ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ
ಅಂಥ ಘನವಾದುದೇನಿತ್ತು ನನ್ನಲ್ಲೆಂದು
ಜಗ್ಗಿ ಕೇಳದೆ ಲೋಕ ನಿನ್ನನ್ನು ಮುಂದಕ್ಕೆ?
ಅದಕೆಂದೆ ನನ್ನನ್ನು ಮರೆತುಬಿಡು ನೀ ಎಂದು
ಕೇಳುತ್ತಿರುವೆ; ಅಂಥ ಗುಣವೊಂದ ನನ್ನಲ್ಲಿ
ಸುಳ್ಳು ಹೇಳದೆ ಹೇಗೆ ತಾನೆ ತೋರಿಸಬಲ್ಲೆ?
ನನಗಾಗಿ ಸುಳ್ಳಾಡಿ ಪರವಹಿಸಿ ನಿಂತಲ್ಲಿ
ನಿನ್ನ ನಿಜಪ್ರೇಮವೂ ಸುಳ್ಳಂತೆ ಕಾಣದೆ?
ಇಲ್ಲ ಬೇಡ ಅದೆಲ್ಲ, ನನ್ನ ಹೆಸರೂ ಕೂಡ
ಹೂತುಹೋಗಲಿ ನನ್ನ ಹೆಣದ ಜೊತೆ ಗೋರಿಯಲಿ.
ಹಾಗಾದಾಗ ಮಾತ್ರ ನಮ್ಮ ನೆನಪೂ ಕೂಡ
ಉಳಿಯುವುದು ಲಜ್ಜೆಗೇಡಾಗದೆಯೆ ಲೋಕದಲಿ
ನನ್ನಿಂದ ಹೊರಬಂದುದೆಲ್ಲವು ಅಕೀರ್‍ತಿಕರ,
ನೀನು ಸಹ ಅಂಥದ್ದ ಒಲಿಯುವುದು ಹಾನಿಕರ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 72
O lest the world should task you to recite