ಮಾಲಕಂಸ
ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ
ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!”
ಜಡಭಾವದಿಂದ ಎಳೆದಿಡುತಲಡಿಗಳನು
ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?”
ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು
“ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು
ಹರಡಿರುವ ಒಡವೆಗಳನೆಲ್ಲ ತೋರಿದಳು,
ಬೆರತು ನಾ ನಿಂತೆ ಬೆರಳಿರಿಸಿ ಬಾಯಿಯೊಳು.
ಬಣ್ಣ ಬಣ್ಣದ ಸೀರೆ ಹೊನ್ನ ಹೂ-ರವಿಕೆಗಳು!
ರನ್ನದೋಲೆಯು ಮುತ್ತು ಚಿನ್ನ ದಾಭರಣಗಳು!
ಕುಸುರು ಕುಸುರಿನ ಹವಳ ಬೆಸೆದ ಕಂಕಣವು!
ಹಸನು ಹೊಗರುಗುವ ಕಾಲ್‌ಕಡಗ ಪೈಜಣವು!
ಬಗೆಬಗೆಯ ಕೆಮ್ಮೆಣ್ಣೆ ಸೊಗಸೆನಿಪ ಪನ್ನೀರು!
ಮೃಗಸಾರ ಕರ್ಪೂರ ಅಗುರು-ಗಂಧದ ತಿಗುರು!
ಹಣ್ಣು ಹಂಪಲವು ಸವಿಯನ್ನ ದಿನಿಸುಗಳು!
ಕಣ್ಣ ಸೆಳೆಯುವ ಹಲವು ಬಣ್ಣದರಳುಗಳು!
ನೋಡಿದೆನದೆಲ್ಲವನು, ನೋಡಿಯೇ ನೋಡಿದೆನು,
ಕೂಡಿಸಿದೆನದರಲಿಯೆ ನೀಡಿರುವ ನೋಟವನು.
‘ಎಲ್ಲವೂ ನನ್ನದಿದು’ ಎಂಬುದನ್ನು ನೆನೆದು
ಉಲ್ಲಸವು ಆಟವಾಡಿತು ಮನದಿ ಕುಣಿದು.
ಹಿಂಡುಹಿಂಡಾಗಿ ಹೆಣ್ಣುಗಳಲ್ಲಿಗೈತಂದು
ಕೊಂಡಾಡತೊಡಗಿದರು ನನ್ನ ದೈವವನಂದು.
ಕೊರೆಯುವೆದೆನೋವೆಲ್ಲ ಹೇಗೋ ಮರೆಯಾಯ್ತು
ಗರುವಿಕೆಗೆ ಮೈ-ಮನವದಾಗ ಸೆರೆಯಾಯ್ತು.
ಉಡುಗೆಯುಡಬಯಸಿದೆನು, ತೊಡಿಗೆಯಿಡಬಯಸಿದೆನು,
ಮುಡಿಬಿಗಿದು ಬೆಡಗಿನೊಳು ಮುಡಿವೆನೆಂದೆನು ಅರಳು,
ತಂಪು ಬಾವನ್ನದಣ್ಪನು ಮೈಗೆ ತೀಡಿ
ಸೊಂಪಾಗಿರುವೆನೆಂದೆ ಸವಿಯುಣಿಸನೂಡಿ.
‘ಮುಂದೇನು? ಮುಂದೇನು?’ ಎಂದು ಯಾರೋ ಕೇಳಿ-
ದಂದ ಕಿವಿದೆರೆಗೈದಲೆದೆಯು ಜುಽಮ್ಮನು ತಾಳಿ
ತನುವೊಮ್ಮಿದೊಮ್ಮೆಯೇ ನವಿರಿಗೊಳಗಾಯ್ತು,
ಇನಿಯ ನಿನ್ನಯ ನೆನಹೆ ಮನತುಂಬಿ ಹೋಯ್ತು.
ಬಿಡುಬಿಡರಿತೆನು ನಿನ್ನ ಹುಡುಗಾಟವೆಲ್ಲವನು
ಹಡೆದಮ್ಮ ಹೇಳಿದಳು: ಒಡವೆಯಿವನೆಲ್ಲವನು
ನೀನೆ ನನಗಾಗಿಯೇ ಕಳುಹಿರುವೆಯಂತೆ!
ಏನು ಈ ಮೊಡಿಯಾಟವನೆಲ್ಲಿ ಕಲಿತೆ?
ತೊಡೆಯಲಿಕೆ ನೆನಹನೀನೊಡವೆಗಳ ಕಳುಹಿಸಿದೆ,
ಜಡಮತಿಯು ನಾನರಿವುಗೆಡುತನಕೆ ಬೆರಗಾದೆ.
ನಿನ್ನ ಮರಸುವ ಚಿನ್ನ ರನ್ನದೊಡಿಗೆಗಳು
ಮಣ್ಣುಗೂಡಲಿ ಹಾಳು ಬಣ್ಣದುಡುಗೆಗಳು!
ಬೇಡವೆನಗಿನ್ನೇನು! ಬೇಡವೆನಗಿನ್ನೇನು!
ಓಡಿ ಬಾ ದೊರೆಯೆ, ನೀನೇ ಬೇಕು ನೀನು!
*****