ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ.
ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ.
ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ.
ಬೆವರದಿದ್ದರೆ-
ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು
ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು
ಮನಕ್ಕೆ ಆನಂದ ಸಿಗಲಾರದು
ಈ ಬೆವರ ಹನಿಗಳು ಅಡೆತಡೆಯಿಲ್ಲದೆ
ಹರಿದು ತಾವು ನಡೆದಾಡುವ ನೆಲವ ನೆನೆಸಿ
ತಂಪುಗೊಳಿಸಿ ಫಲವು ಫಲಿಸಿ
ಮತ್ತೊಬ್ಬರ ಮನವ ತಣಿಸುತಿರೆ….
ಇನ್ನು ಕೆಲವರಲ್ಲಿ ಹೊರ ಬರದ ಬೆವರು
ಒಳಗೊಳಗೆ ಹೆಪ್ಪು ಗಟ್ಟಿ ಮಲಗಿರಲು
ಇಂತಹವರು ಬದುಕನ್ನು
ತಮ್ಮ ಬೆವರಿನಲ್ಲಿ ತೇಲಿಸಲಾರರು
ಬೇರೆಯವರ ಬೆವರಿನಲ್ಲಿ ಅಟ್ಟಹಾಸದಿಂದ
ಕೇಕೆ ಹಾಕಿ ಕುಣಿಯುತ್ತಾರೆ ಬದುಕುತ್ತಾರೆ ಕೂಡ
ಈ ದೇಹದಲ್ಲಿ ರಕ್ತ ಬೆವರು ಬೇರೆ ಬೇರೆ
ಶುದ್ಧ ರಕ್ತಕೆ ಸುರಿಯಲೇಬೇಕು ಬೆವರು ಹೊರಗೆ
ಎಷ್ಟೋ ಜನ ಗುಲಾಮರು ಕೂಲಿ ಕಾರ್ಮಿಕರು ರೈತರು
ಬೆವರುವುದೇ ಬದುಕೆಂದು ತಿಳಿದು
ಅದರಲ್ಲೇ ಹೂತು ಹೋಗಿದ್ದಾರೆ
ಒಂದು ಚೂರು ಬೆವರದ ದೇವರು
ಬ್ರಹ್ಮಜ್ಞಾನಿಗಳೂ ಏಸಿ ರೂಮಿನಲ್ಲಿ ಕುಳಿತವರು
ರಾಜಕೀಯ ಮಂದಿಗಳಿಗೇನು ತಿಳಿದೀತು
ಬೆವರ ಮಹಿಮೆ ಬೆವರ ಬೆಲೆ
ಬೆವರ ಸುರಿಸದವರು ಸೃಷ್ಟಿಸಿದ ಧರ್ಮಗ್ರಂಥಗಳು
ಬೆವರ ಹನಿಗಳಿಗೆ ನೇಣಾದವು ಕುಣಿಕೆಯಾದವು
ಅನ್ನ ಸೃಷ್ಟಿಸುವ ಸದಾಕಾಲ ದುಡಿಯುವ ದೇಹಗಳು
ಗಮ್ಮೆಂದು ಸುರಿಸುವ ಬೆವರು
ಅಮೃತಕೆ ಸಮಾನ
ದುಡಿತದ ಬೆವರಿನಲಿ ವಿದ್ಯುತ್ ಸಂಚಾರವಿದೆ
ನಿರಂಕುಶ ಮನವಿದೆ ದಣಿವಿದೆ ರುಚಿಯಿದೆ
ಹೊಸದಿಟ್ಟ ಹೆಜ್ಜೆಯಿದೆ ಹೊಸ ಹುರುಪಿದೆ
ಹಾಡುಗಳಿವೆ ದನಿಯಿದೆ ಹೊಸ ಬೆಳಕಿದೆ
ಬೆವರಿಂದಲೇ ಹುಟ್ಟಿದವು ವಿವಿಧ ಹೋರಾಟಗಳು
ಶತಶತಮಾನಗಳಿಂದ
ವೈಭವದಿಂದ ಉಣ್ಣುತ್ತಾ ಢೇಕರಿಸುತ್ತಾ ಬಂದವರ
ಬೆವರೇ ನಿಜ ಬೆವರೆಂದು ನಂಬಿಸಿ
ಮತ್ತೊಬ್ಬರ ಸಮಾಧಿ ಮೇಲೆ
ಸೌಧ ಕಟ್ಟುವವರೇ ಹೆಚ್ಚು
ಏಸಿ ರೂಮಿನಲಿ ಕುಳಿತ ಇವರು
ತಮ್ಮ ಬೆವರಿನ ಜಲ ರಂದ್ರಗಳಿಗೆ
ವಿವಿಧ ಬಗೆಯ ಅತ್ತರು ಲೋಶನ್‌ಗಳು
ಸೆಂಟ್‌ಗಳನ್ನು ಜಡೆದು ತುಂಬಿ
ಬೆವರ ಬೆಲೆ ಕಳೆದವರು
ಬೆವರ ಪರಂಪರೆಗೆ ಕಿಚ್ಚು ಇಟ್ಟವರು
ಇವರು ಬೆವರುಗಳ್ಳರು.
*****