ಹಾಳು ಬೀದಿ ಬಸದಿಯಲಿ
ಗೋಳು ಕ್ಷಯ ಹಿಡಿದ
ಬಾಳಿಗೆ ದೊಂಗಾಲು ಬಿದ್ದು
ಕ್ರಿಮಿಗಳೋಪಾದಿ ಕೊಳೆವ
ನರ ನಾರಾಯಣರ ಬಾಳು
ಬಾಳೆ? ನೋಡಿರೈ ಅವರ
ಜೀವಂತ ಮರಣ
ಗುರಿರಹಿತ ಪಯಣ
ಉದಾಸೀನ ನಯನ, ನಿಶ್ಯಕ್ತ ಹರಣ
ಜೀವನದ ಅಲೆದಾಟ
ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ
ಹರಕಲು ಗೇಹ
ಬಡಕಲು ದೇಹ
ನರಕ ಅದು, ಅಲ್ಲಿಲ್ಲ ನೇಹ!
ಹದಿಬದೆಯ ವ್ಯಾಪಾರ
ಅದರೊಳಗು ತಕರಾರ
ಕುಲ ಲಜ್ಜೆಗಳ ಮಾರಿ ತಾಯ್ತನದ ವ್ಯಭಿಚಾರ –
ಒಣದಾದ ತುಟಿಯಲ್ಲಿ
ಹಿರಿದಾದ ಮೇಲುನಗೆ
ತೆಳ್ಳನೆಯ ಉಸಿರು
ಬಡತನದ ಹೊಗೆ-ಧಗೆ
ಕಣ್ಣು ಕಾಂತಿ ಹೀನ
ಬಯಕೆಗಳ ಬಹುಬಗೆ –
ಗಿರಿಣಿಗಳ ಎಡೆಯಲ್ಲಿ
ಜಜ್ಜಿರುವ ನರರು
ಮೈರುಧಿರ ಬೆವರೆಂದು
ಸುರಿಸುವರು ಅವರು
ಅವರ ಸುಖ-ಅಳು
ಅದಕ್ಕೆಲ್ಲ ಹೆರರು –
ದಣಿದ ದೇಹಕೆ ಸುಖದ ಮೋಹ
ಉಸ್ಸೆನಲು ಓಡುವುದು ಗುಡಿಯೆಡೆಗೆ
ಬಹುದೂರ ಮನೆ
ಉದ್ದ ದಾರಿ ಅದಕಿಲ್ಲ ಕೊನೆ
ಮನದ ಕಿರುಕುಳ-ತಾಪ
ಮನೆಯಲ್ಲ ಅದು ಒಂದು ಕೂಪ
ಬರಿಹೊಟ್ಟೆ ಅರೆನಗ್ನ
ಅರೆಜೀವ ಕೂಸು
ನೂರು ಬಣ್ಣವ ಬಳಿಯೆ
ಕೈಲಿಲ್ಲ ಕಾಸು
ಕಂದಿ ಕಮರಿದ ಎಳೆ ಜೀವಗಳ
ಮೇಲೆ ನಾಡು ಕಟ್ಟಿಹದು ಕನಸು!
ವಯೋವೃದ್ದ ಹೆಗಲಲ್ಲಿ
ಬಡತನದ ಭಾರ
ನೆರೆಬಿದ್ದ ಹಣೆಯಲ್ಲಿ
ವಿವಶತೆಯ ಸಾರ
ನಿಡಿದುಸಿರ ಎಡೆಯಲ್ಲಿ
ಸಾವೆಷ್ಟು ದೂರ!
ಬರೆ ಎಳೆದ ಕಾಯ
ನರ-ನಾಡಿ ಗಾಯ
ತಿಕ್ಕಾಟ ಮನದಲ್ಲಿ
ಕದಡಿರುವ ಧ್ಯೇಯ
ಜಗವಲ್ಲ, ಇದು ಒಂದು
ವಿಧಿ ಬಗೆದ ಹೇಯ!
ಯೌವನಕೆ ಬೆಲೆಯಿಲ್ಲ
ಬರಿದೆ ಹೋಹುದು ತಡವರಿಸಿ
ಬವಣೆಯಲಿ ಬದುಕೆಲ್ಲ
ಬೆಳಕು-ಇದೆ ಸತ್ಯ-ಇದೆ
ಪುಲಿಯ ಬಳಿಯಲಿ ಹಸುವಂತೆ
ಶೌರ್‍ಯ ಸಹನೆಯ ಬಲವಿಲ್ಲ
ಬಲಹೀನ ಕೈಯಿಂದ
ಕಾತರದ ಕಣ್ಣಿಂದ
ಛಲಹೀನ ಒಲವನ್ನು
ಆತುರದ ಸೆಳವಿಂದ
ಬಯಸುತಿದೆ ಹಸುಗೂಸು
ದಯಾದಾನಿವರರಿಂದ…..
ಅರೆ! ದೂರಿದ್ದವರೆ,
ಬಳಿ ಬಂದು ನೋಡಿ
ನಿರ್ಜಿವ ನರರಿಂಗೆ
ಜೀವದಾನವ ಮಾಡಿ
ಉಳಿಸೋಣ ನಾಡನ್ನು
ನಾವೆಲ್ಲ ಕೂಡಿ…..!
*****