ಅರಿತ ಜೀವಿಗಳೆರಡು ಬೆರೆತು
ಸಪ್ತಪದಿಯ ಹಾದಿ ತುಳಿದು
ಜೀವನ ಸಂಗಾತಿಗಳಾಗಿ ನಡೆದು
ಬಾಳ ದೋಣಿಯನೇರಿ ತೀರ ಬಿಡಲು
ಪಯಣವು ಹಾಯಾಗಿ ಸಾಗಿರಲು
ದೂರ ತೀರವ ಸೇರುವ ತವಕ
ನಡೆಯುತಿರಲು ಪ್ರೀತಿಯ ಪುಳಕ
ಪ್ರಣಯದ ಗೀತೆಯ ಹಾಡಿತು ಮನ
ಮಧು ಚಂದ್ರದಲಿ ಒಂದಾದರು ದಿನ
ಕಾಲ ಉರುಳಿ ಕರುಳ ಕುಡಿಗಳ ಜನನ
ಏಳು ಬೀಳಿನ ಅಲೆಗಳಲ್ಲಿ ಸಾಗಿ
ಏರಿಳಿದು ಮುಂದೆ ಸಾಗುತಲಿ ಜೊತೆಯಾಗಿ
ಮಮತೆಯ ಮೂರು ಮಕ್ಕಳ ಜೊತೆ ಸಾಗಿದ
ತುಂಬು ಸಂಸಾರದ ದೋಣಿಯ ಮಧ್ಯ
ಮೋಹದ ಸೆಳೆವಿಗೆ ಸಿಲುಕಿಕೊಂಡಿತ್ತು
ಸ್ವಚ್ಛಂದದ ಸಂಸಾರದ ನಡುವೆ
ಪತಿಯ ಅರಿವಿಗೆ ಮಂಕು ಕವಿದಿತ್ತು
ಮೋಹಿನಿಗೆ ಮೋಹಕೆ ಮನ ಸೋತಿತ್ತು
ಪ್ರೀತಿಯ ಬಲೆಯೊಳಗೆ ಜೀವ ಸಿಲುಕಿತ್ತು
ಬೇರೆ ಸುಂದರ ದೋಣಿ ಏರುವ ಮನಸ್ಸಾಗಿತ್ತು
ಸವತಿಯ ಚೆಲ್ಲಾಟಕೆ ರೋಸಿದ ಸತಿಯು
ದಿನವೂ ಹರಿಸಿದಳು ಕಣ್ಣೀರ ಕೋಡಿಯ
ಸಂಸಾರ ಸೂತ್ರ ಹರಿದ ಗಾಳಿ ಪಟವಾಯಿತೆಂದು
ಅಂಗಲಾಚಿ ತಿದ್ದಿ ಬುದ್ಧಿ ಹೇಳಿ ಬೇಡಿಕೊಂಡರೂ
ಬಿಡದಾದ ಪತಿಯು ಮೋಹಿನಿಯ ಸಂಪರ್ಕವನ್ನು
ಮಡದಿ ಮಕ್ಕಳ ದೂರ ಮಾಡಲಾಗದೆ
ಪ್ರೇಯಸಿಯ ಸಂಗವನ್ನು ಬಿಡಲಾಗದೆ
ಅತಂತ್ರದಿ ಅವನು ಕುಡಿತಕೆ ದಾಸನಾಗಿ
ದಿನಗಳು ಕಳೆದ ಮೇಲೆ ತಪ್ಪಿನ ಅರಿವಾಗಿ
ಪ್ರಾಯಶ್ಚಿತ್ತವ ಬಯಸಿದ ಮಾಡಿದ ತಪ್ಪಿಗಾಗಿ
ಮಡದಿಯ ಬಳಿಯಲಿ ಮೌನವ ಮುರಿದು
ಮಾಡಿದ ತಪ್ಪನು ಮನ್ನಿಸಿ ಬಿಡು ನೀ ಎಂದು
ಅದೇ ತಪ್ಪು ಮಾಡೆನೆಂಬ ಭಾಷೆಯ ಇತ್ತು
ರತ್ನವೇ ನೀನು ನನ್ನೊಡನೆ ಇರುವಾಗಲೂ
ಅರಿಯದೆ ಹೋಗಿ ದ್ರೋಹವ ಮಾಡಿದೆ ಎನ್ನಲು
ಸತಿಯ ಮನ ಕರಗಿ ನೀರಾಗಿ ಹೋಗಲು
ವಸಂತನ ಆಗಮನದಿ ಪ್ರಕೃತಿ ಹಸಿರಾದಂತೆ
ಬಾಡಿದ ಬದುಕದು ಮತ್ತೆ ಚಿಗುರೊಡೆದು
ಇಬ್ಬರ ಮನದೊಳು ಆಸೆಗಳು ಚಿಗುರಿದವು
ಅರಿತ ಜೀವಿಗಳೆರಡು ಒಂದೊಂದಾಗಿ ಬೆರೆತು
ದೋಣಿಯ ಪಯಣವು ಮತ್ತೆ ಸಾಗಿತ್ತು
*****