮೇಲೆ ಯಾವತ್ತು ನಿನ್ನ ಮುಖ ತೋರಿಸಬೇಡ” ದುರ್‍ದಾನ ಪಡೆದವನಂತೆ ಅಲ್ಲಿಂದ ಅಂತಃ ಪುರದತ್ತ ನಡೆದೆ. ಮನಸ್ಸಿಗೆ ಘಾಸಿಯಾಗಿತ್ತು. ಮನೆಗೆ ಬಂದಾಗ ಆಧರಿಸಿ, ಉಪಚರಿಸಿ ಮುದ ನೀಡುವ ಮಡದಿ ದೂರದಲ್ಲಿದ್ದಳು. ಅವಳಿಗೀಗ ನಾನು ಬೇಡವಂತೆ, ನಾನು ನ್ಯಾಯ ಮಾರ್ಗದಲ್ಲಿ ನಡೆದರೆ ಮಾತ್ರ ಬಂದು ಆದರಿಸುವಳಂತೆ, ಪತಿ ಸೇವೆ ಮಾಡುವವಳಂತೆ, ಬೇಡ ಯಾರೂ ನನ್ನ ಸೇವೆ ಮಾಡುವುದು ಬೇಡ. ಮಡದಿ, ಮಕ್ಕಳು ಸಹೋದರರು, ಬಂಧುಮಿತ್ರರು ಎಲ್ಲರೂ ನಾನು ಚೆನ್ನಾಗಿದ್ದಾಗ ಮಾತ್ರ! ಕೆಳಗೆ ಬಿದ್ದೆನೆಂದು ಎಲ್ಲರೂ ತುಳಿಯಲು ನೋಡುತ್ತಾರೆಯೇ ಹೊರತು ಏಳಿಸುವ ಪ್ರಯತ್ನ ಮಾಡುವುದಿಲ್ಲ. ಕೈಯಲ್ಲಿ ಬಲವಿರುವವರೆಗೂ ರಾಜ್ಯ, ಅಧಿಕಾರ, ಮಮಕಾರ ಎಲ್ಲಾ! ಯಾರನ್ನು ನಂಬುವಂತಿಲ್ಲ. ವಿಭೀಷಣ ನನ್ನ ಪ್ರೀತಿಯ ತಮ್ಮ ; ಇದುವರೆಗೂ ನನ್ನ ಎದುರಿಗೆ ನಿಂತು ಮಾತಾಡಿದವನಲ್ಲ. ಈಗ ಉದ್ಧಟನಾಗಿ ವರ್ತಿಸುತ್ತಿದ್ದಾನೆ. ಗಾದೆ ಮಾತು ಸುಳ್ಳಲ್ಲ. “ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು” ನಾನೇನು ಮಾಡಬಾರದ ತಪ್ಪು ಮಾಡಿದೆನೆಂದು ಇವರೆಲ್ಲಾ ಹೀಗೆ ಮಾತನಾಡುತ್ತಾರೆ? ಯೋಚನೆಗಳ ಪರ್ವತವೇ ತಲೆ ಮೇಲೆ ಬಿದ್ದಂತಾಗಿ ಆಸನವೊಂದರಲ್ಲಿ ಕುಸಿದುಕುಳಿತೆ. ಹೊರಗಿನಿಂದ ಬಂದ ಸೇವಕನೊಬ್ಬ “ರಾವಣೇಶ್ವರಾ, ನಿಮ್ಮ ಅನುಜ ವಿಭೀಷಣರು ನಿಮ್ಮನ್ನು ಕಾಣಲು ಬಂದಿದ್ದಾರೆ. ಒಳಗೆ ಬರಲು ಅಪ್ಪಣೆ ಬೇಡುತ್ತಿದ್ದಾರೆ. ಜೀಯಾ ಮತ್ತೇಕೆ ಬಂದಿದ್ದಾನೋ ಉಪದೇಶ ಹೇಳಿ ತಲೆ ತಿನ್ನುತ್ತಾನೆ. ಬೇಡವೆಂದು ಹೇಳ ಹೊರಟವನು. ನೋಡೋಣ ಏನು ಹೇಳುತ್ತಾನೋ ಹೇಳಿ ತೊಲಗಲಿ” ಅಸಮಾಧಾನದಿಂದ ಬರಹೇಳಿದೆ.

“ಮತ್ತೇಕೆ ಬಂದೆ ಮುಖ ತೋರಿಸಬೇಡವೆಂದು ಹೇಳಿದ್ದೇನಲ್ಲಾ” “ಅಗ್ರಜಾ ನಿಮ್ಮನ್ನು ಲಂಕೆಯನ್ನು ಬಿಟ್ಟು ಹೋಗುವುದು ಸುಲಭವೇ”

“ಹಾಗಾದರೆ ನೀನೇಕೆ ನನ್ನ ವಿರುದ್ಧವಾಗಿ ಮಾತನಾಡಿ ಕೆಟ್ಟವ ನಾಗುತ್ತೀಯಾ? ನಾನು ನಿನಗಿಂತಲೂ ದೊಡ್ಡವನು ಯಾವುದನ್ನು ಮಾಡಬೇಕು ಯಾವುದನ್ನು ಬಿಡಬೇಕು ಎಂದು ತಿಳಿಯದಷ್ಟು ಮೂಢನಲ್ಲ” “ಅಣ್ಣ ನೀವು ಮಾಡುತ್ತಿರುವುದು ತಪ್ಪು ಎಂದು ಸಮರ್ಥಿಸಿ ಕೊಳ್ಳುತ್ತಿಲ್ಲ. ನೀವು ಇಟ್ಟ ಹೆಜ್ಜೆ ಸರಿಯಾದುದಲ್ಲ ಎಂದು ಎಚ್ಚರಿಸುತ್ತಿದ್ದೇನೆ. ತಾರುಣ್ಯದಲ್ಲಿ ತಪ್ಪು ಮಾಡುವುದು ನಡುವಯಸ್ಸಲ್ಲಿ ಕಷ್ಟಗಳನ್ನು ಅನುಭವಿಸುವುದು ವೃದ್ಧಾಪ್ಯದಲ್ಲಿ ಪಶ್ಚಾತ್ತಾಪ ಪಡುವುದು ಸಹಜ. ಅಣ್ಣಾ ನನಗೆ ಯಾವ ಸ್ವಾರ್ಥವೂ ಇಲ್ಲ. ನನ್ನಣ್ಣ ಸಾವಿರಾರು ವರ್ಷ ವೈಭವದಿಂದ ಲಂಕೇಶ್ವರನಾಗಿ ಮೆರೆಯಬೇಕು. ಅವನ ನೆರಳಿನಲ್ಲಿ ನಾವೆಲ್ಲಾ ನೆಮ್ಮದಿಯಿಂದ ಬಾಳಬೇಕು ಹಾಗೆಯೇ ಲಂಕೆ ನೀವು ಕಟ್ಟಿ ಬೆಳೆಸಿದ ರಾಜ್ಯ. ಆ ರಾಜ್ಯದ ಪ್ರಜೆಗಳು ಸುಖಸಂತೋಷದಿಂದ ಬಾಳಬೇಕೆಂದು ಬಯಸುವುದು ಅಪರಾಧವೇ!”

“ನನಗೂ ಅಷ್ಟೆ. ನನ್ನ ತಮ್ಮಂದಿರು ಮಕ್ಕಳು ನನ್ನ ಕಣ್ಣೆದುರಿಗೆ ಸುಖವಾಗಿರಬೇಕೆಂದು ಬಯಸುತ್ತೇನೆ. ಅವರಿಗೆ ಅವಮಾನವಾದರೂ ಸಹಿಸುವುದಿಲ್ಲ. ನನ್ನ ತಂಗಿಗೆ, ನನ್ನ ಮಿತ್ರನಿಗೆ ದ್ರೋಹ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಈ ಪ್ರಚಂಡರಾವಣ!”

“ಅಗ್ರಜಾ ತಪ್ಪು ಮಾಡಿದವರನ್ನು ಶಿಕ್ಷಿಸಲು ನಾವ್ಯಾರು? ನ್ಯಾಯ ಅನ್ಯಾಯಗಳನ್ನು ನೋಡಲು, ಶಿಕ್ಷಿಸಲು ಪರಮೇಶ್ವರನಿದ್ದಾನೆ. ಒಬ್ಬನನ್ನು ಉಳಿಸುವುದು ಅಳಿಸುವುದು ಅವನ ಕೈಯಲ್ಲಿರುವಾಗ ನಾವು ಬುದ್ಧಿ ಕಲಿಸುತ್ತೇನೆಂದು ಹೊರಡುವುದು ಅಪಚಾರವಾಗುತ್ತದೆ. ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳಬಾರದು. ತಾನೇ ಸೃಷ್ಠಿಸಿದ ಅಗ್ನಿಕುಂಡಕ್ಕೆ ತಾನೇ ಹಾರಿಕೊಂಡು ಸಾಯುವುದು ಸರಿಯೇನು? ಒಂದು ವಿಷಯ ಚೆನ್ನಾಗಿ ತಿಳಿದುಕೊಳ್ಳಿ ದೇವರು ಒಬ್ಬನನ್ನು ನಾಶ ಮಾಡಬೇಕೆಂದು ಮನಸ್ಸು ಮಾಡಿದರೆ ಮೊದಲು ಅವನ ವಿವೇಕವನ್ನು, ಬುದ್ಧಿಯನ್ನು ತಾಳ್ಮೆಯನ್ನು ಕಸಿದುಕೊಳ್ಳುತ್ತಾನೆ. ವಿವೇಕವಿಲ್ಲದ ಮನುಷ್ಯ ಇದ್ದು ಸತ್ತ ಹಾಗೆ, ಅವರಿಗೆ ಯಾರ ಮಾತು ಪಥ್ಯವಾಗುವುದಿಲ್ಲ. ರೋಗ ಬಂದವನು ಔಷಧವನ್ನು ತಿರಸ್ಕರಿಸುವಂತೆ ಸಜ್ಜನರ ಉಪದೇಶ ಕೇಳಲು ಹಿಂಜರಿಯುತ್ತಾನೆ. ನಾನಾದರೂ ಅಲ್ಪಜ್ಞಾನಿ, ತಾವು ಸಕಲವೇದ ಪಾರಂಗತರು ಬ್ರಹ್ಮಜ್ಞಾನಿಗಳು ನಾನು ತಿಳುವಳಿಕೆ ಹೇಳಬಾರದು. ನೀವು ತೆಗೆದುಕೊಂಡ ನಿರ್ಧಾರದಿಂದ ಮುಂದೆ ಏನೆಲ್ಲಾ ಅನಾಹುತಗಳಾಗಬಹುದೆಂದು ಯೋಚಿಸಿ ಯಾವುದೇ ಕೆಲಸ ಮಾಡುವ ಮುನ್ನ ಒಂದಲ್ಲ ಎರಡು ಸಲವಲ್ಲ ಹತ್ತಾರು ಬಾರಿ ಯೋಚಿಸಿ ಸಾಧಕ ಬಾಧಕಗಳನ್ನು ಗಮನಿಸಬೇಕು. ಈಗಾಗಲೇ ಸಾಕಷ್ಟು ಪ್ರಜೆಗಳನ್ನು ಪ್ರೀತಿಯ ಅಕ್ಷಕುಮಾರನನ್ನು ಕಳೆದುಕೊಂಡಿದ್ದೇವೆ. ಮತ್ತದರ ಪುನರಾವರ್ತನೆ ಯಾಗಬಾರದು”

“ವಿಭೀಷಣ ! ನೀನು ಹದ್ದು ಮೀರಿ ಮಾತನಾಡುತ್ತಿದ್ದೀಯಾ, ನಿನ್ನಿಂದ ಉಪದೇಶ ಪಡೆಯುವಂತಹ ಅವಿವೇಕಿ ನಾನಲ್ಲ ತಮ್ಮನೆಂದು ಸುಮ್ಮನೆ ಬಿಟ್ಟಿದ್ದೇನೆ. ಇಲ್ಲವಾದಲ್ಲಿ ನಿನ್ನ ತಲೆ ಕಡಿದು ಲಂಕೆಯ ಮಹಾದ್ವಾರಕ್ಕೆ ತೋರಣ ಕಟ್ಟುತ್ತಿದ್ದೆ”.

“ಒಳ್ಳೆಯದು, ಈಗಲೂ ಹಾಗೇ ಮಾಡಿ ನಿಮ್ಮ ಉಪ್ಪು ತಿಂದ ಜೀವ ಮುಪ್ಪಾಗುವವರೆಗೂ ನಿಮ್ಮ ಸೇವೆಯಲ್ಲಿ ಸವೆಸಬೇಕೆಂದಿದ್ದೆ. ಅಣ್ಣನ ಕೈಯಿಂದ ಸಾಯುವುದೇ ಪರಮಭಾಗ್ಯ. ಸಾಯುವ ಮುನ್ನ ನಾನೇನು ಹೇಳಬೇಕೋ ಅದೆಲ್ಲವನ್ನು ನಾನು ಹೇಳುತ್ತೇನೆ. ತಪ್ಪುದಾರಿಯಲ್ಲಿ ನಡೆಯುತ್ತಿರುವ ಅಣ್ಣನನ್ನು ಎಚ್ಚರಿಸುವುದು ನನ್ನ ಕರ್ತವ್ಯ. ಅಣ್ಣ ರಾಮಲಕ್ಷ್ಮಣರ ಪೂರ್ವಾಪರ ನಿಮಗೆ ಗೊತ್ತಿದೆಯೋ ಇಲ್ಲವೋ ನಾನಂತೂ ಸದೃಶವಾಗಿ ತಿಳಿಸುತ್ತೇನೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೊತೆಗಿರುವ ಜೀವಕ್ಕೆ
Next post ತೋರುವುದು ಕನ್ನಡಿ ಈ ಚೆಲುವು ಕರಗುವುದ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…