ಪ್ರತಿನಿತ್ಯ ಒಂದು ಹೊಸ ಅನುಭವ
ಹೊತ್ತ ಸೂರ್ಯ ಹುಟ್ಟಿ, ಜಗದ
ಜನರ ನೆರೆ ಕೂದಲ ಮಧ್ಯೆ ಒಂದು ನಗೆ,
ಒಂದು ಹಾಡು, ಮಲ್ಲಿಗೆ ಅರಳುತ್ತವೆ ಘಮ್ಮಗೆ.
ಒಲ್ಲದ ಮನಸ್ಸು ರಾತ್ರಿ ಕಳೆದು,
ಬಿಳಿ ಹಕ್ಕಿ ಹಾರಾಡುವ ನೀಲ ಬಾನಿನಲಿ
ಬೆಳಕಿನ ಕಿರಣಗಳು ಸೋಕಿದಾಗ,
ನಿತ್ಯ ನೂತನದ ನಡುಗೆ ಅಡುಗೆ, ಪ್ರೀತಿಯಲ್ಲಿ
ಕಾಮದಲ್ಲಿ ಸಂಗತಿಗಳು.
ಏನು ಮಾಡಬೇಕು, ಯಾವುದು ಹುಡಕಬೇಕು,
ಎನ್ನುವ ಮನಸ್ಸುಗಳ ದಾರಿಗುಂಟ ಮೂಡಿಸಿವೆ,
ಪಾದದ ಗುರುತುಗಳು. ಸಂತೆಯಲಿ ಬಿಸಿ ಚಹಾ ಹೀರಿ,
ಚಪ್ಪರಿಕೆಯ ಕನಸುಗಳು ಮೂಟೆಗಳು ಚಲಿಸಿವೆ ದಾರಿಗುಂಟ.
ಓಡುವವರ, ಓಡಿದವರ, ತಿಳಿದವರ ತಿಳಿಯದವರ
ಲೆಕ್ಕಾಚಾರಗಳನ್ನು ಲೆಕ್ಕ ಇಟ್ಟವರು ಇಲ್ಲಾ, ಈ
ಲೋಕದ ವಿಸ್ಮಯಗಳಲಿ, ವರ್ತನೆಯ ಪರಿವರ್ತನೆಯ,
ಆಕಾಶವಾಣಿ ಸುದ್ದಿಗಳು ಬಿತ್ತರಗೊಂಡಿವೆ ಬಯಲ ತುಂಬ.
ಸೋಲು ಗೆಲುವಿನ ಪದಗಳು ಸೇರಿದ ಮಹಾಕಾವ್ಯ
ಕೊನೆಯ ಕ್ಷಿತಿಜದ ತುಂಬ ಬೆಟ್ಟ ಸಾಲು ಹರಡಿ,
ಒಮ್ಮೊಮ್ಮೆ ಭೆಟ್ಟಿಯಾಗಿ ಮತ್ತೊಮ್ಮೆ ಛೇದಿಸಿ,
ಮಗುದೊಮ್ಮೆ ತುಂಬಿ, ಖಾಲಿಯಾಗುವ ನೀಲಿ
ಆಕಾಶ ನೀನು.
*****