ನಾನು ಕನಸುಗಳ ಕಾಣುವುದು ಬಿಟ್ಟಿದ್ದೇನೆ
ಯಾಕೆಂದರೆ ಕನಸಿನ ಲೋಕವೇ ನನ್ನದಾಗಿದೆ.
ಎಳೆ ಬಿಸಿಲು ಬಿಂಬಿಸುವ ಸೂರ್ಯನ ಕೆಂಪಡರಿದ
ನೀಲ ಬಾನತುಂಬ ದಿನಾಲು ಬೆಳ್ಳಕ್ಕಿಗಳು ಹಾರುತ್ತಿವೆ.
ಮನೆಯ ಮುಂದಿನ ಪುಟ್ಟ ಗಿಡಗಳಲಿ ಹೂವರಳಿ
ದಿವ್ಯ ಮೌನದಲಿ ದಿನಾಲೂ ಪ್ರಾರ್ಥನೆ ಮಾಡುತ್ತವೆ.
ಮನೆಯ ಒಳಗಿನ ಒಲೆಯಲ್ಲಿ ಬಿಸಿ ಬಿಸಿ
ರೊಟ್ಟಿಗಳು ಭೂಮಿ ಆಕಾರದಲಿ ತಿರುಗುತ್ತವೆ.
ಒಂದು ಪರಿಪೂರ್ಣತೆಯ ಗುಡಿಯ ಗಂಟೆ
ಮತ್ತು ಮಹಾ ಬೆಳಗಿನ ನೀಲಾಂಜನ ಬೆಳಗುತ್ತದೆ.
ಮನೆಯ ಗೋಡೆಗಳ ತುಂಬೆಲ್ಲಾ ಅವನ
ಭರವಸೆಯ ಬರಹಗಳು ಗೋಚರಿಸುತ್ತವೆ.
ತಿಳಿ ಬೆಳದಿಂಗಳು ಮತ್ತು ಚಿಕ್ಕಿಗಳ ಕಾಂತಿ
ಕಿಟಕಿಗಳ ಸರಳುಗಳ ದಾಟಿ ಪ್ರತಿ ಫಲಿಸುತ್ತದೆ.
ಮತ್ತು ಮನೆಯ ಬಾಗಿಲಿಗೆ ಬಂದು ನಿಂತ
ಅವನ ಮೋಹದ ಸ್ಪರ್ಶ ತಂಗಾಳಿ ಹರಡುತ್ತದೆ.
ಮತ್ತೆ ಕೈಯಲ್ಲಿರುವ ಹಸಿರು ಬಳೆಗಳು
ರಿಂಗಣಿಸುತ್ತವೆ ಕನಸಿನ ಲೋಕದ ರಮ್ಯ ಕ್ಷಣಗಳ.
*****