-೧-
ನೆತ್ತಿಗೆ ಎಣ್ಣೆ
ಮೀಯಲು ಬಿಸಿ ನೀರು
ಕುದ್ದರೆ ಒಬ್ಬಟ್ಟಿನ ಸಾರು
ಅದು ಅಡವೆ ಯುಗಾದಿ
ಮನೆಗೆ ಸುಣ್ಣ
ಬಾಗಿಲಿಗೆ ತೋರಣ
ಎಲೆಯೊಳಗೆ ಹೊರಳಿದರೆ ಹೂರಣ
ಅದು ಅದುವೆ ಯುಗಾದಿ
ರಟ್ಟೆಯ ತುಂಬಾ ಕೆಲಸ
ಹೊಟ್ಟೆಯ ತುಂಬಾ ಊಟ
ತೊಟ್ಟರೆ ಹೊಚ್ಚ ಹೊಸ ಬಟ್ಟೆ
ಅದು ಅದುವೆ ಯುಗಾದಿ
ಮುಡಿಗೆ ಗಮಗಮಿಸುವ ಮಲ್ಲಿಗೆ
ತುಸು ಬಂಗಾರ ಕೊರಳಿಗೆ
ಬೇಡದೆ ನೀಡಲು ಇದ್ದರೆ
ಅದು ಅದುವೆ ಯುಗಾದಿ
ಮಾಮರಕೆ ಕೆಂಭಾರ
ಕುಹೂ ಎಂದರಳಿ ಸ್ವರ
ಮೂಡಿದರೆ ಎಳೆ ಚಂದಿರ
ಅದು ಅದುವೆ ಯುಗಾದಿ
ಅಷ್ಟೋ ಇಷ್ಟೋ ಸವೆದಿದೆ ಹಾದಿ
ತಿಳಿಯದೆ ತೀರಿದೆ ಅದೆಷ್ಟೋ ತೇದಿ
ಸವಕಳಿ ಕಳೆದೂ ಸಡಗರ ಉಳಿದರೆ
ಅದು ಅದುವೆ ಯುಗಾದಿ
-೨-
ಬದುಕಲೆಂದೇ ಸಾಯುವ ಆಟ
ಸಾಯಲೆಂದೇ ಬದುಕಿನ ಓಟ
ಕನಸ ತೊಟ್ಟಿಲೊಳಗೆ ಇಟ್ಟು ಮೊಟ್ಟೆ
ಕಾವು ಕೊಟ್ಟು ತೂಗಿ ಬಿಟ್ಟೆ
ಅದುವೆ ಆದಿ ಅದೇ ಅನಾದಿ
ಅದು ಅದುವೆ… ಯುಗಾದಿ
*****