ಕನ್ನಡದ ಬಾನಿನಲಿ ಮೂಡಿತದೊ ಬೆಳಕು,
ಪುಣ್ಯ ಕಣ್ದೆರೆದಂತೆ ಬೆಳಕು!
ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು,
ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು,
ಮುನ್ನರಿಯದಚ್ಚರಿಯ ಮೆಚ್ಚು ಬೆಳಕು.
ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು,
ಒಳ್ಳಿತೊಸರುವ ಹೆಸರ ದೊಡ್ಡ ಬೆಳಕು.
ಸೂರ್‍ಯ ಚಂದ್ರರು ಮುಳುಗಿ, ಸುತ್ತೆತ ಕಗ್ಗತ್ತಲೆಯ ಮೋಡ ಹೇರಿ.
ತೆರೆ ನರಳ್ವ ನಡುಗಡಲ ಹಡಗಿನೆಡೆ, ಮೂಡಗೆಂಪೇರಿ,
ಮತ್ತೊಮ್ಮೆ ಮೇಲ್ ನೆಗೆವ ದೇವರುರಿಗಣ್ಣಂತೆ ತೋರಿ,
ನೆಗೆಯುತ್ತಿದೆ ಮತ್ತೊಮ್ಮೆ ನಮಗದೋ ತುಂಬು ಬಾಳ್ ಬೀರಿ
ಹಿರಿಯ ಬೆಳಕೊಂದು ಸಿರಿ ಸಾರಿ.
ಆಡಿ, ಕುಣಿದಾಡಿ, ಜಲವೆಲ್ಲಾ!
ಪಾಡಿ, ಓ ಪಾಡಿ, ನೆಲವೆಲ್ಲಾ!
ಕೂಗಿ, ನಾಡೆಲ್ಲಾ, ಬೀಗಿ, ಬೀಡೆಲ್ಲಾ,
ಓಲಾಡಿ, ಊರೆಲ್ಲ, ಮೇಲಾಡಿ ಹಳ್ಳಿಗಾಡೆಲ್ಲಾ,
ಸೋಲು ನಮಗಿನ್ನಿಲ್ಲ, ಗೆಲವೆ ಇನ್ನೆಲ್ಲಾ!
ಭಯ ಚೆದರೆ, ಚಿಮ್ಮುತಿದೆ ಕಳಕಳಿಯ ಬೆಳಕು,
ದಯದ ತಣ್ಬೆಳಕು,
ಜಯದ ಕಣ್ಬೆಳಕು,
ನಯದ ನುಣ್ಬೆಳಕು!
ಬೆರಗೆನಿಸಿ, ಮುದ್ದೆನಿಸಿ, ಗೆಲುವೆನಿಸಿ, ಚೆಲುವೆನಿಸಿ,
ಅರಿವಾಗಿ, ಅರುಳಾಗಿ, ಅರಸಿಯ ತಿರುಳಾಗಿ,
ಬೆಳ್ಗೊಡೆಯ ನೆರಳಾಗಿ, ಭಕ್ತಿಯರಳಾಗಿ,
ತಂದೆ ತಾಯ್ಗೆಂದಿಲ್ಲದೊಲವ ಮಣಿಸಿ,
ಹಿರಿತಂದೆಗರಸಾಳ್ಕೆ ನೆಚ್ಚ ತಣಿಸಿ,
ತಂಗಿಯರ ಮೆರಸಿ ಕುಣಿಸಿ,
ಯದುಕುಲದ ಕಲ್ಪವೃಕ್ಷದ ಫಲದ ಸೊದೆಯೆನಿಸಿ ಮನೆಮನೆಯನುಣಿಸಿ,
ತುಂಬುತಿದೆ, ನೆರೆಯುತಿದೆ, ನೋಡಿ, ಆ ಬೆಳಕು !
ಆಳ ಬಾಳಲ್ಲಾ?
ನೋವು ನಲಿವಲ್ಲಾ ?
ಪಾವು ಚಂದ್ರಂಗಿಲ್ಲ ? ಕೋಳು ಸೂರ್‍ಯಂಗಿಲ್ಲ ?
ದೇವರ್ಗಮೆಡರುತೊಡರಿಲ್ಲಾ ?
ತಂದೆಯಿರ್‍ವರ ಸೆಳೆದು ತಂದನೇ ಅಳಲ ವಿಧಿ !
ನೊಂದನೇ ನಮ್ಮ ನಿಧಿ !
ನೊಂದು, ನೋವನು ನುಂಗಿ, ಮುಂಬರಿಯುತಿದೆ, ಅಚ್ಚ ಬೆಳಕು!
ಕೆಚ್ಚೆದೆಯ ಬೆಳಕು!
ಕಣ್ಣೀರ ತೊಡೆದು, ಮಿಡಿದು,
ತಣ್ಣನೆಯ ಹರಕೆಗಳ ಹೊನ್ನ ಮುಡಿ ಮುಡಿದು,
ತನ್ನ ಹೊಣೆಗಳ ಹೊರೆಗೆ ನಾಡವರ ನೆರವ ಕುರಿತಾಳ್ವ ನುಡಿ ನುಡಿದು,
ನಾಡವರ ಬಾಳಾದ ಬಾಳ ಬೆಳಕು,
ನರಸಿಂಹ ಕೃಷ್ಣರಿರ್‍ವರು ಕೂಡಿ ನೆರೆದರೆನೆ ತೇಜಸ್ವಿಯಾಗಿ,
ಎಳೆಯ ಹೆರೆಯೊಳೆ ತೊಳಗಿ ತುಂಬು ಹೆರೆಯಾಗಿ,
ಸಿರಿಯೊಡೆಯ ಜಯಚಾಮರಾಜೇಂದ್ರನೆಂಬೊಂದು ದಿವ್ಯಮಣಿ ಬೆಳಕು,
ಮೂಡಿ, ಕಳೆಗೂಡಿ,
ಕನ್ನಡದ ಚೆಲುವಿಗದೊ ಬೆಳಗುತಿದೆ, ನೋಡಿ,
ದೈವ ಕೃಪೆ ಕೂಡಿ,
ಬೆಳಗುತಿದೆ ನಮಗಾಗಿ ಆ ದೊಡ್ಡ ಬೆಳಕು,
ಶ್ರೀ ಜಯನ ಬೆಳಕು.
*****
೧೯೪೦