ಓ ಗೆಳೆಯಾ
ನನ್ನ ನಿನ್ನ ವಯಸ್ಸಿನ ಅಂತರ
ಅಜಗಜಾಂತರ ಆದರೂ!
ನೀನಾದಿ ಸ್ನೇಹ ಜೀವಿ
ಓ ಗೆಳೆಯಾ ನೀ ಹೋಗಿ
ಮಾಸಗಳಳಿದು ವರ್‍ಷಗಳುರುಳುತಿಹವು
ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ
ಯಾರ ಮನದಲ್ಲೂ ಮಾಸಿಲ್ಲ
ನಿನ್ನ ಹೆಸರು ಸದಾ ಹಚ್ಚ ಹಸಿರು
ನಿನ್ನಾ ಕಾವ್ಯದಲಿ, ನಿನ್ನಾ ಕಾದಂಬರಿಯಲಿ
ಬೇದೂರು ಭಟ್ಟರ ಕಾರಿನಲಿ ಹಾಸನ
ಮಂಗಳೂರಿನ ಸಾಹಿತ್ಯ ಸಮ್ಮೇಳನಕೆ
ಹೋದ ನೆನಪು ಮತ್ತೆ ಬರತಾವೇನ?
ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲಿ
ಮೊದಲನೇ ಕುರ್ಚಿ ಸಾರುತಿಹುದು ನಿನ್ನ ಇರುವಿಕೆಯ
ಅಭಿಮಾನಿ ಬಳಗವೊಂದು
ಮೊನ್ನೆ ನಡೆಸಿದ ಕವಿಗೋಷ್ಠಿಯಲಿ
ಹಿರಿಯ ಕಿರಿಯ ಕವಿಗಳು ವಾಚಿಸಿದ
ಕವನಗಳಲಿ ನಿಮ್ಮದೇ ಗುಣಗಾನ
ಸಾಗರದ ಗಾಂಧಿನಗರದಲ್ಲಿ
ನೀವಿದ್ದ ಮನೆಯ ರಸ್ತೆಗೆ
ನಿಮ್ಮ ಹೆಸರಿಡಲು ಒತ್ತಾಯಿಸಿದನೊಬ್ಬ
ಅಭಿಮಾನಿ ಸಭೆಯಲಿ
ಹೇಳು ಗೆಳೆಯಾ
ಅಲ್ಲಿ ಏನು ನಡೆಸಿದ್ದೀ? ಕಾದಂಬರಿ ಬರೆಯುತ್ತಿದ್ದೀ?
ಇಲ್ಲ, ಮಕ್ಕಳ ಕಥೆ ಬರೆಯುತ್ತಿದ್ದೀ?
ನಿನಗೆ ಬರುತ್ತಿಲ್ಲವೇ ನಮ್ಮೆಲ್ಲರ ನೆನಪು!
ಮಹಾಬಲೇಶ್ವರ ಭಟ್ಟ, ಪಂಪಣ್ಣ, ಸಿಜಿಕೆ,
ತಿರುಮಲ, ಸಾಕೆ, ವಿಟಿ ಇಲ್ಲಿ ಎಲ್ಲರೂ
ನನ್ನ ಕೇಳುತಿಹರು ‘ಹೇಗೆ ಇರುವರು ಉಡುಪರು’? ಎಂದು
ಮೌನವಾಚರಿಸದೇ ಉತ್ತರ ಬರೆ ಗೆಳೆಯ
ವಿಳಂಬಿಸದೇ ಉತ್ತರ ಬರೆ ಬೇಗ ಈ ಪತ್ರಕೆ!
*****