ನಾನೊಬ್ಬ ಸಾಹಿತಿಯಾಗಬೇಕು ಎಂಬ ಆಕಾಂಕ್ಷೆಯನ್ನು ಹುಟ್ಟಿಸಿದ್ದು ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಎಂಬ ಪುಟ್ಟ ಪುಸ್ತಕ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ‘ನನ್ನ ಬಾಲ್ಯ’ ಉಪಪಠ್ಯವಾಗಿತ್ತು. ಪ್ರಧಾನ ಪಠ್ಯ – ಎ.ಆರ್. ಕೃಷ್ಣಶಾಸ್ತ್ರಿಯವರ ‘ವಚನ ಭಾರತ’. ಈ ಎರಡೂ ಕೃತಿಗಳ ಪ್ರಭಾವ ವಿಭಿನ್ನ ಆಯಾಮಗಳಲ್ಲಿ ನನ್ನ ಮೇಲೆ ಆಗಿದೆ. ಆದರೆ ‘ನನ್ನ ಬಾಲ್ಯ’ ಕೃತಿಯ ವ್ಯಾಸಂಗದಿಂದಲೇ ನಾನು ಸಾಹಿತಿಯಾಗಬೇಕೆಂಬ ಹಂಬಲಕ್ಕೆ ಬಿದ್ದೆ. ಆ ಕೃತಿಯಲ್ಲಿರುವ ಕೆಲವು ವಿವರಗಳೊಂದಿಗೆ ಹೋಲಿಸಿಕೊಳ್ಳುತ್ತಾ ಎದುರು ಬದರಾಗುತ್ತ ನಾನೇಕೆ ಅವರಂತೆ ಆಗಬಾರದು ಎಂಬ ಪ್ರಶ್ನೆ ಹಾಕಿಕೊಳ್ಳುತ್ತ, ಪ್ರಶ್ನೆಯನ್ನೇ ಸವಾಲಾಗಿಸಿಕೊಳ್ಳುತ್ತ ಪೆನ್ನು ಕೈಗೆತ್ತಿಕೊಂಡೆ.
ನಾನು ಪೆನ್ನನ್ನು ಕೈಗೆತ್ತಿಕೊಂಡದ್ದು ಎರಡು ಬಗೆಯಲ್ಲಿ, ಒಂದು – ಪೆನ್ಸಿಲ್‌ನಿಂದ ಬಡ್ತಿ ಪಡೆದು ಪೆನ್ನಿನಲ್ಲಿ ಬರೆಯತೊಡಗಿದ ಸಹಜ ಸ್ಥಿತ್ಯಂತರ. ಇದೊಂದು ಸಂಭ್ರಮದ ಸ್ಥಿತ್ಯಂತರ. ಯಾಕೆಂದರೆ ‘ಪೆನ್ನು’ ಅನ್ನುವುದು ನನಗೆ – ನನ್ನಂಥವರಿಗೆ – ಬರವಣಿಗೆಯ ಮತ್ತೊಂದು ಸಾಧನ ಮಾತ್ರವಲ್ಲ. ಪ್ರಾಥಮಿಕ ಶಾಲೆಯಲ್ಲಿ ಸ್ಲೇಟಿನ ಮೇಲೆ ಬಳಪದಿಂದ ಬರೆಯತೊಡಗಿದ್ದೂ ನಮಗೆ ಒಂದು ಸಂಭ್ರಮವೇ. ನನ್ನ ವಾರಿಗೆಯ ಎಷ್ಟೋ ಹುಡುಗರು ನನ್ನಂತೆಯೇ ದನ ಕಾಯಲು ಹೋಗುತ್ತಿದ್ದು ಅವರು ಅಲ್ಲೇ ಉಳಿದರು. ನಾನು ಶಾಲೆಗೆ ಬಂದವನು ಬಳಪ ಹಿಡಿದಿದ್ದೇನೆಂಬ ಸಂತೋಷ. ಎರಡು ವರ್ಷದ ನಂತರ ಬಳಪದ ಜಾಗಕ್ಕೆ ‘ಸೀಸದ ಕಡ್ಡಿ’ (ಪೆನ್ಸಿಲ್) ಬಂದಾಗ ಅದೆಂಥ ಆನಂದ ಗೊತ್ತ? ಉದ್ಯೋಗಿಯೊಬ್ಬನಿಗೆ ಬಡ್ತಿ ಸಿಕ್ಕಿದ ಅನುಭವ! ಪೆನ್ಸಿಲ್‌ನಿಂದ ಪೆನ್ನಿಗೆ ಬಡ್ತಿ ಸಿಗಬೇಕಾದರೆ ಮಾಧ್ಯಮಿಕ ಶಾಲೆಗೆ ಸೇರಬೇಕು – ಅಂದರೆ – ಐದನೇ ತರಗತಿಗೆ ಸೇರಬೇಕು. ಆಗ ಪೆನ್ಸಿಲ್ ಜಾಗಕ್ಕೆ ಪೆನ್ನು ಬರುತ್ತೆ. ಕನ್ನಡ ಪಠ್ಯಗಳ ಜೊತೆಗೆ ಎ, ಬಿ, ಸಿ, ಡಿ ಆಂಗ್ಲ ಅಕ್ಷರಗಳ ಕಲಿಕೆ ಶುರುವಾಗುತ್ತೆ. ನಿಜ ಹೇಳಬೇಕೆಂದರೆ ಈ ಎರಡೂ ಅಂಶಗಳ ಅನುಭವಕ್ಕಾಗಿ ನಾನು ಕಾದದ್ದುಂಟು. ಕನ್ನಡವನ್ನು ಚೆನ್ನಾಗಿ ಕಲಿತು ಪ್ರಾಥಮಿಕ ಶಾಲೆಯಲ್ಲಿ ಪ್ರಥಮದರ್ಜೆ ಪಡೆಯುತ್ತಿದ್ದ ನಾನು ಇಂಗ್ಲಿಷನ್ನೂ ಹಾಗೆಯೇ ಕಲಿಯಬಲ್ಲೆ ಎಂದು ತೋರಿಸಿಕೊಳ್ಳುವ ಆಸೆ; ಹೌದು ‘ತೋರಿಸಿಕೊಳ್ಳುವ’ ಆಸೆ. ಹೀಗೆ ತೋರಿಸಿಕೊಳ್ಳುವ ಮೂಲಕ ಊರಲ್ಲಿ ಬೀಗುವ ಆಸೆ; ‘ನಮ್ಮ ಚಂದ್ರಣ್ಣ ಏನೇ ಕೊಟ್ರು ಚಂದಾಗ್ ಕಲೀತಾನೆ’ ಅಂತ ಊರವರು ಮಾತಾಡಬೇಕು, ನಾನು ಕೇಳಿಸಿಕೊಂಡು ಉಬ್ಬಿಹೋಗಬೇಕು ಅನ್ನೊ ಹಂಬಲ. ಈಗ ಅನ್ನಿಸುತ್ತೆ ಇದು ವೈಯಕ್ತಿಕ ನೆಲೆಯ ಹಂಬಲವಲ್ಲ ಅಂತ. ಯಾಕೆಂದರೆ ನನ್ನನ್ನು ಊರವರು ಗುರುತಿಸಿ ಮತ್ತು ಹೆಸರಿಸಿ ಪ್ರೀತಿ ತೋರಿಸಬೇಕೆಂಬ ಸಾಮಾಜಿಕ ಮನ್ನಣೆಯ ಹಂಬಲ. ಇದು ಕೇವಲ ಇಂಗ್ಲಿಷ್ ಅಕ್ಷರಕಲಿಕೆಗೆ ಸಂಬಂಧಿಸಿದ್ದಲ್ಲ. ಅದಕ್ಕಿಂತ ಮುಖ್ಯವಾಗಿ ಪೆನ್ನುಹಿಡಿದ ಸಂಕೇತಕ್ಕೆ ಸಂಬಂಧಿಸಿದ್ದು. ಪೆನ್ಸಿಲ್‌ನಿಂದ ಪೆನ್ನಿಗೆ ಬಡ್ತಿ ಪಡೆಯೋದು ಸಾಮಾನ್ಯವೆ? ಅದೂ ಕನ್ನಡದೊಂದಿಗೆ ಇಂಗ್ಲಿಷ್ ಅಕ್ಷರ ಕಲಿತು ‘ವಿಜೃಂಭಿಸುವುದು!’ ಈ ಕಾರಣಕ್ಕೆ ನಾನು ಇಂಗ್ಲಿಷ್ ಪರ ಅಂತ ಹೇಳೋವಷ್ಟು ಕನ್ನಡ ಮನಸ್ಸು ಕೆಟ್ಟಿಲ್ಲ ಅಂದುಕೊಳ್ತೀನಿ. ಯಾಕೆಂದರೆ ಇದು ಇಂಗ್ಲಿಷ್ ಪರದ ಪ್ರಶ್ನೆ ಅಲ್ಲವೇ ಅಲ್ಲ. ಆದ್ದರಿಂದ ಈ ವಿಷಯ ಇಲ್ಲಿಗೇ ಬಿಟ್ಟು ಪೆನ್ನಿನ ವಿಷಯಕ್ಕೆ ಬರ್‍ತೇನೆ. ಪೆನ್ನು ನನಗೆ ಎಂಥ ಸಂಭ್ರಮ ತಂದಿತ್ತು ಎಂದು ಮನವರಿಕೆ ಮಾಡಲು ಒಂದು ಪ್ರಸಂಗ ಹೇಳಲೇಬೇಕು.
ನಾನು ಪೆನ್ನಲ್ಲಿ ಬರೆಯೋಕೆ ಶುರುಮಾಡಿದಾಗ ಈಗಿನ ರೀಫಿಲ್‌ಗಳು ಇರಲಿಲ್ಲ. ‘ಮಸಿ ಬುಡ್ಡಿ’ (ಇಂಕಿನ ಬಾಟಲ್) ಖರೀದಿಸಬೇಕಿತ್ತು. ಅದರಿಂದ ಪೆನ್ನಿಗೆ ಇಂಕನ್ನು ಹಾಕಿಕೊಳ್ಳ ಬೇಕಿತ್ತು. ಪೆನ್ನಿನ ‘ಮುಳ್ಳು’ (ತುದಿಯಲ್ಲಿ ಹಾಕುತ್ತಿದ್ದ ಸಾಮಗ್ರಿ ಚೆನ್ನಾಗಿಲ್ಲದಿದ್ದರೆ ಗಾರೆ ನೆಲಕ್ಕೆ ಉಜ್ಜಿ ನುಣುಪು ಮಾಡಿಕೊಳ್ಳಬೇಕಿತ್ತು. ಒಟ್ಟಿನಲ್ಲಿ ಒಂದು ಸಾರಿ ನಮ್ಮ ಮನೆ ಹಜಾರದ ಮೇಲೆ ಕುಳಿತುಕೊಂಡು ಮಸಿಬುಡ್ಡಿಯಿಂದ ಪೆನ್ನಿಗೆ ಇಂಕನ್ನು ಹಾಕತೊಡಗಿದೆ. ಸರಿಯಾಗಿ ಹಾಕಲು ಬಾರದೆ ಇಂಕು ನನ್ನ ಬನೀನಿನ ಮೇಲೆ ಬಿದ್ದುಬಿಟ್ಟಿತು. ಬನೀನು ಬಟ್ಟೆ ಮೇಲೆ ಅಲ್ಲಲ್ಲೇ ಇಂಕಿನ ಅವತಾರ! ಕೊಳಕಾದ ಬನೀನು! ಹಾಗಂತ ನಾನು ಬನೀನನ್ನು ಬಿಚ್ಚಿ ಹಾಕಲಿಲ್ಲ. ಅಪ್ಪ, ಅಮ್ಮ ನೋಡಿದರೆ ಬೈದಾರು ಎಂದು ಭಯಪಡಲಿಲ್ಲ. ಒಂದು ಮಾತು ಇಲ್ಲೇ ಹೇಳಿಬಿಡ್ತನೆ. ಬನೀನೆಂದರೆ ನೆಟ್ ಬನೀನ್ ಅಲ್ಲ. ಮೊಣಕೈವರೆಗಿನ ತೋಳು ಇದ್ದ, ಹೊಲೆಸಿಕೊಂಡ ಅಂಗಿ, ಒಳಗೆ ನೆಟ್ ಬನೀನು ನಮಗೆಲ್ಲಿ ಬಂದೀತು! ಇದ್ದ ಈ ಬನೀನೂ ಈಗ ಇಂಕಿನಿಂದ ಕೊಳೆಯಾಗಿದೆ. ಕೊಳೆಯಾಗಿದ್ದರೇನಂತೆ, ನಾನು ಠಾಕು ಠೀಕಾಗಿ ಅದೇ ಬನೀನಿನಲ್ಲಿ ಊರಿನ ಬೀದಿ ಬೀದಿಯಲ್ಲಿ ಓಡಾಡಿದೆ! ಅಂಗಿ ಮೇಲಿನ ಇಂಕನ್ನು ಗಮನಿಸಿದ ಕೆಲವರು ‘ಇದೇನಪ್ಪ ಮೈಮ್ಯಾಲೆಲ್ಲ ಮಸಿ ಸುರ್‍ಕಂಡಿದ್ದೀಯ?’ ಎಂದು ಕೇಳಿದಾಗ ಈ ಮಾತಿಗಾಗಿಯೇ ಕಾಯುತ್ತಿದ್ದಂತೆ ‘ನಾನು ಪೆನ್‌ನಲ್ಲಿ ಬರೀತೀನಲ್ಲ, ಇಂಕ್ ಹಾಕ್ಕೊಳವಾಗ ಹಿಂಗಾತು. ಅಷ್ಟೆ’ ಎಂದು ವಿವರಿಸಿ ಉಬ್ಬಿನಿಂದ ಇನ್ನೊಂದು ಬೀದಿಗೆ ಹೊರಡುತ್ತಿದ್ದೆ. ಒಟ್ಟಿನಲ್ಲಿ ನಾನೀಗ ಪೆನ್ನಿನಲ್ಲಿ ಬರೀತಿದ್ದೀನಿ ಅಂತ ಊರವರಿಗೆ ಗೊತ್ತಾಗಬೇಕು; ಗೊತ್ತಾಯ್ತು ಅಂತ ನನಗೆ ಗೊತ್ತಾಗಿ ಸಂಭ್ರಮಿಸಬೇಕು – ಇದು ನನ್ನ ಆಸೆ; ಹಂಬಲ! ಬನೀನು ಕೊಳೆಯಾಗಿದೆ ಅಂತ ಒಂದು ಕ್ಷಣ ಮಾತ್ರವೂ ಚಿಂತಿಸದ ಈ ಸಂಭ್ರಮಕ್ಕೆ ಏನನ್ನಬೇಕು! ಅವತ್ತು ಆದದ್ದು ಕೊಳೆಯಲ್ಲ ಕಳೆ! ಚಂದ್ರಕಳೆ!
ಅವತ್ತು ನಾನು ಯಾಕೆ ಹಾಗೆ ವರ್ತಿಸಿದೆ? ಈಗ ಈ ಪ್ರಶ್ನೆ ಹಾಕಿಕೊಂಡಾಗ ನನಗನ್ನಿಸುತ್ತೆ – ಅದು ನನ್ನ ಐಡೆಂಟಿಟಿಯ ಸಮಸ್ಯೆ; ಐಡೆಂಟಿಟಿ ಅನ್ನೋದು ನನ್ನೊಳಗೆ ಬುಸ್ಸೆಂದು ಹೆಡೆ ಎತ್ತಿದಾಗ ಅದನ್ನು ಸಮಾಧಾನಿಸಲು ಸಹಜವಾಗಿಯೇ ಮೂಡಿದ ಸಾಮಾಜಿಕ ದಾರಿಯೇ ನನ್ನ ಬೀದಿಬೀದಿಯ ಪಯಣ!
ಹೌದು; ಈ ಐಡೆಂಟಿಟಿ ಅನ್ನೋದು ಬುಸ್ಸೆನ್ನುವ ಹೆಡೆ ಇದ್ದಂತೆ. ಅನ್ಯರ ಎದುರು ಹೆಡೆ ಎತ್ತಿ ಸದೆಬಡಿಯುವ ಐಡೆಂಟಿಟಿಗಳೇ ಇದ್ದಾಗ, ನಾವೂ ಬುಸ್ಸೆನ್ನುವಷ್ಟಾದರೂ ಶಕ್ತಿ ಪಡೆಯಲು ಏನಾದರೂ ಬೇಕಲ್ಲ? ಎದುರು ಇರೋರನ್ನ ಕಟ್ಟೋದು ಬೇಡ; ವಿಷ ಉಣಿಸೋದಂತೂ ಬೇಡವೇ ಬೇಡ. ಆದರೆ ಎದುರಿಗೆ ಬುಸ್ಸೆನ್ನುವ ಹೆಡೆಗಳೇ ಇದ್ದಾಗ ನನ್ನೊಳಗೂ ಏನೋ ಇದೆ ಎಂದು ತೋರಿಸಲು ಹೆಡೆಯೊಂದು ಹುಟ್ಟತೊಡಗುತ್ತೆ. ಆದರೆ ಅದು ಹೊರಬರದೆ ಒಳಗೇ ಉಳಿಯುವಂತೆ ಒತ್ತಿಹಿಡಿದು ಸಮಾಧಾನಿಸಿ ಬೇರೊಂದು ರೂಪದ ‘ಐಡೆಂಟಿಟಿ’ಗೆ ನನ್ನಂಥವರು ಹಂಬಲಿಸಿದಾಗ ಹೆಡೆಯನ್ನು ಅದುಮಿಟ್ಟು ಹೊರಬಂದ ಅಕ್ಷರವೇ ಐಡೆಂಟಿಟಿಯಾಗುತ್ತದೆ; ಬಳಪದಿಂದ ಪೆನ್ಸಿಲ್ಲಿಗೆ, ಪೆನ್ಸಿಲ್ಲಿನಿಂದ ಪೆನ್ನಿಗೆ ಪಡೆದ ‘ಬಡ್ತಿ’ ಬಡ ಹುಡುಗನ ಐಡೆಂಟಿಟಿಯ ಸಂಕೇತವಾಗುತ್ತದೆ. ಹೆಡೆಗಳ ಎದುರು ಹೆಡೆಯಾಗದೆ ಗಳಿಸಬೇಕಾದ ಐಡೆಂಟಿಟಿಯ ಸಮಸ್ಯೆ; ಎಂಥ ಸಾಮಾಜಿಕ ವಿಸ್ಮಯ!
ಇಷ್ಟೆಲ್ಲ ಯಾಕೆ ಹೇಳಿದೆ, ಗೊತ್ತಾ? ನಾನು ಸಾಮಾಜಿಕವಾಗಿ ಬಲಾಢ್ಯ ವಲಯದವನಲ್ಲ: ಆರ್ಥಿಕವಾಗಿ ಶ್ರೀಮಂತ ಮನೆತನದವನಲ್ಲ: ಹಾಗಾದರೆ ಹುಟ್ಟಿದ ಊರಲ್ಲಿ ನಾನು ಗಮನಾರ್ಹನಾಗುವುದು ಹೇಗೆ? ನನಗೊಂದು ಐಡೆಂಟಿಟಿ ಬರೋದು ಹೇಗೆ? ಮಾಧ್ಯಮಿಕ ಶಾಲೆಗೆ (ಈಗಿನ ಹಿರಿಯ ಪ್ರಾಥಮಿಕ ಶಾಲೆಗೆ) ಬಂದು ಪ್ಯಾಂಟು ಹಾಕಿಕೊಂಡೆ. ಅದೂ ಅಪರೂಪಕ್ಕೆ ಅಪ್ಪ ಹೊಲೆಸಿಕೊಟ್ಟ ಒಂದೇ ಒಂದು ಪ್ಯಾಂಟು – ನಾಲ್ಕು ವರ್ಷಗಳ ನನ್ನ ವಸ್ತ್ರಸಂಗಾತಿ! ಅದು ಕೊಳೆಯಾದಾಗ ಪಟಾಪಟ್ಟಿ ನಿಕ್ಕರು – ಇದೇ ಶಾಶ್ವತ ಸಂಗಾತಿ! ಸದಾ ಬನೀನಿನ ಜೇಬಿನಲ್ಲಿ ಎದ್ದುಕಾಣುವ ಪೆನ್ನು – ನನ್ನ ನಿಜವಾದ ಆತ್ಮಸಂಗಾತಿ!
ಮೊದಲನೇ ಹಂತದಲ್ಲಿ ಐಡೆಂಟಿಟಿಯ ಹೆಮ್ಮೆಯ ಸಂಕೇತವಾಗಿದ್ದ ಪೆನ್ನು ಎರಡನೇ ಹಂತದಲ್ಲಿ ‘ಆತ್ಮಸಂಗಾತಿ’ಯಾದದ್ದು ಮತ್ತೊಂದು ಮುದನೀಡುವ ಮಜಲು. ಇದು ಸಾಧ್ಯವಾದದ್ದು ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಪುಸ್ತಕದಿಂದ. ಇದು ಕತೆಯ ಪುಸ್ತಕವಲ್ಲ: ಆತ್ಮಕತೆಯ ಒಂದು ಭಾಗ. ಕತೆಯಾಗಿದ್ದರೆ ಸುಲಭವಾಗಿ ನೆನಪಿಡಬಹುದು ಎಂಬ ಮನಸ್ಥಿತಿ ಎಲ್ಲಾ ಸಹಪಾಠಿಗಳದು. ‘ನನ್ನ ಬಾಲ್ಯ’ ಓದಲು ಕಷ್ಟ; ಅರಗಿಸಿಕೊಳ್ಳಲು ಕಷ್ಟ; ಪರೀಕ್ಷೆಯಲ್ಲಿ ಉತ್ತರ ಬರೆಯಲು ಕಷ್ಟ – ಇದು ಎಲ್ಲರ ಪಡಿಪಾಟಲು. ಕಷ್ಟ ಎನ್ನುವುದೇ ಇಷ್ಟ ಯಾಕಾಗಬಾರದು – ಎಂದು ನಾನು ಹರಸಾಹಸಪಟ್ಟು ಈ ಪುಸ್ತಕದ ಅಂಶಗಳನ್ನು ಅರಗಿಸಿಕೊಳ್ಳತೊಡಗಿದೆ; ಪ್ರಥಮ ಪರೀಕ್ಷೆಯಲ್ಲಿ ಎಲ್ಲರೂ ಅರೆಬರೆ ಉತ್ತರ ಬರೆದು ‘ದಡ್ಡರು’ ಎನ್ನಿಸಿಕೊಂಡಾಗ ನಾನೊಬ್ಬ ಮಾತ್ರ ಹೆಚ್ಚು ‘ಮಾರ್ಕ್ಸ್’ ಗಳಿಸಿ ಸೈ ಎನ್ನಿಸಿಕೊಂಡೆ. (ಹೆಚ್ಚು ಮಾರ್ಕ್ಸ್ ಗಳಿಸಿ ಆಗಲೇ ‘ಮಾರ್ಕ್ಸ್‌ವಾದಿ’ಯಾಗುವ ಸೂಚನೆ ಕೊಟ್ಟಿದ್ದೆ?) ಊರಲ್ಲಿ ಇದೇ ಸುದ್ದಿ. ನಾನೊಬ್ಬನೇ ‘ನನ್ನ ಬಾಲ್ಯ’ ಉಪಪಠ್ಯಕ್ಕೆ ಸರಿಯಾಗಿ ಉತ್ತರ ಬರೆದಿರೋದು! ಶಾಲೆಯಲ್ಲಿ ಬಿಡಿ; ಮೇಷ್ಟ್ರುಗಳ ಶಭಾಷ್‌ಗಿರಿ! ಅದರಲ್ಲೂ ಅಂದು ನನ್ನಲ್ಲಿ ಏನೋ ಒಳಶಕ್ತಿಯಿದೆ ಎಂದು ಗುರುತಿಸಿ ಬೆನ್ನು ತಟ್ಟಿದ ಗುರುಗಳಾದ ಟಿ.ವೈ. ನಾಗಭೂಷಣ ರಾವ್ ಅವರ ಪ್ರೋತ್ಸಾಹ ಅವಿಸ್ಮರಣೀಯ. ಈ ಕಡೆ ಶಾಲೇಲೂ ಹೆಸರು; ಊರಿನ ಹಿರಿಯರ ನಡುವೆಯೂ ಹೆಸರು. ಕೆಲವರು ಶ್ರೀಮಂತರು ಭೂಮಾಲೀಕರು – ‘ಇಂಥ ಪಠ್ಯ ಯಾಕಪ್ಪ ಇಡ್ತಾರೆ, ನಮ್ ಹುಡುಗರ ತಲೆ ತಿನ್ನೋಕೆ’ ಎಂದು ಗೊಣಗಿದ್ದೂ ಉಂಟು. ಆಗ ನನಗೆಷ್ಟು ಸಂತೋಷ ಗೊತ್ತಾ? ಅಂತೂ ಇಲ್ಲಾದ್ರೂ ಸೋತರಲ್ಲ! ಸೋತು ಸುಣ್ಣ ಆಗಿ ಗೊಣುಗ್ತಾನೇ ಇರಲಿ ಎಂದುಕೊಂಡರೆ ಅದೆಲ್ಲ ಅವರಿಗೆ ನಿಜವಾದ ಸೋಲಲ್ಲ! ಎಂಥ ವಿಚಿತ್ರ! ಎದುರಿಗೆ ಹೆಡೆ ಆಡ್ತಾನೇ ಇರುತ್ತೆ! ಹೆಡೆಯೊಳಗಿಂದ ಹೊರಗೆ ಸುಳಿದ ನಾಲಗೆ ವಿಧಿ ಇಲ್ಲದೆ ಹೊಗಳಿ, ಅವಮಾನದಿಂದ ಸರಕ್ಕಂತ ಒಳಗೆ ಹೋಗುತ್ತೆ.
ಆಮೇಲೆ ನನಗೆ ಅನ್ನಿಸಿತು – ನನಗೆ ಒಂದು ಹಂತದ ಮೆಚ್ಚುಗೆ ತಂದುಕೊಟ್ಟ ‘ನನ್ನ ಬಾಲ್ಯ’ ಪುಸ್ತಕಾನ ಇನ್ನೂ ಚೆನ್ನಾಗಿ ಅರ್ಥಮಾಡಿಕೊಬೇಕು, ಅದಕ್ಕಾಗಿ ಅದನ್ನ ಅರೆದುಕುಡೀ ಬೇಕು – ಅಂತ. ಹೀಗಾಗಿ ಮತ್ತೆ ಮತ್ತೆ ಓದಿದೆ. ಅಂತಿಮ ಪರೀಕ್ಷೆಗೆ ಉತ್ತರ ಬರೆಯೋವೇಳೆಗೆ ‘ನನ್ನ ಬಾಲ್ಯ’ ಪುಸ್ತಕ, ನನಗೆ ಪಠ್ಯವಷ್ಟೇ ಆಗಿರಲಿಲ್ಲ. ಎದುರಿಗೆ ನಿಂತ ಸವಾಲೂ ಆಗಿತ್ತು. ನೀನೂ ಹೀಗಾಗಬಲ್ಲೆಯಾ ಅಂತ ಕೇಳ್ತಾ ಇತ್ತು. ನಾನು ಹಾಗೆ ಆಗೋಕೆ ಸಾಧ್ಯವೆ? ಟಾಗೋರರ ಬಾಲ್ಯ ಮತ್ತು ನನ್ನ ಬಾಲ್ಯ ಹೇಗೆ ಒಂದೇ ಆದೀತು? ಪುಸ್ತಕದ ಹೆಸರು ‘ನನ್ನ ಬಾಲ್ಯ’. ನನ್ನ ಪಾಲಿಗೆ ‘ಅವರ ಬಾಲ್ಯ’. ನಾನು ಅವರಂತೆ ಬದುಕುತ್ತಿಲ್ಲ. ಅವರ ಆಗರ್ಭ ಶ್ರೀಮಂತಿಕೆ ನಮಗಲ್ಲ; ಹಳ್ಳಿಗಾಡಿನ ಮಧ್ಯಮ ದರ್ಜೆಯ ಬಡಕುಟುಂಬ ನಮ್ಮದು. ಅವರಿಗೆ ಕೈಗೊಬ್ಬ ಕಾಲಿಗೊಬ್ಬ ಆಳು; ನಮಗೆ ನಾವು ಆಳಾಗದಿದ್ದರೆ ಸಾಕು; ಅದಕ್ಕಿಂತ ಹೆಚ್ಚಾಗಿ ಹಾಳಾಗದಿದ್ದರೆ ಸಾಕು. ಇದು ನನ್ನ ಅಪ್ಪ ಅಮ್ಮನ ಬಯಕೆ. ತಮ್ಮ ಮಕ್ಕಳು ಹಾಳಾಗಬಾರದು ಅನ್ನೋ ಅವರ ಆಸೆಯ ಜೊತೆಗೆ ಯಾರಿಂದಲೂ ಆಳಿಸಿಕೊಳ್ಳಬಾರದು ಎಂಬ ಹಟ ಅವತ್ತೇ ನನಗೆ ಹುಟ್ಟಿತ್ತು. ಬಹುಶಃ ಅದರಿಂದಲೇ ಟಾಗೋರರ ಬಾಲ್ಯಕ್ಕೆ ನಾನು ಎದುರಾದೆ. ಹಾಗಾದರೆ ಇಡೀ ಟಾಗೋರರಿಗೆ ಎದುರಾದೆನೆ? ಇಲ್ಲ; ಟಾಗೋರರ ಬಹಿರಂಗಾಡಂಬರಕ್ಕೆ ಎದುರಾದೆ; ಅಂತರಂಗಕ್ಕೆ ಹತ್ತಿರವಾದೆ. ಬೆಳೆಯುತ್ತ ಹೋದಂತೆ ಟಾಗೋರರೂ ಹಾಗೇ ಆದರು ಎಂದು ಭಾವಿಸುತ್ತೇನೆ. ಬಹಿರಂಗದ ‘ಭೋಗ’ ಬೆಲೆ ಕಳೆದುಕೊಳ್ಳುತ್ತಾ ಹೋದಂತೆ ಅಂತರಂಗದ ಅಭಿವ್ಯಕ್ತಿ ಶಕ್ತಿ ಬೆಳೆಯುತ್ತದೆ. ಇದೆಲ್ಲ ಆಗ ನನಗೆ ಗೊತ್ತಿರಲಿಲ್ಲ. ಓದೋದು, ಬರೆಯೋದು, ಶ್ರೀಮಂತರ ಸೊತ್ತೇನು ಅಲ್ಲವಲ್ಲ ಅಂತ ಅವರ ಬಾಲ್ಯಕ್ಕೆ ಎದುರು ನಿಂತು ಪ್ರಶ್ನಿಸಿಕೊಂಡೆ. ಸಮೀಪ-ದೂರ ಎರಡನ್ನೂ ಕಂಡುಕೊಂಡೆ.
ನೋಡಿ; ಟಾಗೋರರ ‘ನನ್ನ ಬಾಲ್ಯ’ ಪುಸ್ತಕದಲ್ಲಿ ಕೆಲವು ಪ್ರಸಂಗಗಳು ಬರುತ್ತವೆ. ವಿಶೇಷವಾಗಿ ಅಬ್ದುಲ್ಲಾ ಕತೆ ಹೇಳುವ ಪ್ರಸಂಗ, ಟಾಗೋರರಿಗೆ ಅದರಲ್ಲಿ ಇದ್ದ ಆಸಕ್ತಿ. ನನಗೂ ನನ್ನ ಅಮ್ಮ ಮತ್ತು ಅಕ್ಕಂದಿರು ರಾತ್ರಿ ಹೊತ್ತು ಕತೆ ಹೇಳ್ತಾ ಇದ್ದರು. ಅದು ನಿಜಕ್ಕೂ ಎಂದೂ ಮಾಸದ ಅನುಭವ. ಆದರೆ ಟಾಗೋರರಿಗೆ ಅಬ್ದುಲ್ಲ ಕತೆ ಹೇಳ್ತಾ ಇದ್ದದ್ದನ್ನು ಓದಿದಾಗ ನನಗೆ ನಮ್ಮೂರ ಹಯತ್ ಸಾಬರ ಮಗ ನವಾಬ್‌ಸಾಬ್ ಕತೆ ಹೇಳುತ್ತಿದ್ದುದು ನೆನಪಲ್ಲಿ ಉಳಿಯತೊಡಗಿತು. ಅಲ್ಲಿ ಅಬ್ದುಲ್ಲ ಹೇಳಿದ ಕತೆಗಳೇ ಬೇರೆ. ನಮ್ಮ ನವಾಬ್‌ಸಾಬ್ ಹೇಳಿದ ಕತೆಗಳೇ ಬೇರೆ. ನವಾಬ್‌ಸಾಬ್ ಅಪ್ಪ ಹಯಾತ್ ಸಾಬರು ಟೈಲರಿಂಗ್ ಕೆಲಸ ಮಾಡುತ್ತಿದ್ದರು; ಹಿರಿಯರು; ಗಾಂಧೀಜಿ ವಿಚಾರಗಳು, ಆನಂತರ ಸರ್ವೋದಯ ಚಿಂತನೆಗಳಿಂದ ಪ್ರಭಾವಿತರು. ನನ್ನ ಹಿರಿಯಣ್ಣನ ಮೇಲೆ ಪ್ರಭಾವ ಬೀರಿದವರು. ಅವರು ಓದಿದ್ದು ಎಂಟನೇ ತರಗತಿವರೆಗೆ ಅಂತ ಹೇಳ್ತಾ ಇದ್ದರು. ಅವರು ಊರಿನ ವಿದ್ಯಾವಂತರ ಜೊತೆಗೆ ನಡುಸ್ತಾ ಇದ್ದ ಗುಂಪು ಚರ್ಚೆಗಳನ್ನು ನಾನು ಕುತೂಹಲದಿಂದ ಕೇಳಿಸಿಕೊಳ್ತಾ ಇದ್ದೆ. ಇವರ ಮಗ ನವಾಬ್ ಸಾಬ್ ನನಗಿಂತ ದೊಡ್ಡವರು; ಹಯಾತ್ ಸಾಬರು ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕಾಗಿ ಚಿತ್ರದುರ್ಗಕ್ಕೆ ಕಳಿಸಿದ್ದರು. ಊರಿಗೆ ಬಂದಾಗ ನನ್ನನ್ನು ನವಾಬ್‌ಸಾಬ್ ಕೆರೆಯಂಗಳಕ್ಕೆ ಕರೆದು ಕೊಂಡು ಹೋಗಿ ದಿನವೂ ಒಂದಲ್ಲ ಒಂದು ಕತೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ತಾವು ನೋಡಿದ ಸಿನಿಮಾ ಕತೆಗಳೇ ಹೆಚ್ಚು. ಅದೂ ತೆಲುಗಿನ ಖ್ಯಾತ ಕಲಾವಿದರಾದ ಎ. ನಾಗೇಶ್ವರ ರಾವ್ ಸಿನಿಮಾ ಕತೆಗಳು, ಆನಂತರದ ದಿನಗಳಲ್ಲಿ ನಮ್ಮ ರಾಜಕುಮಾರ್ ಸಿನಿಮಾ ಕತೆಗಳು. ಹಾಗೆ ನೋಡಿದರೆ ತೆಲುಗು – ಹಿಂದಿ ಸಿನಿಮಾ ಕತೆಗಳೇ ಜಾಸ್ತಿ. ಕತೆಗಳ ವಿಷಯ ಏನೇ ಇರಲಿ, ಕತೆ ಕೇಳೊ ಕಾರಣದಿಂದ ನಾನು ಹತ್ತಿರವಾಗ್ತಾ ಹಯಾತ್ ಸಾಬರ ಆದರ್ಶ, ನವಾಬ್ ಸಾಬರ ಸ್ನೇಹವನ್ನು ಅರಿತುಕೊಳ್ತಾ ಯಾವ ಧರ್ಮದವರಾದ್ರೂ ಒಂದೇ ಅಂದುಕೋ ಬೇಕು, ದ್ವೇಷ ಇರಬಾರದು ಅನ್ನೋದನ್ನ ಕಲಿತೆ. ಟಾಗೋರರ ಅಬ್ದುಲ್ಲ, ನನ್ನ ನವಾಬ್ ಆಗಿದ್ದರು. ಒಂದು ವಿಶೇಷ ಅಂದರೆ ಇವರು ನನಗೆ ಕತೆ ಹೇಳ್ತಾ ಇದ್ದ ಕೆರೆ ಅಂಗಳದಲ್ಲೇ ಆಗ ಆರ್.ಎಸ್.ಎಸ್.ನವರು ದೊಣ್ಣೆವರೆಸೆ ಕಲಿಸೋಕೆ ಶುರು ಮಾಡಿದ್ದರು. ನವಾಬ್‌ಸಾಬ್ ಅವರನ್ನು ಒಮ್ಮೆ ಹೀಯಾಳಿಸಿದರು. ನನಗೆ ‘ಅವ್ನ್ ಜೊತೆ ಸೇರಬೇಡ’ ಎಂದು ತಾಕೀತು ಮಾಡಿದರು. ಆದರೆ ನವಾಬ್ ಸಾಬರ ಆತ್ಮೀಯತೆ ನನಗೆ ಮುಖ್ಯ ಆಯ್ತು. ತಾಕೀತಿನ ಜಾಗದಲ್ಲಿ ಸ್ನೇಹ ಗೆದ್ದಿತ್ತು. ದೊಣ್ಣೆವರಸೆಗೆ ಹೋಗ್ತಾ ಇದ್ದ ಸ್ನೇಹಿತರಿಗೆ ಬಿಡಿಸಿ ಹೇಳಿದೆ. ‘ಯಾರೂ ಯಾರನ್ನೂ ದ್ವೇಷಿಸಬಾರದು; ಅನುಮಾನಿಸಬಾರದು’ – ಹೀಗೆಲ್ಲ ಮುಗ್ಧವಾಗಿ ಮನವರಿಕೆ ಮಾಡಿದೆ. ನನಗಾಗ ಆರ್.ಎಸ್.ಎಸ್. ಅಂದ್ರೇನೂ ಅಂತಾನೇ ಗೊತ್ತಿರಲಿಲ್ಲ; ನನಗೆ ಹಯಾತ್ ಸಾಬ್, ನವಾಬ್ ಸಾಬ್‌ರನ್ನು ಅನುಮಾನಿಸಬಾರದು; ಅಷ್ಟೆ. ಅದೇ ತಾನೆ ಶುರುವಾಗಿದ್ದ ದೊಣ್ಣೆವರಸೆ ನಿಂತೇಹೋಯಿತು. ಆನಂತರ ಭಾರತ ಸೇವಾದಳ ಬಂತು. ನಾವು ಬಿಳಿ ಬನೀನು ನೀಲಿ ನಿಕ್ಕರ್ ಹಾಕಿಕೊಂಡು ಸಿದ್ಧರಾದೆವು. ಧರ್ಮಭಕ್ತಿಯೇ ದೇಶಭಕ್ತಿ ಅಲ್ಲ ಅಂತ ಅಂತರಂಗದಲ್ಲೊಂದು ಪಿಸು ಮಾತು ಕೇಳಿಸಿಕೊಂಡೆವು. ಇಷ್ಟೆಲ್ಲ ನಡೆಯುವಾಗ ಟಾಗೋರರ ಅಬ್ದುಲ್ಲಾನ ಜೊತೆ ನಮ್ಮ ನವಾಬ್ ಸಾಬರನ್ನಿಟ್ಟು ನೋಡುತ್ತಿದ್ದ ನಾನು ಭಾವೈಕ್ಯತೆಯ ಉಪದೇಶವಿಲ್ಲದೆಯೇ ಅದರ ಭಾಗವಾಗಲು ಆರಂಭಿಸಿದ್ದೆ.
‘ನನ್ನ ಬಾಲ್ಯ’ದಲ್ಲಿ ಟಾಗೋರರು ರೈತರ ಬಗ್ಗೆ ಆಡಿರುವ ಕಳಕಳಿಯ ಮಾತುಗಳು ನನಗೆ ತುಂಬಾ ಹತ್ತಿರವಾಗಿದ್ದವು. ನಮ್ಮವರ ದೈನಂದಿನ ದಾರುಣತೆಗೆ ಟಾಗೋರರು ಬಾಲ್ಯದಲ್ಲೇ ಮಿಡಿದಿದ್ದರು. ನಾನು ಬಡ ರೈತರೊಳಗೊಬ್ಬನಾಗಿ ಮಿಡಿಯುವುದು ಒಂದು ಅನುಭವವಾಗಿತ್ತು. ಈ ಕಾರಣದಿಂದಲೂ ‘ನನ್ನ ಬಾಲ್ಯ’ ಹತ್ತಿರವಾಗತೊಡಗಿತ್ತು. ಜೊತೆಗೆ ನಾಟಕದವರ ಬಗ್ಗೆ ಈ ಪುಸ್ತಕದಲ್ಲಿ ಪ್ರಸ್ತಾಪವಾದ ವಿಷಯಗಳು ನನಗೂ ಹತ್ತಿರದವಾಗಿದ್ದವು. ನಾಟಕ ಆಡುವವರ ಬಗ್ಗೆ ಅಷ್ಟೇನೂ ಗೌರವವಿಲ್ಲದ ಹಳ್ಳಿಯ ಹಿರಿಯರು ‘ನಾಟಕ ಆಡಾಕೋಗಿ ಕೆಟ್‌ಮೆಟ್ ಇಡೀಬ್ಯಾಡ’ ಎಂದು ಬಯ್ಯುತ್ತಿದ್ದುದೂ ಉಂಟು. ಟಾಗೋರರು ನಾಟಕ ನೋಡಿ ಖುಷಿ ಪಟ್ಟರೆ ನಾನು ಆಡಿಯೇ ಖುಷಿ ಪಡಬೇಕೆಂದು ಸಂಕಲ್ಪಿಸಿದೆ. ಮುಂದೆ ಕೆಲವು ವರ್ಷಗಳ ನಂತರ ನಾನೇ ನಾಟಕಗಳನ್ನು ಬರೆದು, ಆಡಿಸಿ, ನಟಿಸಿದ್ದೂ ಉಂಟು. ಕನ್ನಡ ನಾಟಕ ಕ್ಷೇತ್ರದ ಒಳಿತಿಗಾಗಿ ನಾನು ನಾಟಕ ಬರೆಯೋದನ್ನು ಬಿಟ್ಟದ್ದು ಬೇರೆಯೇ ಮಾತು!
ನಾನು ಮರೆಯಲಾಗದ ಇನ್ನೊಂದು ಘಟನೆ ಪಠ್ಯದ ಓದಿಗೆ ಸಂಬಂಧಪಟ್ಟದ್ದು. ಟಾಗೋರರ ‘ನನ್ನ ಬಾಲ್ಯ’ ಪುಸ್ತಕದಲ್ಲಿ ಅವರು ‘ವಂಗದರ್ಶನ’ವನ್ನು ಗಟ್ಟಿದನಿಯಲ್ಲಿ ಓದುತ್ತಿದ್ದ ಪ್ರಸಂಗವೊಂದಿದೆ. ಗಟ್ಟಿ ಓದನ್ನು ಮನೆಯೊಳಗೆ ಅತ್ತಿಗೆಯಾದಿಯಾಗಿ ಅನೇಕರು ಮೆಚ್ಚಿಕೊಂಡದ್ದನ್ನು ಅವರು ನಮೂದಿಸಿದ್ದಾರೆ. ಈ ಪ್ರಸಂಗದ ಪುಟಗಳಿಂದ ಪ್ರೇರಿತನಾಗಿ ನಾನು ನಮ್ಮ ತರಗತಿಯ ಪ್ರಧಾನ ಪಠ್ಯವಾದ ‘ವಚನ ಭಾರತ’ವನ್ನು ಗಟ್ಟಿಯಾಗಿ ಓದಲು ಶುರುಮಾಡಿದೆ. ಅದು ಹೇಗೆ ಗೊತ್ತೆ? ರಾತ್ರಿ ಹೊತ್ತು ನಮ್ಮ ಮನೆ ಹಜಾರದಲ್ಲಿ ಬುಡ್ಡಿ ದೀಪದ ಬೆಳಕಿನಲ್ಲಿ ಕೇರಿಯ ಎಲ್ಲರಿಗೂ ಕೇಳಿಸುವಂತೆ ಓದುತ್ತಿದ್ದೆ. ಮನೆಯ ಹಿರಿಯರು ಅಷ್ಟು ಗಟ್ಟಿಯಾಗಿ ಯಾಕೆ ಓದುತ್ತೀಯ ಎನ್ನುತ್ತಿದ್ದರು. ಶಾಲೆಯ ಮೇಷ್ಟ್ರುಗಳು ‘ಗಟ್ಟಿಯಾಗಿ ಓದಬಾರದು. ಮನಸ್ಸಿನಲ್ಲೇ ಓದಿಕೊಂಡರೆ ಚೆನ್ನಾಗಿ ಮನನವಾಗುತ್ತೆ’ ಎಂದು ಹೇಳುತ್ತಿದ್ದರು. ಆದರೆ ನಾನು ಇವರಾರ ಮಾತನ್ನೂ ಕೇಳಲಿಲ್ಲ. ಅಲ್ಲಿ ಟಾಗೋರರು ಗಟ್ಟಿಯಾಗಿ ಓದಿ ಮೆಚ್ಚುಗೆ ಪಡೆದಿದ್ದಾರೆ. ಇಲ್ಲಿ ನಾನು ಗಟ್ಟಿಯಾಗಿ ಓದಿ ಮೆಚ್ಚುಗೆ ಪಡೆಯಬೇಕು-ಇದು ನನ್ನ ಇಚ್ಛೆ. ಇದಕ್ಕೆ ಸರಿಯಾಗಿ ಬೆಳಗ್ಗೆ ಎದ್ದಾಗ ನಮ್ಮ ಕೇರಿಯ ಜನ ‘ಮಾಭಾರತದ ಕತೇನ್ ಅದೇಟ್ ಚಂದಾಗ್ ಓದ್ತಾ ಇದ್ದಪ್ಪ, ಬೋಲ್ ಬುದ್ದಿವಂತ ನೀನು’ ಎಂದು ಮೆಚ್ಚುಗೆ ಸೂಚಿಸುತ್ತಿದ್ದರು. ನನಗಿನ್ನೇನು ಬೇಕು? ಇದಕ್ಕಿಂತ ಐಡೆಂಟಿಟಿ ಬೇಕಾ ? ರಾತ್ರಿ ನನ್ನ ದನಿ ಇನ್ನಷ್ಟು ಎತ್ತರವಾಗ್ತಾ ಇತ್ತು. ‘ನಿದ್ದೆ ಬರ್‍ತಿಲ್ಲ ಕಣೋ’ ಅಂತ ಅಪ್ಪನ ಜೋರಿಗೂ ಜಗ್ಗದೆ ಮಾರನೇ ದಿನದ ಮೆಚ್ಚುಗೆಗಾಗಿ ನಾನೂ ಜೋರಾಗಿ ಓದಿದ್ದೇ ಓದಿದ್ದು!
‘ಚಿತ್ರಕಲೆ’ ಕುರಿತ ಮಾತುಗಳು
‘ನನ್ನ ಬಾಲ್ಯ’ ಪುಸ್ತಕವು ನನ್ನ ಬಾಲ್ಯದಲ್ಲಿ ಹೀಗೆಲ್ಲ ‘ಆಟ’ ಆಡಿಸಿದ್ದೇನೊ ಸರಿ. ಇವೆಲ್ಲಕ್ಕೂ ಮುಖ್ಯವಾಗಿ ಸಾಹಿತಿಯಾಗಬೇಕೆಂದು ಪೆನ್ನು ಹಿಡಿಯಲು ಪ್ರೇರಣೆ ಒದಗಿಸಿದ್ದು ಒಂದು ವಿಶೇಷ. ಟಾಗೋರರ ಈ ಪುಸ್ತಕದಲ್ಲಿ ಒಂದು ಪ್ರಸಂಗ ಬರುತ್ತದೆ. ಟಾಗೋರರು ಶಾಲಾ ಬಾಲಕರಾಗಿದ್ದಾಗ ಕೆಲವು ಪದ್ಯಗಳನ್ನು ಗೀಚುತ್ತಾರೆ. ಅವುಗಳನ್ನು ಇತರ ವಿದ್ಯಾರ್ಥಿಗಳ ಎದುರು ಮಾಸ್ತರ ಮುಂದೆ ಓದುತ್ತಾರೆ. ಚಪ್ಪಾಳೆಯ ಮೆಚ್ಚುಗೆ ಪಡೆಯುತ್ತಾರೆ. ನನಗೆ ಅಂತಹ ಮೆಚ್ಚುಗೆ ಸಿಕ್ಕೀತೆ? ಈ ಪ್ರಶ್ನೆ ನನ್ನನ್ನು ಕಾಡಿಸಿತು. ಟಾಗೋರರು ಎಲ್ಲ ಸವಲತ್ತುಗಳ ಸರದಾರರು. ನಾನೆಲ್ಲಿ ಅವರೆಲ್ಲಿ? ಆದರೆ ಪದ್ಯ ಬರೆಯಲು ಸವಲತ್ತುಗಳ ಸರದಾರರೇ ಆಗಬೇಕೆ? ಶ್ರೀಮಂತರೇ ಆಗಬೇಕೆ? ನಮ್ಮೂರಿನ ಸಂದರ್ಭದಲ್ಲಿ ನನ್ನನ್ನು ಇಟ್ಟು ಚಿಂತಿಸಿದೆ. ನಮಗೆ ಇದ್ದದ್ದು ಒಣ ಜಮೀನು, ಸರಿಯಾಗಿ ಮಳೆ ಬಂದರೆ ಸ್ವಲ್ಪ ಸಮೃದ್ಧ ಬೆಳೆ. ಇಲ್ಲದಿದ್ದರೆ ಇಲ್ಲ; ನಮ್ಮ ಮಣ್ಣಿನ ಮನೆಗೆ ತಾರಸಿ ಮನೆಯ ತಾಕತ್ತೂ ಇಲ್ಲ. ಮನೆಯಲ್ಲಿ ಹಣ ತುಂಬಿದ ಪಿಠಾರಿಯೂ ಇಲ್ಲ. ಹಾಗಾದರೆ ಊರಲ್ಲಿ ನಾನು ‘ತಲೆ ಎತ್ತುವುದು’ ಹೇಗೆ? ‘ನಮ್ಮ ಚಂದ್ರಣ್ಣ ಚಂದಾಗ್ ಓದ್ತಾನೆ’ ಅನ್ನೋ ಮೆಚ್ಚುಗೆ ಅಷ್ಟೇ ಸಾಕೆ? ಈ ಮೆಚ್ಚುಗೆ ನಮ್ಮೂರಿಗೆ ಮೀಸಲು. ನಮ್ಮೂರಲ್ಲಿ ಊರಾಚೆಗೂ ಪ್ರಸಿದ್ಧರಾದ ಶ್ರೀಮಂತರು ಕೆಲವರಿದ್ದಾರೆ; ಶಾಸಕರಾಗಿಯೂ ತಾಲ್ಲೂಕಲ್ಲಿ ಹೆಸರು ಮಾಡಿದವರಿದ್ದಾರೆ. ನಾನು ಎಸ್.ಎಸ್.ಎಲ್.ಸಿ.ವರೆಗೆ ಚೆನ್ನಾಗಿ ಓದಿ ಹೆಚ್ಚೆಂದರೆ ಒಬ್ಬ ಒಳ್ಳೇ ಬಸ್‌ಡ್ರೈವರು, ಅಥವಾ ಮೇಷ್ಟ್ರು ಮಾತ್ರ ಆಗಬಹುದು. ಹಾಗಾದರೆ ಜೀವನ ಅಂದ್ರೆ ಇಷ್ಟೇನಾ? ಇವತ್ತು ರವೀಂದ್ರನಾಥ ಟಾಗೋರ್ ಅಂತ ದೇಶ ಪ್ರಸಿದ್ಧವಾಗಿರೊ ಸಾಹಿತಿಯು ಬಾಲ್ಯದಲ್ಲಿ ಬರೆದದ್ದು ಸಣ್ಣಪುಟ್ಟ ಪದ್ಯಾನೇ ತಾನೆ? ಅವರ ಪ್ರಸಿದ್ಧಿಯ ಹಿಂದೆ ಪ್ರತಿಭೆ ಜೊತೆಗೆ ಸಾಮಾಜಿಕವಾಗಿ ಆರ್ಥಿಕವಾಗಿ ಶಕ್ತರಾಗಿರೋದೂ ಬೆಂಬಲಕ್ಕೆ ಇದ್ದಿರಬಹುದು. ಎಲ್ಲಾ ಇದ್ದು ಅವರು ಪ್ರಸಿದ್ಧಿ ಪಡೆದರು. ಏನೂ ಇಲ್ಲದೆ ನಾನು ಪ್ರಸಿದ್ಧಿ ಪಡೆದು ತೋರುಸ್ಬೇಕು. ಎಲ್ಲಾ ಇದ್ದವರಷ್ಟೇ ಪ್ರತಿಭಾವಂತರಲ್ಲ; ಏನೂ ಇಲ್ಲದವರೂ ಪ್ರತಿಭಾವಂತರೇ, ನಾನು ಪ್ರತಿಭಾವಂತ ಅನ್ನಿಸಿಕೊಂಡು ಊರಾಚೆಗೂ ಪ್ರಸಿದ್ಧನಾಗಬೇಕು. ಹಣ, ಆಸ್ತಿ, ಜಾತಿಗಳಿಂದ ಸಿಗದ ಮನ್ನಣೆಯನ್ನು ಅಕ್ಷರ ಶಕ್ತಿಯಿಂದ ಗಳಿಸಬೇಕು – ಹೀಗೆ ಚಿಂತಿಸಿದೆ; ತಳಮಳಿಸಿದೆ; ಹೊಲದ ಬದುವಿನ ಮೇಲೆ ಒಂದೇ ಸಮ ಓಡಾಡಿದೆ. ಚುಚ್ಚಿದ ಮುಳ್ಳುಗಳನ್ನು ಕಿತ್ತು ಹಾಕಿದೆ; ನರಳಿದೆ; ನಿದ್ದೆಗೆಟ್ಟು ಹೊರಳಾಡಿದೆ. ಒಂದು ಬೆಳಗ್ಗೆ ಪೆನ್ನನ್ನು ಕೈಗೆತ್ತಿಕೊಂಡೆ.
ಆಗ ನನ್ನ ಸಹಪಾಠಿಯೊಬ್ಬ ಶಾಲೆ ಬಿಟ್ಟುಹೋಗಿದ್ದ. ಮನೆಯ ಕಡೆ ತೊಂದರೆ; ಐದಾರು ಮೈಲಿ ನಡೆದುಕೊಂಡು ಬಂದು ಓದುತ್ತಿದ್ದ. ಇದ್ದಕ್ಕಿದ್ದಂತೆ ಕೂಲಿನಾಲಿ ಮಾಡಿ ಮನೆಗೆ ಆಸರೆ ಆಗೋಣ ಅಂತ ಶಾಲೆ ಬಿಟ್ಟ. ಆತ ನನ್ನನ್ನು ಕಾಡಿಸುತ್ತಲೇ ಇದ್ದ. ನನಗಿರುವ ಶಾಲೆ ಅವನಿಗಿಲ್ಲವಾಯಿತೆ ಅಂತ ನನಗೆ ತುಂಬಾ ಸಂಕಟವಾಗ್ತಾ ಇತ್ತು. ಅದೇ ವೇಳೆಗೆ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೆ? ಈ ಸಾವು ನ್ಯಾಯವೆ?’ ಎಂಬ ಸಿನಿಮಾ ಹಾಡು ನಮ್ಮ ಹಳ್ಳಿಗಳಲ್ಲಿ ಪ್ರಸಿದ್ಧವಾಗಿತ್ತು. ನಾಟಕಗಳಲ್ಲಿ ಇದನ್ನು ಸಮಯೋಚಿತವಾಗಿ ಅಳವಡಿಸಿಕೊಂಡು ಹಾಡುತ್ತಿದ್ದುದು ಒಂದು ಕಡೆಯಾದರೆ, ಗೆಳೆಯರು ನಾವೆಲ್ಲ ಎಮ್ಮೆ ಮೇಯಿಸಲು ಹೋದಾಗ ಕೆಲವರು ಹಾಡಿ ಆನಂದಿಸುತ್ತಿದ್ದರು. ಈ ಎಲ್ಲ ನೆನಪುಗಳನ್ನು ಒಗ್ಗೂಡಿಸಿ ನಾನು ಬರೆದೇಬಿಟ್ಟೆ : ‘ಈ ಶಾಲೆಯಿಂದ ದೂರನಾದೆ ಏಕೆ ಗೆಳೆಯನೆ? ಈ ನಡೆಯು ನ್ಯಾಯವೆ? ಈ ನಡೆಯು ನ್ಯಾಯವೆ?’ ಎಂದು ಆರಂಭಿಸಿ ಒಂದು ಪದ್ಯ ಬರೆದೆ. ಟಾಗೋರರು ಓದಿದಂತೆಯೇ ನಾನು ಎಲ್ಲರೆದುರು ಓದಬೇಕು ಅನ್ನೊ ಆಸೆ. ಒಂದು ಶನಿವಾರ ಆ ಸಂದರ್ಭ ಬಂದೇಬಿಟ್ಟಿತು. ಶಾಲೆಯ ಮಕ್ಕಳೆಲ್ಲರನ್ನೂ ಒಟ್ಟಿಗೇ ಕೂಡಿಸಿ ಪ್ರತಿ ಶನಿವಾರ ಏನಾದರೊಂದು ಕಾರ್ಯಕ್ರಮ ಮಾಡುವ ಪರಿಪಾಠ ನಮ್ಮೂರ ಶಾಲೆಯಲ್ಲಿತ್ತು. ‘ಈ ಶನಿವಾರ ಆರಂಭದಲ್ಲೇ ನಿನ್ನ ಪದ್ಯ ಓದು’ ಎಂದರು ಮೇಷ್ಟ್ರು. ನಾನು ಧೈರ್ಯ ಮಾಡಿ ಓದಿಬಿಟ್ಟೆ. ಅನಂತರ ಚಪ್ಪಾಳೆಯೋ ಚಪ್ಪಾಳೆ! ಪ್ರತಿಯೊಂದಕ್ಕು ಚಪ್ಪಾಳೆ ತಟ್ಟಬೇಕು ಅಂತ ಮೇಷ್ಟ್ರು ಕಟ್ಟಪ್ಪಣೆ ಮಾಡಿದ್ದ ವಿಷಯ ನನಗೆ ಮರೆತು ಹೋಗಿತ್ತು. ಅದು ನನಗಾಗಿಯೇ ಬಿದ್ದ ಚಪ್ಪಾಳೆ ಅಂತ ಸಂಭ್ರಮಿಸಿದೆ. ಆಮೇಲೆ ನನ್ನ ಸಹಪಾಠಿಗಳು ಕೆಲವರು ನನ್ನನ್ನು ‘ಏನಪ್ಪಾ ಕವಿ’ ಎಂದು ಮಾತಾಡಿಸಿದರು. ನನಗೆ ಹೇಗಾಗಿರಬೇಡ! ಬಾಲಕ ಟಾಗೋರರಿಗಿಂತ ನಾನೇನು ಕಡಿಮೆ! ಆದರೆ ಅಹಂಕಾರ ಪಡಬಾರದು ಅಂತ ಒಳಗೆಲ್ಲೊ ಒಂದು ಸಂತದನಿ ಪಿಸುಗುಟ್ಟಿತು. ಹಸನ್ಮುಖಿಯಾಗಿ ಆನಂದ ಅನುಭವಿಸಿದೆ.
ಮುಂದೆ ಮತ್ತಷ್ಟು ಪದ್ಯಗಳನ್ನು ಬರೆದೆ. ಎಲ್ಲವೂ ಪ್ರಸಿದ್ಧ ಸಿನಿಮಾ ಹಾಡುಗಳ ಧಾಟಿಗೆ ಹೊಂದಿಸಿದ ಪದಗಳಾಗಿದ್ದವು. ಆ ಪದಗಳನ್ನು ಜೋಡಿಸಿ ಪದ್ಯ ಎಂದು ಸಂತೋಷಿಸುತ್ತ ಬಂದೆ. ‘ಟಾಗೋರರೇ ನಾನೂ ನಿಮ್ಮ ಹಾಗೆಯೇ ಗಮನ ಸೆಳೀತಿದ್ದೇನೆ’ ಎಂದು ಒಳಗೇ ಅಂದುಕೊಂಡೆ. ನಾನು ‘ಕವಿ’ ಅಂತ ಊರಲ್ಲಿ ಸುದ್ದಿ ಹಬ್ಬಕೆ ಹೆಚ್ಚು ದಿನ ಬೇಕಾಗಲಿಲ್ಲ. ನಮ್ಮ ಮೇಷ್ಟ್ರು ಮತ್ತು ಕೆಲವು ಸಹಪಾಠಿಗಳು ಈ ವಿಷಯಾನ ಅವರಿವರಲ್ಲಿ ಹೇಳಿದರು. ಊರವರ ದೃಷ್ಟಿ ಬದಲಾಗತೊಡಗಿತು. ಊರವರದೇನು, ನನ್ನ ದೃಷ್ಟಿಯೂ ಬದಲಾಗತೊಡಗಿತು. ಎಲ್ಲಿ ಹೋದರೂ ಕೈಯ್ಯಲ್ಲೊಂದು ನೋಟ್ ಪುಸ್ತಕ ಮತ್ತು ಪೆನ್ನು, ಹೊಲದ ಕಡೆ ಹೋದಾಗ ಬದುವಿನ ಮೇಲೆ ಕೂತು ಆಕಾಶ ನೋಡಿ ಯೋಚಿಸಿದ್ದೇ ಯೋಚಿಸಿದ್ದು, ಬರೆದದ್ದೇ ಬರೆದದ್ದು, ಗಟ್ಟಿಯಾಗಿ ಓದಿದ್ದೇ ಓದಿದ್ದು, ಆಮೇಲೆ ಒಂದು ದಿನ ಪ್ರಶ್ನೆ ಎದ್ದಿತು; ‘ದೊಡ್ಡ ಕವಿಯಾಗಲು ಟಾಗೋರರಂತೆ ಗಡ್ಡ ಬಿಡಬೇಕಾ?’ ಬೇಡ; ಟಾಗೋರರಿಗೆ ಇದ್ದದ್ದೆಲ್ಲ ನನಗಿಲ್ಲ. ಆದ್ದರಿಂದ ಗಡ್ಡವೂ ಬೇಡ – ಎಂದು ತೀರ್ಮಾನಿಸಿದೆ. ಅವತ್ತಿನಿಂದ ಇವತ್ತಿನವರೆಗೂ ಅದನ್ನು ಪರಿಪಾಲಿಸುತ್ತಾ ಬಂದಿದ್ದೇನೆ. ನವ್ಯಕವಿಗಳ ರೀತಿಯಲ್ಲೂ ನಾನು ಗಡ್ಡ ಬಿಡಲಿಲ್ಲ; ಬಿಡಿ.
ಒಟ್ಟಿನಲ್ಲಿ ನಾನು ಬಾಲ್ಯದಲ್ಲೇ ಬರಗೂರಿನ ‘ಮಹಾ ಕವಿ’ಯಾದೆ. ಆದರೆ ವ್ಯಾಸಂಗಕ್ಕಾಗಿ ತುಮಕೂರಿಗೆ ಬಂದಾಗ ನನಗೆ ಗೊತ್ತಾಯಿತು ನಾನು ಕವಿಗಳ ಕ್ಯೂನಲ್ಲಿ ಹಿಂದಿದ್ದೇನೆ ಅಂತ. ಬೆಂಗಳೂರಿಗೆ ಬಂದಾಗಲಂತೂ ಕ್ಯೂ ತುಂಬಾ ಉದ್ದ ಇರೋದನ್ನು ನೋಡಿ ದಿಗ್ಭ್ರಾಂತನಾದೆ. ಆದರೆ ಎಂದಿನಂತೆ ಧೃತಿಗೆಡಲಿಲ್ಲ. ಅವರಿವರನ್ನು ತಳ್ಳಿ ಕ್ಯೂನಲ್ಲಿ ಮುಂದೆ ಬರೋನು ಕವಿಯಲ್ಲ ಅಂತ ಅರಿವಿದ್ದದ್ದರಿಂದ ನನ್ನೊಳಗೆ ನಾನೇ ನೋಡ್ಕೊಂಡೆ. ಬೇರೆ ಬೇರೆ ಕೃತಿಗಳ ಒಳಗೆ ನೋಡ್ದೆ. ಯಾವುದೊ ಕ್ಯೂನಲ್ಲಿ ಯಾರದೊ ಕ್ಯೂನಲ್ಲಿ ನಿಂತೇ ಇರೋ ಬದಲು ನಾನೇ ಕ್ಯೂ ಆದ್ರೆ ಹೇಗೆ? ಆತ್ಮಾವಲೋಕನ ಮಾಡ್ಕೊಂಡೆ. ಕವಿಗಳಿಗೆ ಕ್ಯೂ ಆದ್ರೂ ಯಾಕೆ ಬೇಕು? ಲೇಖಕರಿಗೆ ಆತ್ಮ-ಅವಲೋಕನ ಎರಡು ಇದ್ರೆ ಸಾಕು. ಆಗ ನಾನಷ್ಟೇ ಮುಖ್ಯ ಆಗೊಲ್ಲ. ನಾನು ಬದುಕ್ತಾ ಇರೊ ಸಮಾಜ ಮುಖ್ಯ ಆಗುತ್ತೆ. ಸಮಾಜದೊಳಗೆ ನಾನು; ನನ್ನೊಳಗೆ ಸಮಾಜ. ಪರಸ್ಪರ ಕೈಹಿಡಿದು ಸಾಗಿದೆ ಬದುಕು, ಬರಹ.
*****
೨೦೧೧