ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ
ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ||
ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ
ದಾರ್‍ಯಾಗ ಸುಳಿಸುತ್ತಿ ಕುಂತೈತೆ
ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ
ಮೋಸಕ್ಕ ಥಟಥಾಟು ಥೇಟೈತೆ ||೧||
ಗೆಜ್ಜಿ ಕಾಲಿನ ವಜ್ಜಿ ಹಗುರಾಗಿ ಹೇರಣ್ಣಿ
ಮಂಚಕ್ಕ ಬಾರಣ್ಣಿ ಗುರೆಣ್ಣಿ
ಗುರೆಳ್ಳು ಕತ್ಲಾಗ ಕಂಚೀನ ಸರಪಾವು
ಮಿಂಚೈತಿ ಮಿನುಗೈತಿ ಬಾರಣ್ಣಿ ||೨||
ತೊಡಿಸಿಕ್ರ ತೊಡಿತುಂಬ ಉಡಿಸಿಕ್ರ ಉಡಿತುಂಬ
ಮುಡಿಸಿಕ್ರ ಮುಡಿತುಂಬ ಏರೈತೆ
ಕಚ್ಚೀದ ವಿಷದಾಗ ವಿಷಗುಂಟ ಏರೈತೆ
ನೆತ್ತ್ಯಾಗ ವಸ್ತೀಯ ಮಾಡೈತೆ ||೩||
ಹಾವ್ಗಾರ ನಾಗ್ರಲ್ಲಾ ಜಾತ್ಗಾರ ಸರಪಲ್ಲ
ಚರುಮದ ಮುಚ್ಚುಳಾ ಹಾರ್‍ಸೈತೆ
ಎಲುಬೆಲ್ಲ ಕರಗೈತೆ ಹೊಟ್ಟೆಲ್ಲ ಇಂಗೈತೆ
ಕಣ್ಣೊಳಗ ಕಣ್ಣೂ ಬೆಳಗೈತೆ ||೪||
ಹೆಣ್ಹಾವು ಕಚ್ಚಂಬ್ಲಿ ಗಿಣಿಮಾವು ಬಿಚ್ಚಂಬ್ಲಿ
ಗಿಡದಾಗ ಪಡಿಚಿಕ್ಕಿ ನಕ್ಕಾವೆ
ಕಚ್ಗೊಂಡು ಕುಚ್ಗೊಂಡು ನುಚ್ಗೊಂಡು ಹೆಣವಾದೆ
ಚಿಕ್ಯಾಗ ಚಿಗರೆಲ್ಲಾ ಆಡ್ಯಾವೆ ||೫||
*****
ಕಾಳಿಂಗ=ಕುಂಡಲಿನಿ ಸರ್ಪ; ಕತ್ಲ=ಮಾಯಾ ಕತ್ತಲೆ