ಜೀವನದಲ್ಲಿ ಕೇವಲ
ಹಸಿವು, ನೋವುಂಡು
ಬೆಳೆದವಳು ಆಶಾಬೀ.
ಹಸಿವಿನ ಕ್ರೂರ ಕೂಗನ್ನು
ಕೇಳಲಾರದೇ ಒಂದು ದಿನ
ತನ್ನೆರಡು ಹಸಳೆಗಳೊಡನೆ
ನೀರಿನ ಪಾಲಾದಳು.
ಆದರೆ, ಸಾವು ವಿಚಿತ್ರ.
ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ.
ತನ್ನ ಕರುಳ ಕುಡಿಗಳ
ಕತ್ತನ್ನು ಹಿಸುಕಿದ ಅವಳು
ಕೊನೆಗೂ ಬದುಕಿಕೊಂಡಳು,
ಆದರೆ, ಕಾನೂನಿನ ಕ್ರೂರ
ಕೈಗಳಿಗೆ ಸಿಲುಕಿ
ನಲುಗಿ ಹೋದಳು.
ಜೈಲಿನ ಕಂಬಿಗಳ ಹಿಂದೆ
ಕ್ರೂರವಾದ ಬದುಕು
ಕತ್ತಲ ಕೋಣೆಯಲ್ಲಿ
ನಿರ್ವಾಹವಿಲ್ಲದೇ
ದಿನ ನೂಕುತ್ತಿದ್ದಳು.
ಸಾಯಲು ಕಾನೂನು
ಸಮ್ಮತಿಸುತ್ತಿಲ್ಲ.
– ಬದುಕಲು ಅವಳಿಗೆ ಇಷ್ಟವಿಲ್ಲ.
ಬಡತನದ ಬೇಗೆಯಲಿ
ಬೆಂದು ಹೋದ ಆಶಾಬಿಯ
ಎರಡು ಆಶೆಯ ಕುಡಿಗಳೂ
ಈಗ ಕಮರಿ ಹೋಗಿದ್ದವು.
ಬದುಕಲು ಮನಸ್ಸು ಒಪ್ಪದು
ಸಾಯಲು ಕಾನೂನು ಬಿಡದು
ಅಸಹಾಯಕತೆಯ ನಿಟ್ಟುಸಿರು
ಅವಳನ್ನು ಸುಟ್ಟು ಬಿಡುತ್ತಿತ್ತು.
ಮುದ್ದು ಕಂದಂಮ್ಮಗಳ ನೆನಪು
ಅವಳ ಕರುಳನ್ನು ಕೊರೆಯುತ್ತಿತ್ತು.
ಪುಟ್ಟ ಕಂದಮ್ಮಗಳ
ಕಪಟವರಿಯದ
ಮುದ್ದು ಮುಖಗಳ ನೆನಪು
ರಕ್ತ ಹೆಪ್ಪುಗಟ್ಟಿಸುತ್ತದೆ.
ಕಣುಗಳೂ ಸದಾ ಹಸಿ ಹಸಿ.
ಆದರೆ ಮರುಕ್ಷಣವೇ ಅವಳ ಕೈಗಳು
ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ತನ್ನನ್ನು ಈ ಸ್ಥಿತಿಗೆ ದೂಡಿದ
ನಾಚಿಕೆಯಿಲ್ಲದ ವ್ಯವಸ್ಥೆಯ
ವಿರುದ್ಧ ಹೋರಾಡಲು
ತನ್ನ ನಿರಪರಾಧಿ ಕೂಸುಗಳಿಗೆ
ನ್ಯಾಯ ದೊರಕಿಸಿ ಕೊಡಲು
ಅವರ ಹಸಿವನ್ನು ನೀಗಿಸಲು.
*****