ಭಾರತ ಮಾತೆಯೇ
ನಿನ್ನ ಕರುಳ ಕುಡಿಗಳು
ನಿನ್ನದೇ ಮಾಂಸ
ಹಂಚಿಕೊಂಡಿರುವ
ತುಣುಕುಗಳನು
ಬೆಂಕಿಗೆ ದೂಡಿ,
ಸತಿಯಾಗಿಸುವದ ಕಂಡು
ಸುಮ್ಮನೇಕಿರುವೆ?
ಪತಿಸತ್ತರೆ ಸತಿ
ಚಿತೆಯೇರಬೇಕು
ಬದುಕಿರುವಾಗಲೇ
ಬದುಕನ್ನು ಜಿವುಟಿ
ಕರಕಾಗಿಸಿದ ಗಂಡು
ಸತ್ತ ಮೇಲೂ ಅವಳ
ಬೆನ್ನು ಬಿಡಲಿಲ್ಲ
ಬದುಕಗೊಡಲಿಲ್ಲ ಮಾತೆ?
ನಿನ್ನ ಸತಿಯಾಗಿಸಿ,
ಚಿತೆಯೇರಿಸಿ,
ದೇವಿಯಪಟ್ಟ ಕಟ್ಟಿ
ನಿನ್ನ ಸಮಾಧಿಯಮೇಲೆ
ಹೆಣಭಾರದ ಕಲ್ಲನ್ನಿಟ್ಟು
ಪೂಜೆಗೈವರು ಇವರು
ಹೊಟ್ಟೆ ಹೊರೆವರಿವರು.
ಪುರಿಯ ಜಗದ್ಗುರು
ಸತಿ ಧರ್ಮ – ಶಾಸ್ತ್ರಗಳ
ಮರೆಯಲ್ಲಿ
ಕನ್ವರಳ ಕತ್ತು ಹಿಸುಕಿದರು.
ಪತಿಗೆ ಧರ್ಮವಿಲ್ಲ –
ಸತಿಗೆ ಚಿತೆಯೇರಲು
ಬೋಧಿಸುವ ಇವರನು
ಸುಟ್ಟು ಬಿಡು ಕನ್ವರ.
ನಿನ್ನ ಕೊಂದವರ ಕತ್ತುಗಳಿಗೆ
ಕರಗಸವಾಗಿ ಕೊರೆಯುತ್ತ
ನಿನ್ನ ಕನಸುಗಳನು
ವಾಸ್ತವಕ್ಕಿಳಿಸಲು
ಮತ್ತೇ ಹುಟ್ಟಿ ಬಾ ಕನ್ವರ,
ಹೋರಾಟದ ಸಂಕೇತವಾಗಿ
ನಿಲ್ಲು ಬಾ ಕನ್ವರ.
ಆಗ ಮುಂಬರು ಪೀಳಿಗೆ
ಮಾಸ್ತಿಗಲ್ಲುಗಳ ಅರ್ಥ
ಹುಡುಕಿ ನೋಡುತ್ತಾರೆ,
ಧರ್ಮಲಂಡರ ಬಂಡವಾಳ
ಬೀದಿಗೆಳೆಯುತ್ತಾರೆ.
ನಿನ್ನ ಬದುಕನ್ನೇ ನುಂಗಿದ
ಅವರ ಧರ್ಮ ಶಾಸ್ತ್ರಗಳಿಗೆ
ಬೆಂಕಿಯಿಡುತ್ತಾರೆ.
ವಿಜಯದ ಕಹಳೆ ಊದುತ್ತಾರೆ.
ಏಕೆಂದರೆ ಅವರೀಗ
ಮನುಷ್ಯರಾಗಿದ್ದಾರೆ.
*****