ಹೀಗೆ ಕೇಳಿದವನು ನನ್ನ ಅಳಿಯ ರಾಘು. ಎಸ್.ಎಸ್.ಎಲ್.ಸಿ. ಯಲ್ಲಿ ಫೇಲಾಗುತ್ತಾನೋ ಅಂತ ನಾವೆಲ್ಲಾ ಆತಂಕದಲ್ಲಿದ್ದಾಗಲೇ ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಮಾಡಿ ಎಲ್ಲರ ಕಂಗಳಲ್ಲಿ ಅಚ್ಚರಿ ಮೂಡಿಸಿದೆ ಈ ಹುಡುಗನಿಗೆ ಕಾಲೇಜ್ ಸೇರುವ ಕಾತರ. ಕಾಲೇಜು ಎಂದರೆ ಅದೆಂತದೋ ಆಕರ್ಷಣೆ, ಸಿನಿಮಾಗಳಲ್ಲಿನ ಕಾಲೇಜು, ಅಲ್ಲಿನ ಬಫೂನ್ ಮಾದರಿ ಲಕ್ಚರರ್‌ಗಳು, ತುಂಡು ಲಂಗದ ಹುಡುಗಿಯರು ಅವರ ಬೆನ್ನತ್ತಿ ಕಾಂಪಸ್ಸಲ್ಲೇ ತಕಥೈ ಕುಣಿವ ಪಡ್ಡೆ ಹುಡುಗರ ಹಿಂಡು, ಪ್ರಿನ್ಸಿಪಾಲರನ್ನೇ ‘ಕ್ಯಾರೇ’ ಅನ್ನದೆ ಕಾಲೇಜ್ ಕಾರಿಡಾರಲ್ಲಿ ಅಟ್ಟಾಡಿಸಿ ಕೊಂಡು ಹೊಡೆದಾಡುವ, ತಮ್ಮ ಲಾಬೋರೇಟರಿ ಲೈಬ್ರರಿಗಳನ್ನೇ ಚಿಂದಿ ಉಡಾಯಿಸುವ ಪುಂಡರು. ಕ್ಯಾಂಪಸ್ ಕಾಂಟಿನ್ ನಲ್ಲೇ ಹುಡುಗಿಯರನ್ನು ಚುಡಾಯಿಸುತ್ತಾ ಲಲ್ಲೆ ಹೊಡೆವ ಹುಡುಗರು. ಒಟ್ಟಿನಲ್ಲಿ ಓದುವುದು ಒಂದನ್ನು ಬಿಟ್ಟು ಹೊಳೆದಂಡೆಯಲ್ಲಿ ಪ್ರೇಮ, ಕಾಮ ಅಂತ ಡ್ಯೂಯೆಟ್ ಹಾಡಿ ಗುಂಪಿನೊಂದಿಗೆ ಕುಣಿದು ಕುಪ್ಪಳಿಸುವ ಕಾಲೇಜು ಹುಡುಗರ ಮೋಜು! ಅವರುಗಳ ರೌಡಿಯಿಸಂನೇ ಹೀರೋಯಿಸಂನಂತೆ ಚಿತ್ರಿಸುವ ಇಂದಿನ ರಿಮೇಕ್ ಸಿನೆಮಾಗಳನ್ನು ನೋಡುವ ಯಾವುದೇ ಹುಡುಗ/ಹುಡುಗಿಯರ ಮನಸ್ಸಿನಲ್ಲಿ ಕಾಲೇಜಿನ ಬಗ್ಗೆ ವಿಕೃತ ಚಿತ್ರಣ ಮೂಡಿ ಮನದಲ್ಲಿ ಮೇಲಿನಂತಹ ಪ್ರಶ್ನೆ ಎದ್ದರೆ ಅಚ್ಚರಿಯೇನಿಲ್ಲ ಬಿಡಿ.
ಕೀಳರಿಮೆ
ಕೆಲವರಿಗೇನೋ ಇದೇ ಆಕರ್ಷಣೆಯಾದರೆ ಪುಕ್ಕಲು ಹುಡುಗಿಯರಿಗೆ ಕಾಲೇಜು ಸೇರಲು ಒಳಗೇ ಭಯ, ಬೈಕು, ಕಾರುಗಳಲ್ಲಿ ಬರುವ ಮಾಡ್ ಡ್ರೆಸ್ ತೊಡುವ, ಸಿಗರೇಟ್ ಎಳೆವ, ಪೆಪ್ಸಿ ಕುಡಿವ, ಪಿಕ್ನಿಕ್ ಗೆ ಹೊರಡುವ ಹುಡುಗ ಹುಡುಗಿಯರ ದುಂದುವೆಚ್ಚ, ಹುಡುಗಾಟ ಇವುಗಳನ್ನು ನೋಡುವಾಗ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಾವೆಲ್ಲಿ, ಕಾಲೇಜಲ್ಲಿ? ಎಂಬಷ್ಟು ಕೀಳರಿಮೆ ಮೂಡುವುದು ಸಹಜ. ನಿರಾಸೆಯಲ್ಲೇ ಕಾಲೇಜು ಸೇರುತ್ತಾರೆ. ಸೇರಿದ ಮೇಲೆ ತಿಳಿಯುತ್ತದೆ, ಮನಸ್ಸಿಟ್ಟು ಓದಿದರೆ ಮಾತ್ರ ಕಾಲೇಜಲ್ಲಿ ಮುಂದುವರಿಯಲು ಸಾಧ್ಯ. ಗುರುಗಳಿಂದಲೂ ಹೆಚ್ಚು ಗೌರವ, ಮರ್ಯಾದೆ ಲಭ್ಯ, ‘ಜೀವನದ ಭವಿಷ್ಯ ಕಾಲೇಜುಗಳಲ್ಲೇ ನಿರ್ಧಾರ’ವಾಗುವುದರಿಂದ ಕಷ್ಟಪಟ್ಟು ಓದದಿದ್ದರೆ ಹಾವು ಕಡಿದ ಬೆರಳೇ ಮೋಟು ಎಂಬಂತೆ ಮುಂದಿನ ವಿದ್ಯಾಭಾಸಕ್ಕೇ ಕತ್ತರಿ ಬೀಳುತ್ತದೆ. ಇದನ್ನು ಅರಿತವರು ಉದ್ಧಾರ. ಅರಿಯದವರು ನಿರುದ್ಯೋಗಿಗಳಾಗಿ ಬೀದಿ ಪಾಲಾಗುತ್ತಾರೆ ಅಷ್ಟೆ.
ಖಂಡಿತವಾಗಿಯೂ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲಿ ಕಾಲೇಜುಗಳಾಗಲಿ, ಲೆಕ್ಚರರ್‌ಗಳಾಗಲಿ ಇರುವುದಿಲ್ಲ – ನಿಮ್ಮಾಣೆ. ಲೆಕ್ಚರರ್‌ಗಳ ಗತ್ತುಗಾರಿಕೆ, ಪಾಠ ಮಾಡುವ ವೈಖರಿ, ಅವರ ಸೂಟುಬೂಟು ಅಧ್ಯಯನ ವಾಗ್ಜರಿಗೆ ಹೈಸ್ಕೂಲಿನಿಂದ ಕಾಲೇಜು ಮೆಟ್ಟಿಲು ಏರಿದ ಹುಡುಗ, ಹುಡುಗಿಯರು ತಬ್ಬಿಬ್ಬು ಆಗೋದೇ ಹೆಚ್ಚು. ಎಲ್ಲಾ ಇಂಗ್ಲೀಷ್‌ನಲ್ಲಿ ಬೋಧಿಸುವಾಗ ಕನ್ನಡ ಮೀಡಿಯಂನಲ್ಲಿ ಓದಿದವರ ಪಾಡಂತೂ ಚಿಂತಾಜನಕ, ಇಂಗ್ಲೀಷ್ ನಲ್ಲಿ ಮಾತಾಡುವವರನ್ನು ಕಂಡರೇನೇ ಹಿಂಜರಿಕೆ, ಜೊತೆಗೆ ಪ್ರಾಕ್ಟಿಕಲ್ ಹಾಲ್ಗಳು, ಪ್ರಾಕ್ಟಿಕಲ್ಸ್ ತಯಾರಿ, ಅರ್ಥವೇ ಆಗದ ಫಿಸಿಕ್ಸ್, ತಳಬುಡ ತಿಳಿಯದ ಮ್ಯಾಥ್ಸ್, ತಲೆಗೇರದ ಕೆಮಿಸ್ಟ್ರಿ ಅದರ ಈಕ್ವೆಷನ್ಸ್, ತಲೆಗಿಳಿಯದೆ ತಲೆ ತಿನ್ನವ ಇಂಗ್ಲೀಷು, ಬಾಟನಿ, ಜುವಾಲಗಿ ಇತ್ಯಾದಿ… ಸೈನ್ಸ್‌ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಂತೂ ಅನಾಥ ಪ್ರಜ್ಞೆ ಮೂಡಿಸುವುದೇ ಹೆಚ್ಚು.
ನಗೆ ಪಾಟಲು
ಇಲ್ಲಿನ ಮೇಷ್ಟ್ರುಗಳು (ಅದರಲ್ಲೂ ಕನ್ನಡ) ಪಂಚೆಯುಟ್ಟ ಕೋಟು ತೊಟ್ಟ, ತಲೆಗೆ ಪೇಟ ಇಟ್ಟು (ಹಿಂದಿನ ನಟ ಬಾಲಕೃಷ್ಣ, ಹನುಂತಾಚಾರ್ ಮಾದರಿ) ಬಂದು ಪೆಚ್ಚು ಪೆಚ್ಚಾಗಿ ನಶ್ಯ ಏರಿಸತ್ತಾ ದುಷ್ಯಂತ ಶಕುಂತಲೆಯರ ಪಾಠ ಮಾಡೋದಿಲ್ಲ ಅಥವಾ ಈಗಿನ ಸಿನೆಮಾಗಳ ಪರ್ಮನೆಂಟ್ ಕಾಲೇಜ್ ಮೇಷ್ಟ್ರು ನಟ ಕಾಶಿಯಂತೆ ಹುಡುಗರಿಗೆ ಅಂಜಿ ತಿಕ್ಕಲನಂತಾಡುತ್ತ ತಾವೇ ನಗೆಪಾಟಲು ಆಗುವವರೂ ಅಲ್ಲ. ಸಿನಿಮಾ ಎಂದೂ ಜೀವನ ಆಗುವುದಿಲ್ಲ ತಿಳಿಯಿರಿ. ಉದಾಹರಣೆಗೆ ಒಂದು ದೃಶ್ಯ ‘ನೀವು ಸತ್ತ ಮೇಲೂ ನಿಮ್ಮ ಹೆಸರು ಉಳಿಯಬೇಕೆಂದರೆ ಏನು ಮಾಡಬೇಕಯ್ಯಾ?’ ಚಲನಚಿತ್ರ ಒಂದರ ಲೆಕ್ಚರರ್‌ನ ಪ್ರಶ್ನೆ, ‘ಊರೆಲ್ಲಾ ಸಾಲ ಮಾಡಬೇಕು ಸಾ’ ವಿದ್ಯಾರ್ಥಿಯ ಉತ್ತರ. ಕ್ಲಾಸ್ ರೂಮಲ್ಲಿ ನಗೆಯೋ ನಗೆ. ಕಾಲೇಜ್ ಮೇಡಂ ನೋಡಿ, ‘ಬ್ಯಾಕ್ ಸೈಡ್ ಬ್ಯೂಟಿ’ ಅನ್ನುವ ಪಡ್ಡೆಗಳು ಬ್ಯಾಕಲ್ಲಿ ಫುಲ್ಲು ಫ್ರಂಟಲ್ಲಿ ನಿಲ್ಲು ಎಂದಾಗ ಎಲ್ಲೋ ನಿಲ್ಲುವ ಕ್ಯಾಮೆರಾ!
ಕ್ಲಾಸ್ ರೂಮಲ್ಲಿ ಮೇಷ್ಟ್ರುಗಳ ಎದುರೇ ಓಪನ್ ಕ್ಲಾಸಲ್ಲಿ ‘ಐ ಲವ್ ಯು’ ಎಂದು ತಾನು ಮೆಚ್ಚಿದ ಹುಡುಗಿಗೆ ಒದರಿ ಹೇಳುವ ಹೀರೋ, ಕಣ್ ಕಣ್ ಬಿಡುವ ಮೇಷ್ಟ್ರು, ಏಕವಚನದಲ್ಲಿ ಕರೆಸಿಕೊಂಡೂ ಹಲ್ಲು ಗಿಂಜುವ ಆತನ ಸ್ಥಿತಿ ನೋಡಿದರೆ ಕಾಲೇಜ್ ವಿದ್ಯಾಭಾಸದ ಬಗ್ಗೆ ಸಿನಿಮಾದವರಿಗಿರುವ ಅಜ್ಞಾನ ಎಷ್ಟೆಂದು ಗೊತ್ತಾಗಿ ಬಿಡುತ್ತದೆ. ಕಾಲೇಜು ದೃಶ್ಯ ಎಂದೊಡನೆ ಕನ್ನಡ ಮೇಷ್ಟ್ರೇ ಆಗಬೇಕು, ದುಷ್ಯಂತ ಶಕುಂತಲೆಯರ ಪಾಠವೇ ಮಾಡಬೇಕು. ಮೇಷ್ಟ್ರನ್ನು ಅಪಮಾನಗೊಳಿಸಿ ಮಜಾ ತೊಗೋಬೇಕು. ಇದೆಲ್ಲಾ ಸಿನಿಮಾದವರ ಸೂತ್ರ (ಫಾರ್ಮಲ) ಬಿಡಿ. ಪ್ರೇಕ್ಷಕರನ್ನು ನಗಿಸಲು ಅವರುಗಳು ಏನೆಲ್ಲಾ ಕಸರತ್ತು ಮಾಡಬೇಕೋ ಅಷ್ಟೂ ಮಾಡುತ್ತಾರೆ. ಅಲ್ಲಿಬ್ಬರು ಪ್ರೇಮಿಗಳು ಅವರುಗಳನ್ನು ವಿರೋಧಿಸುವ ರೌಡಿ ಗ್ಯಾಂಗ್ ಹುಟ್ಟಿಕೊಳ್ಳದಿದ್ದರಂತೂ ಸಿನಿಮಾ ಆಗುವುದೆಂತು?
ನಿಜ ಜೀವನದಲ್ಲಿ ಲವ್ವು, ಮೋಜು, ರೌಡಿಸಂ ಇರುವುದೇ ಇಲ್ಲ ಎಂದಲ್ಲ. ಆದರೆ ಅದೇ ಕಾಲೇಜಲ್ಲಿ… ನೆನಪಿಡಿ ಫ್ರೆಂಡ್ಸ್, ಕಾಲೇಜ್, ಕ್ಯಾಂಪಸ್‌ಗಳಲ್ಲಿ ಹೇಸರಗತ್ತೆಗಳಂತೆ ಕುಣಿವ ಹುಡುಗರ ಹಿಂಡು ಬರೀ ಸಿನಿಮಾ ಕಲ್ಪನೆ ಮಾತ್ರ, ಹುಡುಗಿಯರೂ ಹಾಗೆ ಲವ್ ಮಾಡಲೆಂದೇ ಬಂದವರಲ್ಲ. ಕಾಲೇಜ್ ಹುಡುಗಿಯರೆಂದರೆ ಬಿಟ್ಟಿ ಸಿಗೋರಲ್ಲ. ಓದಿನಲ್ಲಂತೂ ಅವರು ಯಾವತ್ತೂ ಹುಡುಗರಿಗಿಂತ ಮುಂದು ಎಂಬುದು ನಿರ್ವಿವಾದ. ಹುಡುಗರನ್ನು ಹೇಗೆ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬುದನ್ನು ಅರಿಯದಷ್ಟು ಉಪನ್ಯಾಸಕರುಗಳೂ ಪ್ಯಾದೆಗಳಲ್ಲ. ಸೈನ್ಸ್ ಹುಡುಗರಂತೂ ಬಾಲ ಬಿಚ್ಚುವಂತಿಲ್ಲ… “ಐ ವಿಲ್ ಕಟ್ ಆಫ್ ಮಾರ್ಕ್ಸ್ ಇನ್ ದಿ ಪ್ರಾಕ್ಟಿಕಲ್ ಎಕ್ಸಾಮಿನೇಶನ್.. ಬಿ ಕೇರ್ ಫುಲ್” ಎಂಬ ಮಂತ್ರಪಠಣೆಯೇ ಉಪನ್ಯಸಕರ ರಕ್ಷಾ ಕವಚ, ಕಾಲೇಜು ಮೇಷ್ಟ್ರು ನಿಮ್ಮಾಣೆಗೂ ಸರ್ಕಸ್ ಬಫೂನ್‌ಗಳಲ್ಲಾರೀ… ಸಿನಿಮಾಗಳನ್ನು ನೋಡಿ ನಕ್ಕು ಮರೆತು ಬಿಡಿ ಫ್ರೆಂಡ್ಸ್, ಆ ದೃಶ್ಯಗಳನ್ನೇ ಕಾಲೇಜಲ್ಲೂ ಪ್ರಯೋಗ ಮಾಡ ಹೊರಟಿರೋ ಅಪಹಾಸ್ಯಕ್ಕೆ ಗುರಿಯಾಗುತ್ತೀರಿ. ಕಾಲೇಜೆಂದರೆ ದೇವಾಲಯಕ್ಕಿಂತಲೂ ಪವಿತ್ರ ಎಂದು ಭಾವಿಸಿ ಓದಿನ ಕಡೆ ಗಮನವಿಡಿ. ನೀವು ದೊಡ್ಡ ಮನುಷ್ಯರಾಗದೆ ಇರಬಹುದು, ಕನಿಷ್ಟ ನೀವು ಓದಿದ ಕಾಲೇಜಲ್ಲೇ ಉಪನ್ಯಾಸಕರಾಗುವ ಮಟ್ಟ ಮುಟ್ಟಿದರೂ ಸುಖೀ ಜೀವನ, ಸಮಾಜದಲ್ಲಿನ ಗಣ್ಯರ ಸಾಲಿನಲ್ಲಿ ನಿಮಗೊಂದು ಸ್ಥಾನಮಾನ ಭೇಷರತ್ ಲಭ್ಯ. ಕಾಲೇಜಲ್ಲಿ ಮೇಷ್ಟ್ರಗಳಿಗೆ ಅಪಮಾನಿಸಿ ಬೀಗುವವನು ಹುಡುಗಿಯರ್‍ನ ಫಾಲೋ ಮಾಡುವವನು ತನ್ನನ್ನು ತಾನೇ ಕಾಲೇಜ್ ಹೀರೋ ಎಂದು ಭ್ರಮಿಸುತ್ತಾನೆ. ಅದಕ್ಕೆ ತಾಳ ಹೊಡೆವ ಮಸಾಲ್ ದೋಸೆ ಫ್ರೆಂಡ್ಸ್ ಇದ್ದರಂತೂ ಅವನ ಅಹಂ ನೆತ್ತಿಗೇರುತ್ತದೆ. ಇಂತಹ ಸಿರಿವಂತರ ಗ್ಯಾಂಗ್ ನಿಂದ ದೂರ ಇದ್ದುಬಿಡಿ. ಕಾಲೇಜ್ ಹೀರೋ ಪಟ್ಟವಾದರೂ ಅದೆಷ್ಟು ವರ್ಷ? ನಿಜ ಜೀವನದಲ್ಲಿ ಹೀರೋಗಳಾಗಲು ಶ್ರಮಿಸಬೇಕು. ಜೀವನವೆಂಬುದು ಕಾಲೇಜಿಗಿಂತ ಕಠಿಣ, ಸುದೀರ್ಘ. ಗೆಳೆಯರೆ ಅಸಲಿಗೆ ‘ಹೀರೋ’ ಅಂದ್ರೇನು ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ.
ನಿಜವಾದ ಹೀರೋಗಳು
ನಿಜವಾದ ಹೀರೋಸ್ ದೇಶದ ಸಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ, ವಲ್ಲಭಬಾಯ್ ಪಟೇಲ್, ಶಾಂತಿ ಅಹಿಂಸೆಗಾಗಿ ಜೀವನವನ್ನೇ ಸವೆಸಿದ ಬುದ್ಧ, ಭಗವಾನ್, ಸಮಾನತೆ ಜಾತಿರಹಿತ ಸಮಾಜ ನಿರ್ಮಾಣ ಮಾಡಲು ದಿಟ್ಟತನ ತೋರಿದ ಬಸವಣ್ಣ, ದಲಿತರ ಹಕ್ಕಿಗಾಗಿ ಹೋರಾಟ ನಡೆಸಿ ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರಿಯಲ್ ಹೀರೋಗಳು, ಅನ್ನ ನೀಡೊ ರೈತ, ದೇಶವನ್ನು ಕಾಪಾಡೋ ಸೈನಿಕ ಗ್ರೇಟ್ ಹೀರೋಸ್. ಇಂಥೋರ ಸಾಲಿನಲ್ಲಿ ಸೇರಲು ನಮ್ಮ ಯುವಕರು ಶ್ರಮಿಸಬೇಕು. ಆಗಲಾದರೂ ದೇಶ ಸುಧಾರಣೆ ಕಂಡಿತು. ಅಪ್ಪ ಅಮ್ಮ ದುಡಿದ ದುಡ್ಡಿನಲ್ಲಿ ಕಲರ್ ಬಟ್ಟೆ ಹಾಕಿ ಸಿಗರೇಟ್ ಸೇದುತ್ತಾ ಬೈಕ್‌ಗಳಲ್ಲಿ ಅಲೆಯುತ್ತ ಮೊಬೈಲು ಹಿಡಿದು ಗೊಣಗುತ್ತ ಹುಡುಗಿಯರನ್ನು ಕೀಟಲೆ ಮಾಡೋ ಮೋಜುಗಾರ ಹೀರೋ ಅಲ್ಲ ಹಿಪೋಕ್ರೈಟ್ಸ್, ಸ್ಯಾಡಿಸ್ಟ್‌ಗಳು. ಇಂಥವರ ಬಗ್ಗೆ ಎಚ್ಚರವಿರಲಿ. ನಿಮ್ಮ ತಂದೆ ತಾಯಿಗಳು ನಿಮ್ಮಿಂದ ನಿರೀಕ್ಷಿಸುವುದಾದರೂ ಏನು? ಒಳ್ಳೆ ಮಾರ್ಕ್ಸ್. ಎಲ್ಲರೂ ಡಾಕ್ಟರ್, ಎಂಜಿನೀಯರ್‌ಗಳೇ ಆಗಬೇಕೆಂದೇನಿಲ್ಲ. ಅಮೆರಿಕ ಲಂಡನ್’ಗಳಿಗೆ ಹೋಗಿ ದುಡಿದು ತರಲೇಬೇಕೆಂಬ ದುರಾಸೆಬೇಡ. ಕಾಲ ಬದಲಾಗಿದೆ. ಎಲ್ಲರೂ ಕಂಪ್ಯೂಟರ್ ಸೈನ್ಸ್ ಓದಲೇ ಬೇಕಿಲ್ಲ. ಅದರ ಮುಂದೆ ಮೂರು ಹೊತ್ತೂ ಕೂತು ಹುಚ್ಚರಾಗಬೇಕಿಲ್ಲ. ಮುಂದೆ ನೀವೇನು ಆಗಬೇಕು ಅಂತಿದ್ದೀರ ಪಾಪ? ಅಂತ ಮಕ್ಕಳನ್ನು ಕೇಳಿದರೂ ; ಡಾಕ್ಟರ್, ಎಂಜಿನೀಯರ್ ಅಂತವೆಯೇ ಹೊರತು ಯಾರೊಬ್ಬರೂ ಅನ್ನದಾತ ರೈತ, ದೇಶಕಾಯೋ ಸಿಪಾಯಿ ಆಗ್ತೀನಿ ಅನ್ನೋದೇ ಇಲ್ಲ! ಡಾಕ್ಟರ್ ಎಂಜಿನೀಯರ್ ಗಳಾದರೆ ಮಾತ್ರ ಸುಖೀ ಜೀವನ ಸಾಧ್ಯವೆಂಬ ಭ್ರಮೆಗೆ ಬಲಿಯಾಗಿ ಮಕ್ಕಳನ್ನು ಆ ಬಲೆಗೆ ದೂಡುತ್ತಾರೆ. ಹೀಗಾದರೆ ಮಾತ್ರ ಹೆಚ್ಚು ಲಂಚ ಹೊಡೆದು ವರದಕ್ಷಿಣೆ ಗಿಟ್ಟಿಸಬಹುದೆಂಬ ಅನಿಷ್ಟ ಆಸೆ. ಇಂತಹ ಆಸೆಗಳಿಗೆ ಕೊನೆಯೆಲ್ಲಿ?
ಮೋಜಿನ ತಾಣ
ನಾವು ಓದೋ ಕಾಲದಲ್ಲಿ ಟಿ.ವಿ. ಇರಲಿಲ್ಲ. ಲೈವ್ ಬ್ಯಾಂಡ್ಗಳಾಗಲಿ ಬಾರ್, ಪಬ್ಬು, ಕ್ಲಬ್ಬು, ಮೊಬೈಲು, ಕಂಪ್ಯೂಟರ್ ಗಳು ಇರಲೇ ಇಲ್ಲ. ಆದರೆ ಈಗಿನ ಹುಡುಗರ ಸುತ್ತಾ ಈ ಮಾಯಾಜಾಲ ಸುತುತ್ತಿರುವಾಗ ಇವುಗಳಿಂದ ಪಾರಾಗಿ ನಮ್ಮ ವಿದ್ಯಾರ್ಥಿಗಳು ಓದಿನ ಕಡೆ ಮನಸ್ಸನ್ನು ಕೇಂದ್ರೀಕರಿಸುವುದು ದುಃಸಾಧ್ಯ. ಈವತ್ತು ಪಾಸ್ ಆದರೆ ಫೇಲೇ. ಹೆಚ್ಚೆಂದರೆ ಮುಂದಿನ ಕ್ಲಾಸಿಗೆ ಪರ್ಮಿಶನ್ ಸಿಗಬಹುದಷ್ಟೆ. ಕನಿಷ್ಟ ೮೫% ಆದರೂ ಮಾರ್ಕ್ಸ್ ತೆಗೆದುಕೊಳ್ಳದಿದ್ದವನು/ಳು ಏನೇ ಓದಿದರೂ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತೆ. ಇಂಥವರಿಗೆ ಉದ್ಯೋಗವೂ ಕನ್ನಡಿ ಗಂಟು. ಆದುದರಿಮದ ಮೈಡಿಯರ್ ಸ್ಟೂಡೆಂಟ್ಸ್, ಕಾಲೇಜ್ ಎಂದರೆ ಮೋಜಿನ ತಾಣವಲ್ಲ ದೇವರಾಣೆಗೂ ರೌಡಿ ಅಡ್ಡೆಯಲ್ಲ ಹುಡುಗಿಯರ ಅಂತಃಪುರವಂತೂ ಅಲ್ಲವೇ ಅಲ್ಲ. ಕಾಲೇಜ್ ಒಂದು ದೇವಾಲಯ. ಅಲ್ಲಿ ನಿಮಗೆ ಸಿಗುವ ‘ವಿದ್ಯೆ’ ಇದೆಯಲ್ಲ ಅದನ್ನು ಕದಿಯಲಾಗದ್ದು ಅದು ಕಳೆದು ಹೋಗದಂತಹ ಅಪೂರ್ವ ನಿಧಿ. ಅದರ ಸಂಪಾದನೆಯೇ ನಿಮ್ಮ ಗುರಿಯಾಗಲಿ. ಯಾವಾಗಲೂ ದೊಡ್ಡ ದೊಡ್ಡ ಕನಸುಗಳನ್ನು ಕಾಣಿರಿ. ಆ ಕನಸುಗಳನ್ನು ನನಸು ಮಾಡಿಕೊಳ್ಳುವ ಶಕ್ತಿ ಮತ್ತೆಲ್ಲೂ ಇಲ್ಲ. ನಿಮ್ಮಲ್ಲೇ ಇದೆ ಜಾಗೃತರಾಗಿ, ಯಾವಾಗಲೂ ಶಾಶ್ವತವಾಗಿ ಸಿಗುವ ಸುಖ – ಸಂತೋಷಗಳತ್ತ ಗುರಿಯಿಟ್ಟು ಪರಿಶ್ರಮಿಸಿ ಅರ್ಥಾತ್ ಈಗ ಓದುವುದೇ ನಿಮ್ಮ ಪರಮ ಗುರಿಯಾಗಿರಲೆಂದು ಆಶಿಸುತ್ತೇನೆ ಗೆಳೆಯರೆ. ಚೆನ್ನಾಗಿ ಓದಿ ದೊಡ್ಡವರಾಗಿ ಹೆತ್ತವರಿಗೆ ಗುರುಗಳಿಗೆ ಹುಟ್ಟಿದ ಊರಿಗೆ ಕೀರ್ತಿ ತನ್ನಿ. ಸಿನಿಮಾಕ್ಕೆ ಹೊಡೀರಿ ಗೋಲಿ ಏನಂತೀರಾ?
*****