ಅಭಿವೃದ್ಧಿ’ಯೆಂಬ ಪರಿಕಲ್ಪನೆಯು ಒಂದು ಪದ ಮಾತ್ರವಾಗಿ, ಸರ್ಕಾರಗಳ ಮಂತ್ರದ ಮಾತಾಗಿ ಬಳಕೆಯಾಗುತ್ತ ಹೋದಂತೆ ತನ್ನ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವ ಆತಂಕ ಮೂಡುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿ ಕೆಲಸಗಳು ನಡೆಯುವಾಗ ಏಳುವ ಪ್ರಶ್ನೆಗಳು ಮತ್ತು ಎದುರಾಗುವ ವಿರೋಧಗಳು ಎಷ್ಟರಮಟ್ಟಿಗೆ ಜನಕೇಂದ್ರಿತವಾಗಿವೆಯೆಂಬ ಕಳವಳವೂ ನನ್ನಲ್ಲಿದೆ. ಅಂದರೆ ಅಭಿವೃದ್ಧಿಯನ್ನು ಕಂಠಪಾಠದ ಮಂತ್ರಪದವಾಗಿಸುವ ಆಳುವ ವರ್ಗ, ಅಭಿವೃದ್ಧಿಯನ್ನು ತಂತಮ್ಮ ತಿಳುವಳಿಕೆಗನುಗುಣವಾಗಿ ವ್ಯಾಖ್ಯಾನಿಸುವ ಕೆಲ ವಲಯದ ಬೌದ್ಧಿಕವರ್‍ಗ ಎರಡೂ ಕಡೆ ಇರುವ ಕಾಳಜಿ ಯಾವುದೆಂಬ ಗೊಂದಲವೂ ಉಂಟಾಗುತ್ತದೆ. ಆಳುವ ವರ್ಗದ ಅಪೇಕ್ಷೆಗಳು ತನಗೆ ತಾನೇ ಅನಾವರಣಗೊಳ್ಳುತ್ತವೆಯಾದ್ದರಿಂದ ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಆದರೆ ಬೌದ್ಧಿಕ ವರ್ಗದ ವ್ಯಾಖ್ಯಾನಗಳು ಇಷ್ಟು ಸುಲಭವಾಗಿರುವುದಿಲ್ಲ. ಅಭಿವೃದ್ಧಿ ಮತ್ತು ಪರಿಸರ ಪ್ರಜ್ಞೆಗಳು ಪರಸ್ಪರ ಎದುರಾಗುವ ರೀತಿ, ಆಳುವವರ ಅಭಿವೃದ್ಧಿಯ ಕಲ್ಪನೆ, ಜನಪ್ರಿಯ ಕಾರ್ಯಕ್ರಮಗಳನ್ನು ಕುರಿತ ಕೆಲವು ಅರ್ಥಶಾಸ್ತ್ರಜ್ಞರ ನಕಾರಾತ್ಮಕ ಅಭಿಪ್ರಾಯ, ಆಳುವ ಪಕ್ಷ – ವಿರೋಧ ಪಕ್ಷಗಳ ಯಾಂತ್ರಿಕ ವಾದ ವಿವಾದ – ಇವೆಲ್ಲವೂ ಪ್ರಚಾರ ಪಡೆಯುತ್ತಿದ್ದರೂ ನಿಜಕ್ಕೂ ಯಾವುದು ಸರಿ ಎಂಬ ಬಗ್ಗೆ ಗೊಂದಲಗಳು ಮುಂದುವರೆದಿವೆ. ಕೆಲವೊಮ್ಮೆ ನಗರದ ನಾಲ್ಕು ಮರಗಳನ್ನು ಕಡಿದದ್ದು ಸುದ್ದಿಯಾದಂತೆ, ನಗರದಾಚೆಗಿನ ಸಾಲುಮರಗಳ ಸಾವು ಸುದ್ದಿಯಾಗುವುದಿಲ್ಲ. ಇವೆಲ್ಲಕ್ಕಿಂತ ಭೀಕರವಾದ ಅಸ್ಪೃಶ್ಯತೆ ಮತ್ತು ಹಸಿವುಗಳನ್ನು ನಿತ್ಯದ ಗೋಳು ಎಂಬಂತೆ ಒಪ್ಪಿಕೊಂಡಿರುವ ಪ್ರಜ್ಞಾಪೂರ್ವಕ ವ್ಯಂಗ್ಯಕ್ಕೆ ಉತ್ತರವೂ ಇಲ್ಲ; ಪ್ರಶ್ನೆಯೂ ಇಲ್ಲ. ಇಂತಹ ಅಭಿವೃದ್ಧಿ ಪರ ಮತ್ತು ವಿರೋಧಗಳ ವೈರುಧ್ಯಗಳನ್ನು ವಿಷಾದದಿಂದ ಗಮನಿಸುತ್ತಲೇ ಕಟುವಾಸ್ತವಗಳನ್ನು ಗ್ರಹಿಸಬೇಕಾಗಿದೆ.
ಈಗ ಕರ್ನಾಟಕದ ಅಂತರಂಗಕ್ಕೆ ಬರೋಣ. ನಮ್ಮಲ್ಲಿ ಶ್ರೀಗಂಧದ ಕರ್ನಾಟಕ ಇರುವಂತೆಯೇ ಹೊಂಗೆ, ಹುಣಿಸಿ, ಜಾಲಿಮರಗಳ ಕರ್ನಾಟಕವಿದೆ. ಭೋರ್ಗರೆವ ಕಡಲಿನ ಕರ್ನಾಟಕವಿರುವಂತೆಯೇ ಬಿರುಕು ಬಿಟ್ಟ ಕೆರೆಗಳ ಕರ್ನಾಟಕವಿದೆ. ತುಂಬಿದ ನದಿಗಳ ಕರ್ನಾಟಕ ವಿರುವಂತೆಯೇ, ನೀರಿಲ್ಲದ ಹಳ್ಳಕೊಳ್ಳಗಳ ಕರ್ನಾಟಕವಿದೆ. ಕೋಗಿಲೆಗಳ ಕರ್ನಾಟಕವಿರುವಂತೆಯೇ ಕಾಗೆಗಳ ಕರ್ನಾಟಕವೂ ಇದೆ. ವೈಭವೀಕರಣಕ್ಕೆ ಮಾತ್ರ ನಾಲಗೆಯಾಗುವ ಕಂಠ ಪಾಠಕ್ಕೆ ಶ್ರೀಗಂಧ, ಕಡಲು, ನದಿ, ಕೋಗಿಲೆಗಳ ಕರ್ನಾಟಕ ಮಾತ್ರ ಮುಖ್ಯವಾಗುತ್ತದೆ. ಹೊಂಗೆ, ಹುಣಿಸೆ, ಜಾಲಿ, ಕೆರೆ, ಹಳ್ಳಕೊಳ್ಳ, ಕಾಗೆಗಳ ಕರ್ನಾಟಕ ಅಮುಖ್ಯವಾಗುತ್ತದೆ. ಇದರ ಪರಿಣಾಮ ಏನು ಗೊತ್ತೆ?
‘ಸಮೃದ್ಧ ಕರ್ನಾಟಕ’ದ ಕಂಠಪಾಠದಲ್ಲಿ ಹಸಿವಿನ ಕರ್ನಾಟಕ ಅಲಕ್ಷ್ಯಕ್ಕೀಡಾಗುತ್ತದೆ. ನಮ್ಮಲ್ಲಿ ಇರುವುದು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕವೆಂಬ ಪ್ರಾದೇಶಿಕ ವಿಭಾಗಗಳು ಮಾತ್ರವಲ್ಲ. ಈ ಎಲ್ಲ ಪ್ರಾದೇಶಿಕ ವಿಭಾಗಗಳಿಗೂ ಅನ್ವಯಿಸುವ ‘ಹಸಿವಿನ ಕರ್ನಾಟಕ’ವಿದೆ. ಈ ಹಸಿವಿನ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ, ಅಲ್ಲಿನ ಪ್ರಶ್ನೆಗಳಿಗೆ ಉತ್ತರವಾದರೆ, ಅದು ಕರ್ನಾಟಕದ ಅಭಿವೃದ್ಧಿಯ ನಿಜವಾದ ದನಿಯಾಗುತ್ತದೆ. ನನಗನ್ನಿಸುತ್ತದೆ: ಹಸಿವಿನ ಭಾಷೆಯನ್ನು ಅರ್ಥಮಾಡಿಕೊಳ್ಳದ ಅಭಿವೃದ್ಧಿಗೆ ಅರ್ಥವಿಲ್ಲ. ಅಭಿವೃದ್ಧಿಯೆನ್ನುವುದು ಕಂಠಪಾಠದ ಮಂತ್ರವಾಗಬಾರದು; ಹಸಿವಿನ ಆತಂಕವಾಗಬೇಕು. ಈ ಆತಂಕದ ಆಂತರ್ಯದಲ್ಲಿ ಹುಟ್ಟುವ ನಡೆನುಡಿಗಳು ಕರ್ನಾಟಕಕ್ಕೆ ಬತ್ತಿಹೋಗದ ಮಾನವೀಯ ಮನಸ್ಸನ್ನು ತಂದುಕೊಡುತ್ತವೆ; ಕಮರಿಹೋಗದ ಕನಸನ್ನು ಕಟ್ಟಿಕೊಡುತ್ತವೆ.
ಅಭಿವೃದ್ಧಿಗಷ್ಟೇ ಅಲ್ಲ, ನಮ್ಮ ಅಧ್ಯಯನಗಳಿಗೂ ಹಸಿವಿನ ಭಾಷೆ ಅರ್ಥವಾಗಬೇಕು. ಅಜ್ಞಾತ ವಲಯಗಳ ಅನಾವರಣ ಮುಂದುವರೆಯಬೇಕು. ಈ ಮೂಲಕ ನಮ್ಮ ಸಂಶೋಧನೆ ವಿಶಿಷ್ಟ ಸಂವೇದನೆಯನ್ನು ಒಳಗೊಳ್ಳಬೇಕು. ಅಧ್ಯಯನಕ್ಕೆ ಅಂತಃಕರಣ ಲಭ್ಯವಾಗಬೇಕು. ಹಾಗಾದರೆ, ಇಲ್ಲಿವರೆಗಿನ ನಮ್ಮ ಸಂಶೋಧನೆ ಮತ್ತು ಅಧ್ಯಯನಗಳು ಈ ಕೆಲಸವನ್ನು ಮಾಡಿಯೇ ಇಲ್ಲವೆ? ಹಾಗೆಂದು ಹೇಳಲಾಗದು. ಯಾಕೆಂದರೆ ಹಸಿವಿನ ಭಾಷೆಯಾಗಿ ಹೊರ ಬಂದ ಅಧ್ಯಯನ ಮತ್ತು ಅಭಿವ್ಯಕ್ತಿ ಕ್ರಮಗಳು ಅಲ್ಲಲ್ಲೇ ಕಾಣಿಸಿಕೊಂಡಿವೆ. ವಿಶೇಷವಾಗಿ ಎಪ್ಪತ್ತರ ದಶಕದಿಂದೀಚೆಗೆ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಳವಳಿಗಳ ಫಲವಾಗಿ ಹಸಿವಿನ ಕರ್ನಾಟಕವೂ ಕೆಲ ಅಜ್ಞಾತ ಸಂಸ್ಕೃತಿಗಳೂ ಅನಾವರಣಗೊಂಡಿವೆ. ಇಷ್ಟಾಗಿಯೂ ನಮ್ಮ ಸಂಶೋಧನೆ (ಮತ್ತು ಅಧ್ಯಯನ) ಕುರಿತ ಕೆಲವು ಪ್ರಶ್ನೆಗಳು ನನ್ನನ್ನು ಕಾಡಿಸುತ್ತಿವೆ. ನಮ್ಮ ಸಂಶೋಧನೆಗಳು ಅಧ್ಯಯನದ ಶಿಸ್ತು, ನಿಖರ ಆಕರ, ಶೋಧದ ಸಂಯಮಗಳಿಂದ ಪಡೆದಿರುವ ಮಹತ್ವಕ್ಕೆ ನಾವು ಮನ್ನಣೆ ಕೊಡಬೇಕು. ಅದಕ್ಕಾಗಿ ನಮ್ಮ ಸಂಶೋಧಕರನ್ನು ಅಭಿನಂದಿಸಬೇಕು. ಆದರೆ ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಆರಂಭದ ಹಂತ ಮತ್ತು ಕೆಲವು ಜಾನಪದ ಸಂಶೋಧನೆಗಳನ್ನು ಹೊರತುಪಡಿಸಿದರೆ, ಉಳಿದಂತೆ ನಮ್ಮ ಪ್ರಮುಖ ಸಂಶೋಧಕರು ತಂತಮ್ಮ ಜಾತಿ, ಮತ, ಧರ್ಮಕ್ಕೆ ಸಂಬಂಧಿಸಿದ ಕ್ಷೇತ್ರಗಳು ಮತ್ತು ಕೃತಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿರುವುದು ನಿಜವಲ್ಲವೆ? ಜೈನ, ವೀರಶೈವ, ವೈದಿಕ ಎಂದು ಸಾಹಿತ್ಯವನ್ನು ವಿಭಾಗಿಸು ವಷ್ಟರಮಟ್ಟಿಗೆ ಸಂಶೋಧನೆ ಮತ್ತು ಅಧ್ಯಯನ ವಲಯ ಕೇಂದ್ರೀಕೃತವಾಗಿರಲಿಲ್ಲವೆ? ಕೆಲವು ಅಪವಾದಗಳನ್ನು ಬಿಟ್ಟರೆ ತಮ್ಮ ಜಾತಿಮತ ಧರ್ಮಕ್ಕೆ ಸೇರದೆ ಇರುವ ಕೃತಿಗಳನ್ನು ಯಾಕೆ ಯಾರೂ ಮುಟ್ಟಲಿಲ್ಲ? ಹಾಗಾದರೆ ಜೈನ, ವೀರಶೈವ, ವೈದಿಕ ಕೃತಿಗಳಾಚೆಗೆ ಬೇರೆ ಮಹತ್ವದ ಕೃತಿಗಳೇ ಇರಲಿಲ್ಲವೆ? ಅಂತಹ ಯಾವ ತಾಳೆಗರಿಗಳೂ ಸಿಗಲಿಲ್ಲವೆ? ಸಿಕ್ಕಿದರೂ ‘ಗ್ರಂಥ ಸಂಪಾದನೆ’ಯಾಗಲಿಲ್ಲವೆ? ಮೊದಲು ಲಿಖಿತಾಕ್ಷರ ಸಂಸ್ಕೃತಿಗೆ ತೆರೆದುಕೊಂಡ ಕಾರಣದಿಂದ ಈ ಮೂರು ಮುಖ್ಯ ಧರ್ಮಗಳಿಗೆ ಸೇರಿದವರ ಸಾಹಿತ್ಯಾಭಿವ್ಯಕ್ತಿ ಸಾಧ್ಯವಾಗಿರಬಹುದು. ಅದು ಸಹಜ. ಆದರೆ ಸಂಶೋಧಕರು ತಮ್ಮದಲ್ಲದ ಸಾಮಾಜಿಕ ವಲಯಕ್ಕೆ ಪ್ರವೇಶ ಮಾಡಿದ ಉದಾಹರಣೆಗಳು ತೀರಾ ಕಡಿಮೆಯಾಗಿದ್ದರ ಹಿಂದಿರುವ ಒತ್ತಾಸೆಗಳೇನು?
ಈಗ ನೋಡಿ; ದಲಿತ ಮತ್ತು ಹಿಂದುಳಿದ ವರ್ಗಗಳ ಕೆಲವರು ವಚನಗಳನ್ನು ಬರೆದಿದ್ದಾರೆ. ಅದೇ ಅವಧಿಯಲ್ಲಿ ಈ ವರ್ಗಗಳವರು ಬೇರೇನೂ ಬರೆಯಲಿಲ್ಲವೆ? ಅವರು ಬೇರೇನೂ ಬರೆಯದ ವಚನಗಳಿಗೆ ಮಾತ್ರ ಸೀಮಿತರಾದರೆಂದು ತೀರ್ಮಾನಿಸುವುದು ಸಾಧುವೆ? ಈ ವರ್ಗಗಳ ‘ಭವಿಗಳು’ ಬರೆದದ್ದು ಲಭ್ಯವಾಗಿಲ್ಲವೆ ಅಥವಾ ಲಭ್ಯವಾದದ್ದು ಮೂಲೆಗುಂಪಾಗಿದೆಯೆ ಅಥವಾ ಈ ದೃಷ್ಟಿಯ ಶೋಧಕ್ಕೆ ಸಂಶೋಧಕರು ಮನಸ್ಸು ಮಾಡಿಲ್ಲವೆ? ಈ ಪ್ರಶ್ನೆಗಳನ್ನು ದಾಸಸಾಹಿತ್ಯದ ಅವಧಿಗೂ ಅನ್ವಯಿಸಬಹುದು. ಸಂಶೋಧನೆಯ ಈ ಮಿತಿಗೂ ಅನುಭವ ಪ್ರಾಮಾಣ್ಯಕ್ಕೂ ಸಂಬಂಧವಿಲ್ಲ. ಅನುಭವ ಪ್ರಾಮಾಣ್ಯದ ಅಂಶ ಅನ್ವಯಿಸುವುದು ಕತೆ, ಕಾವ್ಯದಂತಹ ಸೃಜನಶೀಲ ಪ್ರಕಾರಗಳಿಗೆ, ಅಲ್ಲವೆ ?
ಈ ಪ್ರಶ್ನೆಗಳ ಮೂಲಕ ನಾನು ನಮ್ಮ ಸಂಶೋಧಕರ ಮತ್ತು ಅಧ್ಯಯನಕಾರರ ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಿಲ್ಲ. ನಮ್ಮ ಸಾಮಾಜಿಕ ಚರಿತ್ರೆಯ ವೈರುದ್ಧ್ಯ ಮತ್ತು ವ್ಯಂಗ್ಯದ ಕಡೆಗೆ ಗಮನ ಸೆಳೆಯಬಯಸುತ್ತೇನೆ. ಅಧ್ಯಯನದ ವಿಷಯಗಳ ಆಯ್ಕೆಯಲ್ಲಿ ಕೆಲಸ ಮಾಡಿರಬಹುದಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸೂಕ್ಷ್ಮಗಳನ್ನು ಕುರಿತೇ ಒಂದು ಸಣ್ಣ ಸಂಶೋಧನೆಯ ಅಗತ್ಯವಿದೆಯೆಂದು ಭಾವಿಸುತ್ತೇನೆ.
ಜಾತ್ಯತೀತ ಸಾಮಾಜಿಕ, ರಾಜಕೀಯ ವ್ಯವಸ್ಥೆಯಂತೆಯೇ ಜಾತ್ಯತೀತ ಅಧ್ಯಯನ ವ್ಯವಸ್ಥೆಯ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ನೆಲೆಗಳ ಮೂಲಕ ಅಜ್ಞಾತ ವಲಯಗಳ ಅನಾವರಣಕ್ಕೆ ಲಿಖಿತ-ಅಲಿಖಿತ ಕ್ಷೇತ್ರಗಳನ್ನು ಆಯ್ಕೆ ಮಾಡಿ ಕೊಳ್ಳಬೇಕಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಲಿಖಿತ ಕನ್ನಡ ಸಾಹಿತ್ಯದಲ್ಲಿ ಬೆಳಕಿಗೆ ಬಾರದ ಎಷ್ಟೋ ಕೃತಿಗಳು ಇರಬಹುದೆ ಎಂಬ ಬಗ್ಗೆ ಸಂಶೋಧಿಸುವುದು, ಪ್ರಧಾನ ಸಾಂಸ್ಥಿಕ ಧರ್ಮಗಳಿಗೆ ಪಥ್ಯವಾಗದ ವಸ್ತುವುಳ್ಳ ಕೃತಿಗಳು ಹೊರಬರದೆ ಹೋಗಿರಬಹುದೆ ಎಂದು ನೋಡುವುದು – ಸಂಶೋಧನೆಯ ಹೊಸ ಸವಾಲಾಗಬೇಕಾಗಿದೆ. ಈ ಮೂಲಕ ಅಕ್ಷರಸ್ಥ ಮತ್ತು ಅನಕ್ಷರಸ್ಥ ಅಜ್ಞಾತ ವಲಯಗಳ ಅಧ್ಯಯನಕ್ಕೆ ಮತ್ತಷ್ಟು ಆದ್ಯತೆ ನೀಡಬೇಕಾಗಿದೆ. ಒಂದು ಅಂಶವನ್ನಿಲ್ಲಿ ಸ್ಪಷ್ಟಪಡಿಸಬೇಕು : ಸಂಶೋಧನೆಯ ಆಯ್ಕೆಯಲ್ಲಿ ಜಾತಿ ಮತ ಧರ್ಮಗಳ ಪಾತ್ರವಿರಬಹುದಾದರೂ ಈಗ ಲಭ್ಯವಿರುವ ಅಥವಾ ಲಭ್ಯವಾಗುವಂತೆ ಮಾಡಿರುವ ಲಿಖಿತ ಕನ್ನಡ ಸಾಹಿತ್ಯವು ಇಂದಿಗೂ ಪ್ರಸ್ತುತವಾದ ಕೆಲವು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವುದು ಅತ್ಯಂತ ಮಹತ್ವದ ಅಂಶವಾಗಿದೆ. ಪಂಪ ಮಹಾಕವಿಯ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮನದಾಳದ ಮಾತು ನಮ್ಮ ಅಧ್ಯಯನ ಮತ್ತು ಅಭಿವೃದ್ಧಿ- ಎರಡಕ್ಕೂ ಮೂಲ ಸಂವೇದನೆಯಾಗಬೇಕಾಗಿದೆ. ಆಗ ಹಸಿವಿನ ಕರ್ನಾಟಕಕ್ಕೆ ಸ್ಪಂದಿಸಲು ಸಾಧ್ಯವಾಗುತ್ತದೆ.
*****