ಎನ್ನ ದೇಹವೇ ಕನ್ನಡಾಲಯ
ಕನ್ನಡ ಕನ್ನಡವೆನ್ನಲೇತಕೆ ಭಯ
ಕನ್ನಡಕೆ ನಮೋ ನಮೋ ಎನ್ನುವೆ
ಎನ್ನ ಮಂತ್ರವೊಂದೇ ಅದುವೇ ಕನ್ನಡ
ಬಾಡದ ಹೂವಿನ ಮಾಲೆ ಈ ಕನ್ನಡ
ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ
ಪ್ರೀತಿಯ ಕನ್ನಡವೇ ಎನ್ನುಸಿರು
ತಾಯ್ತುಡಿಯಿಲ್ಲದೆನಗೆ ಬದುಕಿಲ್ಲ
ಪ್ರೀತಿಯಿಂದಲಿ ಬರೆಯಲದು
ಮಾಡುವುದು ರೋಗ ದೂರವ
ಜಪ ಮಾಡಿದರೆ ಕನ್ನಡ ಎಂದು
ಮೋಕ್ಷಕೆ ದಾರಿಯಾಗುವುದಯ್ಯ
ಎಲೈ ಮನುಜನೇ ಕನ್ನಡಕೆ ಕೈಯೆತ್ತು
ಬಾರದೆಂದಿಗೂ ನಿನಗಾಪತ್ತು
ಕನ್ನಡ ಕನ್ನಡವೆಂದು ಮೂಗು ಮುರಿದರೆ
ಬರುವುದಪವಾದ ನಿನಗಂದು
ಕನ್ನಡದ ಗಾನ ಮೊಳಗುತಿರಲು
ಮೈನವಿರೇಳುವುದಯ್ಯ
ಸೊಬಗಿನ ಐಸಿರಿಯ ನಾಡು
ನನ್ನೊಲವಿನ ಚಲುವಿನ ಕನ್ನಡ
ರಾಕ್ಷಸನಂತೆರಗುತಿದೆ
ತಾಯ್ನುಡಿಯ ಮೇಲೆ ಹೊರನುಡಿಯು
ಮಹಾಮಹಿಮೆಯ ಕನ್ನಡ
ಹೊರನಾಡಿಗೆ ಕಂಡಿತು ರಾಮನಾಗಿ
ಕನ್ನಡದ ದರುಶನದಿಂದ
ಹೊರನುಡಿಯು ಸರಿಯಿತು ಹಿಂದಕೆ
ಕನ್ನಡ ಕನ್ನಡವೆಂದರೆ
ಒಡನೇ ಓಡುವುದು ಭೀತಿ
‘ಮಹಾಜನ ವರದಿ ಜಾರಿಗೊಳಿಸಿ
ಗಡಿಸಮಸ್ಯೆಗೆ ಮಂಗಳ ಹಾಡಿ’ ಎಂದು
ಗರ್‍ಜಿಸುವುದನ್ನು ಕಲಿತು ಸಿಂಹವಾಗಿ
ಗೆಲುವಿದ್ದರದಕೆ ನಿಮಗೆ ಶಕ್ತಿ ಕಣಾ
*****
೨೯-೧೦-೨೦೦೬ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
ಜನವರಿ ೨೦೧೦ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಂದ ‘ಕಾವ್ಯ ಕಲರವ’ ಕವನ ಸಂಕಲನದಲ್ಲಿ ಪ್ರಕಟ