ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ
ಯಾವುದೊಂದು ಆಗಿದ್ದ೦ಗೀಗಿಲ್ಲ
ಎಲ್ಲಾ ಬದಲಾಗಿ ಬಿಟ್ಟಿದೆ,
ಯಾರಿದ್ದಾರೆ ಆಗಿನವರು?
ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ
ಆಗಿದ್ದಂಗೆ ಯಾರಿದ್ದಾರೆ ಈಗ ?
ನಗ ನಗ್ತಾ ಕರೆದು ಮಾತಾಡೋರಿಲ್ಲ
ಹರ್ಷೋಲ್ಲಾಸ ತೋರುವರಿಲ್ಲ
ಮನೆಯಲ್ಲೂ ಕೂಡಾ ಅಷ್ಟೆ ಆಗಿದೆ
ಅಪ್ಪ, ಅಮ್ಮನಿಗೆ ವಯಸ್ಸಾಗಿ, ಶಕ್ತಿ, ಧ್ವನಿ ಉಡುಗಿಹೋಗಿ
ಚಲಾವಣೆಯ ಕಳೆದು ಕೊಂಡಿಹರು
ಮಾಡಿದ್ದು ಉಣ್ಣಬೇಕು, ಬಾಯ್ಮುಚ್ಚಿಕೊಂಡಿರಬೇಕು
ನಾನೇನಾದರೂ ಊರಿಗೆ ಹೋದರೆ
ಒಂದೇ ಸಮನೆ ಹೊಟ್ಟೆ ಸುಟ್ಟುಕೊಳ್ಳುವರು
ಇಲ್ಲೊಂದು ನನ್ಮನೆ ಇದೆಯೆಂದು ಆಮಗಾ
ಊರಿಂದ ಬಂದರೆ
ಇವರು ನೋಡಲ್ಲ ಮಾಡಲ್ಲ’ ಎಂದು
ಹೀಗಿರುವಾಗ ಮೇಲಿಂದ ಮೇಲೆ ನಾನ್ಯಾಕೆ ಹೋಗಿ
ಅವರ ಗಾಯದ ಮೇಲೆ ಬರೆ ಎಳೆದು ಬರಬೇಕು.
ನನಗೆ ಅವರ ಒಂದು ಕೊರಗಾಗಿ ಬಿಟ್ಟಿದೆ
ಹೋದರೆ ಒಂದು.. ಹೋಗದಿದ್ದರೆ ಇನ್ನೊಂದು
ಹೋಗಿ ಬಂದು ಮಾಡದೆ ಇದ್ದರೆ
ಎಲ್ಲರೂ ದೂರಾಗಿ ಬಿಟ್ಟರುಯೆಂದು ನೊಂದು ಕೊಳ್ಳುವರು.
ಈಗ ಅಣ್ಣ ಅತ್ತಿಗೆದೇ ಎಲ್ಲಾ ಕಾರುಬಾರು
ಅವರೆಲ್ಲಾ ಗಮನ ತಮ್ಮ ತಮ್ಮ ಮಕ್ಕಳ ಕಡೆಗೆ
ಹೊಸದಾಗಿ ಬೆಳೆದಂತ ಸಂಬಂಧದ ಕಡೆಗೆ
ಅಣ್ಣ ತಮ್ಮಂದಿರು ಒಂದಾಗಿ ಇದ್ದವರು ಬೇರೆ ಆಗಿದ್ದಾರೆ
ಒಬ್ಬರ ಮುಖ ಒಬ್ಬರಿಗಿಲ್ಲ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗಲ್ಲ
ಸಣ್ಣದ್ದು, ಪುಟ್ಟದ್ದಕ್ಕೆ… ಕಡಿದಾಟ, ಬಡಿದಾಟ
ರಕ್ತ ಸಂಬಂಧದ ಅರ್ಥವನ್ನೇ ಕೆಡಿಸಿಹರು.
ನೆಟ್ಟ ನೇರನೆ ಒಂದೇ ಒಂದು ಮಾತಿಲ್ಲ
ಬಾಯಿ ಬಿಟ್ಟರೆ ಸಾಕು ಬರಿಕೊಂಕು ಡೊಂಕು
ತಮ್ಮ ತಮ್ಮದೆ ಅವರಿಗೆ ದೊಡ್ಡದಾಗಿ ಬಿಟ್ಟಿಹದು
ಹೋದರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತಾಡುವುದಿಲ್ಲ
ಒಳ್ಳೆದೊಂದು ಮಾತಿಲ್ಲ ಕತೆಯಿಲ್ಲ
ಬಂದವಳೆ ಅಂದರೆ ಯಾಕಂತೆ? ಅನ್ನದಾಗ
ಹೋಗೋದರಲ್ಲೇನಾದರೂ ಆರ್ಥ ವಿದೆಯಾ!
*****