ಕಾಡುತ್ತಿವೆ ರಾತ್ರಿಗಳು
ಹಗಲು ಕಟ್ಟಿದ ಇರುಳ ಕೋಟೆ
ಒಳಗೆ ಒಂದೇ ಸಮ ಕತ್ತಿವರಸೆ
ಪ್ರಾಣ ಹೋಗದ ಸಾವುಗಳು
ಸದ್ದು ಮಾಡದ ನೋವುಗಳ.
ಕತ್ತಲ ಸೋನೆ ಚರಿತ್ರೆಯಲ್ಲಿ
ತೋಯ್ದ ಮೆದುಳ ನೆಲದಲ್ಲಿ
ಮನಸ್ಸಿನ ಬೀಜ ಬಿರಿದು
ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತಿ
ಪರದಾಡುತ್ತಲೇ ಪದವಾಗುವ ಪ್ರೀತಿ!
ಉರಿವ ಒಲೆ ಮೇಲೆ ತಲೆ ಬಾಣಲೆ
ಕೊತ ಕೊತ ಕುದಿಯಲ್ಲಿ ಎದ್ದು ಬಿದ್ದೇಳುವ ಎದೆ
ಹೆಚ್ಚಾದರೆ ಸೀದ ವಾಸನೆ ಕಚ್ಚುತ್ತದೆ
ಕಮ್ಮಿಯಾದರೆ ಅರೆ ಬರೆ ಹಸಿ-
ವು ಹೆಚ್ಚುತ್ತದೆ.
ಈ ವೈಪರೀತ್ಯದ ಉರಿ ಗಾಯ ಕಾಣುವುದಿಲ್ಲ
ಮೋಡ ಮುಚ್ಚಿದ ಬೆಳಕು ನೋವು ನಿಲ್ಲುವುದಿಲ್ಲ.
*****