ಸುಳಿಯದಿರು ಸಂಶಯವೆ
ನನ್ನವರ ಸನಿಹದಲಿ
ಬೆರಸದಿರು ವಿಷವನ್ನು ಅನ್ನದಲ್ಲಿ
ಬಾಳನಂದನ ವನವ
ತುಳಿದು ತೊತ್ತಳಗೈದು
ತುತ್ತದಿರು ಇದನಿನ್ನ ಒಡಲಿನಲ್ಲಿ
ನಿನ್ನ ರಾಕ್ಷಸ ಕೃತ್ಯ
ವಿಷಮತೆಗೆ ಮೊದಲಹುದು
ದೂರಸರಿ ಸುಳಿಯುವುದೆ ನೀನು ಇಲ್ಲಿ?
ವಿಶ್ವಾಸವೆಂಬುವದು
ತತ್ತರಿಸಿ ಬೀಳುವದು
ಮುರಿಯದಿರು ಒಗೆಯದಿರು ಬಳ್ಳಿಚೆಲ್ಲಿ
ನಿನ್ನ ಕಾವಿಗೆ ಕಂದಿ
ಹೋಗುವದು ಕಗ್ಗನೇ
ಸ್ನೇಹಲತೆ ಸಾಕು, ಸರಿ, ದೇವರಾಣೆ
ನೀನು ಇದ್ದೆದೆ ಮಸಣ
ಮರುಭೂಮಿ ನರಕವದೆ
ಬಾರದಿರು ತೊಳಗುತಿದೆ ಮನದ ಕೋಣೆ
ದ್ವೇಷದುಸ್ವಾರ್ಥಕ್ಕೆ
ಕೋಪ ಮಾತ್ಸರ್ಯಕ್ಕೆ
ಹೀನ ಕೃತ್ಯಕ್ಕೆಲ್ಲ ನೀನೆ ಅನ್ನ
ದೇವ, ಕಾಯ್ ನನ್ನವರ
ಸಂಶಯದ ಬಲೆಯಿಂದ |
ಬಡಿಸದಿರು ಉಣಿಸದಿರು ಹೀನ ಬನ್ನ
*****