ನಾನು ಹೆಣ್ಣಾದೆ
ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ
ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು.
ಸುತ್ತ ನಾಲ್ಕು ಕಡೆ
ಹಲ್ಲು ಬಾಯಿ ಹುಟ್ಟಿ ಕೊಂಡವು
ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು.
ತೆಪ್ಪಗಿರದ ಜನ
ಅನುಕಂಪದ ಸೋಗಿನಲ್ಲಿ
ಚುಚ್ಚಿ, ಚುಚ್ಚಿ ತೃಪ್ತಿ ಪಟ್ಟರು
ನನ್ನನ್ನು ನಾನೇ ನೋಡಿ ಕೊಂಡರೆ
ಜಿಗುಪ್ಸೆಯಾಗುತ್ತಿತ್ತು
ನನಗಾಗಿ ಅಪ್ಪ, ಅಮ್ಮ ಬೀಳೋ ಕಸ್ಟ ನೋಡಿದಾಗ
ತುಂಬಾ ಕೆಟ್ಟದ್ದೆನಿಸುತ್ತಿತ್ತು.
ಆಗ ನನಗೆ ಒಳ್ಳೆ ವಯಸ್ಸು
ಅದು ಒಳಗೇ ನಡೆಸಿತ್ತು ತನ್ನ ಕರಾಮತ್ತು
ಇಷ್ಟೇ ಅಂತ ಹೇಳೋಕಾಗದ ಆಸೆಯಗತ್ತು
ಬದುಕಿರ ಬೇಕಾದ ಪಾಪಕ್ಕಾಗಿ ಒಂದ ಸುಟ್ಟುಕೊಳ್ಳಬೇಕಾಯಿತು.
ಅಂತೂ ಇಂತೂ ಒಂದು ಸಂಬಂಧ ಕುದುರಿತು
ಮದುವೆ ನಿಶ್ಚಯವೂ ಆಯಿತು
ಕಾದಿದ್ದಕ್ಕೆ ನಿರಾಶೆ ಆಗಲಿಲ್ಲ
ಒಳ್ಳೆ ಗಂಡನೇ ಸಿಕ್ಕಿದರು
ಹೊಸ ಪರಿಸರ, ಹೊಸ ಜೀವನ ಆನಂದದಾಯಕವಾಯಿತು
ಕಣ್ಣಿಟ್ಟರು ಕರುಬುವವರು
ಸ್ನೇಹಭಾವದ ಹುಸಿ ದಿಟ ತಿಳಿಯೋದಕ್ಕೆ ಬಿಡಲಿಲ್ಲ
ಜೊತೆಗೆ
ಹೊಗಳಿಕೆ ನಿಗಿ ನಿಗಿ ಉರಿಯೋ ಕೆಂಡದಂತೆ
ಯಾವಾಗಲೂ ಅದನ್ನು ಒಂದು ಅಂತರದಲ್ಲಿ ಇಟ್ಟಿರಬೇಕು
ಯಾಮರೆತರೆ ಸುಡುತ್ತದೆಂಬುದು ಗೊತ್ತಾಗಲಿಲ್ಲ.
ಆದಗ ಇದಗ ಅನ್ನೋದರೊಳಗೆ
ಉಂಡು ನಲಿದರು
ಪ್ರಪಾತದ ತಳ ಕಾಣಿಸಿದರು.
ಹೆದರಿಸಿದರು
ಬಾಯಿ ಬಿಟ್ಟರೆ ಬಣ್ಣಗೆಡುವುದೆಂದರು
ಹಬ್ಬವನ್ನಾಚರಿಸಿದರು.
ಸುದ್ದಿಗೆ ಮಟ್ಟಿ ಕಟ್ಟ ಬಹುದೆ?
ಹಬ್ಬಿ ಬಿಟ್ಟಿತು
ಹೊರ ತಬ್ಬಿದರು
ಪತಿತಳೆಂದ ಕೂಡಿದವರು
ಕೆಟ್ಟವಳೆಂದು ಹೆತ್ತವರು
ಆಸೆ ತೀರಿದಮೇಲೆ ಇನ್ಯಾಕೆ ಅದರ ಉಸಾಬರಿಯೆಂದು ಕೆಡಿಸಿದವರು
ಇಲ್ಲಿಗೆ ಮುಗಿಯಲಿಲ್ಲ ನನ್ನ ಕಥೆ, ವ್ಯಥೆ
ನಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದೆ
ನಾನೊಬ್ಬ ಹೊಸ ಮನುಷ್ಯಳಾಗಿ ಬದುಕಲು
ಯಾರೂ ಬಿಡಲೇ ಇಲ್ಲ.
ತಪ್ಪು ಮಂದಿಟ್ಟು ಕೊಂಡು ಬಂದರು
ಗಣಿಕೆ ಮಾಡಿದರು
ಬಯಲಿಗೆ ಬಿದ್ದ ನನಗೂ ಅದು ಅನಿವಾರ್ಯವಾಯಿತು
ಕೆರೆಗೂ ಮನೆಗೂ ಇರುವ ಸಾಮಾನ್ಯ ಹಾದಿಯಂತಾದೆ.
ನನ್ನದು ಪಾಪ!
ನಾನು ಬದುಕಿರುವುದು ಪಾಪ!
ನಾನೊಂದು ಸಮಾಜದ ದೊಡ್ಡ ಶಾಪ
ನಿಜ!! ಹೇಳಿ
ನಾನು ಯಾರ ಪಾಪ?
*****