ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ
ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ
ಒಲೆ ಹೊತ್ತಿಕೊಳ್ಳುವಾಗ ಸೀತೆ
ಯಾಕೆ, ಯಾಕೆ ನೆನಪಾಗಬೇಕು?
ಕೆರೆಯ ಏರಿಯ ಮೇಲೆ ಭಾಗೀರಥಿ
ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ
ಯಾಕೆ, ಯಾಕೆ ಕಾಣಬೇಕು?
ಚಿತೆಯಿಂದ ಎದ್ದು ಹಾರುವ ಬೂದಿ
ಲತೆಯಿಂದ ಕಳಚುವ ಮೊಗ್ಗಿನ ಬೇಗುದಿ
ನನ್ನದೇ ನನ್ನದೇ ಎಂದು ಯಾಕೆ ಅನ್ನಿಸಬೇಕು?
`ನಡುವೆ ಸುಳಿವಾತ್ಮ
ಗಂಡೂ ಅಲ್ಲ, ಹೆಣ್ಣೂ ಅಲ್ಲ’
ಯಾವುದಕೂ ಪ್ರಮಾಣಿಸಿ ನೋಡಬೇಕು.
ಮೊಲೆ, ಮುಡಿ, ಉಡಿ
ಹೊತ್ತು ತಿರುಗಿದ ಮೇಲೆ ಅನಿಸಿದ್ದು…
ಕಷ್ಟ ಕಳೆಯಬೇಕು.
*****